ಕೇಂದ್ರ ಸರ್ಕಾರಕ್ಕೆ ನಟ ನೀನಾಸಂ ಸತೀಶ್ ಟಾಂಗ್

Public TV
1 Min Read
ninanasam sathish

ಬೆಂಗಳೂರು: ನಟ ಸತೀಶ್ ನೀನಾಸಂ ನೆರೆ ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ಟಾಂಗ್ ನೀಡಿದ್ದಾರೆ.

ನೀನಾಸಂ ಸತೀಶ್ ಅವರು ತಮ್ಮ ಟ್ವಿಟ್ಟರಿನಲ್ಲಿ, “ನಾನು ನಿಮ್ಮ ಯಾವ ಪಕ್ಷದವನೂ ಅಲ್ಲ, ನನ್ನದು ಮನುಷ್ಯ ಪಕ್ಷ, ಬಡವರ ಪಕ್ಷ, ಹಸಿದವರ ಪಕ್ಷ. ಯಾವ ಸರ್ಕಾರವಾದರೂ ಕೇಳುವ ಹಕ್ಕು ನನಗಿದೆ. ನೆರೆ ಸಂತ್ರಸ್ತರ ವಿಚಾರದಲ್ಲಿ ನಿಮ್ಮ ಪಕ್ಷಗಳನ್ನು ಬದಿಗಿಟ್ಟು, ಅವರ ಕಷ್ಟಗಳಿಗೆ ಎಲ್ಲರು ಒಗ್ಗಟ್ಟಾಗಿ ಕೆಲಸ ಮಾಡುವ ಬುದ್ಧಿ ಬರಲಿ. ದಯಮಾಡಿ ನನ್ನನ್ನು ನಿಮ್ಮ ಯಾವ ಪಕ್ಷಕ್ಕೂ ಸೇರಿಸಬೇಡಿ ಪ್ಲೀಸ್” ಎಂದು ಟ್ವೀಟ್ ಮಾಡಿದ್ದಾರೆ.

ಇತ್ತೀಚೆಗೆ ಚಿಂತಕ ಸೂಲಿಬೆಲೆ ಅವರು ಕೂಡ ತಮ್ಮ ಯುವಲೈವ್ ವೆಬ್‍ಸೈಟಿನಲ್ಲಿ ಬರಹ ಪ್ರಕಟಿಸಿದ್ದರು. ಅದರಲ್ಲಿ, ನಿಜ ಹೇಳಬೇಕೆಂದರೆ ಪ್ರವಾಹದ ನಂತರವೇ ಬೆಂಗಳೂರಿನ ಸಂಸದ ಅನಂತ್ ಕುಮಾರ್ ಅವರ ಅನುಪಸ್ಥಿತಿ ಎದ್ದು ಕಾಣುತ್ತಿರುವುದು. ಕೇಂದ್ರ ಸರ್ಕಾರದಲ್ಲಿ ಕರ್ನಾಟಕದ ದನಿಯನ್ನು ಪ್ರಭಾವಿಯಾಗಿ ಮಂಡಿಸಬಲ್ಲ ಸಂಸದರೇ ಇಲ್ಲವೇನೋ ಎನಿಸುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಕರ್ನಾಟಕದ ಒಳಿತಿಗಾಗಿ ಕೇಂದ್ರದೊಂದಿಗೆ ಗುದ್ದಾಡಿ ಬೇಕಾದ್ದನ್ನು ಪಡೆದುಕೊಂಡು ಬರಬಲ್ಲ ಸಾಮರ್ಥ್ಯ ಯಾವ ಸಂಸದರಿಗೂ ಇಲ್ಲವಲ್ಲ ಎಂಬುದೇ ದುಃಖದ ಸಂಗತಿ. ಮತ್ತು ಇವರು ಒಬ್ಬಿಬ್ಬರಲ್ಲ, ಬರೋಬ್ಬರಿ 25 ಜನ. ಇನ್ನುಳಿದ ಮೂವರಲ್ಲಿ ಒಬ್ಬರು ಈಗ ತಾನೇ ಸಂಸತ್ತು ಪ್ರವೇಶಿಸಿರುವ ಸುಮಲತಾ ಆದರೆ ಪ್ರಜ್ವಲ್ ಅವರದ್ದೂ ಹೆಚ್ಚು ಕಡಿಮೆ ಅದೇ ಸ್ಥಾನ. ಇವರುಗಳಿಗೆ ಸಂಸತ್ತಿನ ಕಾರ್ಯವೈಖರಿಯ ಅರಿವಾಗುವುದರೊಳಗೆ ಅದರ ಕಾರ್ಯ ಅವಧಿ ಮುಗಿದು ಹೋಗಿರುತ್ತದೆ. ಕಾಂಗ್ರೆಸ್ಸಿನ ಒಬ್ಬೇ ಒಬ್ಬ ಸಂಸದ ಅಣ್ಣನನ್ನು ಬಿಡಿಸಿಕೊಂಡು ಬರುವುದರಲ್ಲಿ ತಿಪ್ಪರಲಾಗ ಹಾಕುತ್ತಿದ್ದಾರೆ. ಹೀಗಾಗಿ ಕರ್ನಾಟಕದ ಪರವಾಗಿ, ಕನ್ನಡದ ಪರವಾಗಿ ಸಮರ್ಥವಾಗಿ ದನಿ ಎತ್ತಬಲ್ಲವರೇ ಇಲ್ಲವಾಗಿಬಿಟ್ಟಿದ್ದಾರೆ ಎಂದು ಹೇಳಿದ್ದರು.

Share This Article
Leave a Comment

Leave a Reply

Your email address will not be published. Required fields are marked *