ರಸಗೊಬ್ಬರಕ್ಕಾಗಿ ಹಗಲು ರಾತ್ರಿ ಕ್ಯೂನಲ್ಲಿ ನಿಲ್ಲುತ್ತಿರುವ ರೈತರು

Public TV
2 Min Read
ckb gobbara

-ಗೊಬ್ಬರದ ಅಭಾವದಿಂದ ರೈತರ ಸುಲಿಗೆಗೆ ನಿಂತ ವಿತರಕರು

ಚಿಕ್ಕಬಳ್ಳಾಪುರ: ಇತ್ತೀಚೆಗೆ ಮಳೆಯಾದ ಪರಿಣಾಮ ಬಯಲು ಸೀಮೆ ಭಾಗದ ಕೆಲವು ಜಿಲ್ಲೆಗಳಲ್ಲಿ ಒಣಗಿ ಹೋಗುತ್ತಿದ್ದ ಬೆಳೆಗಳು ನಳನಳಿಸುತ್ತಿವೆ. ಇರೋ ಬೆಳೆಯ ಉತ್ತಮ ಫಸಲು ಪಡೆಯಲು ಮುಂದಾಗಿರುವ ರೈತರು, ಮಳೆ ನಿಂತ ಮೇಲೆ ಗೊಬ್ಬರ ಹಾಕಲು ಯೂರಿಯಾ ಮೊರೆ ಹೋಗಿದ್ದು, ಯೂರಿಯಾಗೆ ಈಗ ಎಲ್ಲಿಲ್ಲದ ಡಿಮ್ಯಾಂಡ್ ಹೆಚ್ಚಾಗಿದೆ.

ckb gobbara 3

ಇದರಿಂದ ಚಿಕ್ಕಬಳ್ಳಾಪುರದಲ್ಲಿ ರೈತರು ದಿನವಿಡೀ ಸರದಿ ಸಾಲಿನಲ್ಲಿ ನಿಂತು ಮೂಟೆ ಗೊಬ್ಬರ ಪಡೆಯೋಕೆ ಕಷ್ಟಪಡುತ್ತಿದ್ದಾರೆ. ಸರದಿ ಸಾಲಿನಲ್ಲಿ ನಿಂತು ನನಗೂ ಒಂದು ಮೂಟೆ ಯೂರಿಯಾ ಗೊಬ್ಬರ ಕೊಡಿ ಸ್ವಾಮಿ ಎಂದು ರೈತರು, ಅಧಿಕಾರಿಗಳ ಬಳಿ ಮನವಿ ಮಾಡುತ್ತಿದ್ದಾರೆ. ಕಳೆದ ವಾರ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿದ ಕಾರಣ ಬಿತ್ತನೆ ಮಾಡಿದ ರಾಗಿ, ಜೋಳ, ತೊಗರಿ, ಶೇಂಗಾ ಬೆಳೆಗಳು ನಳನಳಿಸುತ್ತಿವೆ. ಇದರಿಂದ ಉತ್ತಮ ಫಸಲು ಪಡೆಯಲು ಮುಂದಾಗಿರುವ ರೈತರು, ಯೂರಿಯಾ ಗೊಬ್ಬರದ ಮೊರೆ ಹೋಗಿದ್ದಾರೆ.

ckb gobbara 2

ಆದರೆ ಯೂರಿಯಾ ಗೊಬ್ಬರದ ಅಭಾವ ಇದ್ದು, ಹತ್ತು ಮೂಟೆ ಗೊಬ್ಬರ ಬೇಕಾಗಿದ್ದರೆ ಸಹಕಾರ ಸಂಘದ ಕಚೇರಿಗಳಲ್ಲಿ ಒಂದೊ ಎರಡೊ ಮೂಟೆ ಗೊಬ್ಬರ ಮಾತ್ರ ಕೊಡುತ್ತಿದ್ದಾರೆ. ಅದಕ್ಕೂ ದಿನವಿಡಿ ಸರದಿ ಸಾಲಿನಲ್ಲಿ ನಿಂತು ಗೊಬ್ಬರ ಪಡೆಯಬೇಕಾದ ಪರಿಸ್ಥಿತಿ ಎದುರಾಗಿದೆ.

ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಯೂರಿಯಾ ಗೊಬ್ಬರ ವಿತರಣೆ ಮಾಡಲು ಹಾಪ್ ಕಾಮ್ಸ್‍ಗೆ ಅನುಮತಿ ನೀಡಲಾಗಿದೆ. ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘ ಅವಶ್ಯಕತೆಗೆ ಅನುಗುಣವಾಗಿ ಗೊಬ್ಬರ ತರಿಸಿ ಅದನ್ನು ಹಾಪ್ ಕಾಮ್ಸ್ ಹಾಗೂ ವಿಎಸ್‍ಎಸ್‍ಎನ್ ಸಹಕಾರ ಸಂಘಗಳಿಗೆ ನೀಡುತ್ತಾರೆ. ಹಾಪ್ ಕಾಮ್ಸ್ ಹಾಗೂ ವಿಎಸ್‍ಎಸ್‍ಎನ್ ರೈತರಿಗೆ ಗೊಬ್ಬರ ವಿತರಣೆ ಮಾಡುತ್ತಾರೆ. ಆದರೆ ಇವರು 266 ರೂಪಾಯಿ ಬೆಲೆ ಇರುವ ಗೊಬ್ಬರವನ್ನು, 270 ರೂಪಾಯಿ ಜೊತೆಗೆ ಹತ್ತು ರೂಪಾಯಿ ಕೂಲಿ ಸೇರಿಸಿ 280 ರೂಪಾಯಿಗೆ ರೈತರಿಗೆ ಗೊಬ್ಬರ ಮಾರಾಟ ಮಾಡುತ್ತಿದ್ದಾರೆ. ಹೀಗೆ ಕೆಲವರು ರೈತರಿಂದ ಹೆಚ್ಚಿಗೆ ಹಣ ವಸೂಲಿ ಮಾಡುತ್ತಿದ್ದಾರೆ ಅನ್ನೊ ಆರೋಪ ಕೂಡ ಕೇಳಿ ಬರುತ್ತಿದೆ.

ckb gobbara 1

ಇಷ್ಟು ದಿನ ಗೊಬ್ಬರ ಕೇಳೋರಿರಲಿಲ್ಲ. ಆದರೆ ಈಗ ಇದ್ದಕ್ಕಿದ್ದ ಹಾಗೆ ಮಳೆರಾಯ ಕರುಣೆ ತೋರಿದ ಕಾರಣ ಬೆಳೆಗಳು ಹಚ್ಚ ಹಸಿರಿನಿಂದ ಕಂಗೊಳಿಸುತ್ತಿವೆ. ಭೂಮಿ ಹಸಿಯಾಗಿರುವಾಗಲೇ ಗೊಬ್ಬರ ಹಾಕಬೇಕಾದ ಕಾರಣ ಎಲ್ಲಾ ರೈತರು ಒಂದೇ ಸಮಯದಲ್ಲಿ ಗೊಬ್ಬರಕ್ಕೆ ಬೇಡಿಕೆ ಇಟ್ಟಿದ್ದಾರೆ. ಆದರೆ ರೈತರಿಗೆ ಬೆಳೆಗಳಿಗೆ ಬೇಕಾದಷ್ಟು ಗೊಬ್ಬರ ದೊರೆಯದೆ ರೈತರು ಪರದಾಡುತ್ತಿದ್ದಾರೆ. ಮಳೆ ಇಲ್ಲದಿದ್ದರೆ ಬೆಳೆ ಹಾಳು, ಮಳೆ ಬಂದರೆ ಈ ಪಾಡು ಎಂದು ರೈತರು ಕಂಗಾಲಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *