ರಮ್ಯಾಗೆ ಗೇಟ್‍ಪಾಸ್ – ಮೋದಿ ಮಣಿಸಲು ಗುಜರಾತಿನ ವ್ಯಕ್ತಿಗೆ ಮಣೆ

Public TV
5 Min Read
ramya rohan gupta

ನವದೆಹಲಿ: ಎಐಸಿಸಿ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ ಹುದ್ದೆಯಿಂದ   ಮಾಜಿ ಸಂಸದೆ ಹಾಗೂ ಚಿತ್ರನಟಿ ರಮ್ಯಾ ಅವರಿಗೆ ಅಧಿಕೃತವಾಗಿ ಗೇಟ್ ಪಾಸ್ ನೀಡಲಾಗಿದೆ.

ಲೋಕಸಭಾ ಚುನಾವಣೆಯ ಪಕ್ಷ ಹೀನಾಯವಾಗಿ ಸೋತ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದ ಜವಾಬ್ದಾರಿ ನೀಡಲು ಕಾಂಗ್ರೆಸ್ ಹೈಕಮಾಂಡ್ ಹೊಸ ತಂಡಕ್ಕೆ ಮಣೆ ಹಾಕಿದೆ. ಈ ಸಂಬಂಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ರೋಹನ್ ಗುಪ್ತಾ ಅವರನ್ನು ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥರನ್ನಾಗಿ ಮಾಡಲಾಗಿದೆ ಎಂದು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿ ತಿಳಿಸಿದ್ದಾರೆ.

ರಾಷ್ಟ್ರೀಯ ಮಾಧ್ಯಮ ಸಂಯೋಜಕರಾಗಿರುವ ರೋಹನ್ ಗುಪ್ತಾ ಗುಜರಾತಿನ ಅಹಮದಾಬಾದ್ ನವರಾಗಿದ್ದು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರಾಜಕೀಯ ಉತ್ಸಾಹಿ, ಉದ್ಯಮಿ, ಪ್ರೇರಕ, ತಂದೆ, ಟ್ವೀಟ್‍ಗಳು ಕಟ್ಟುನಿಟ್ಟಾಗಿ ವೈಯಕ್ತಿಕವಾಗಿವೆ ಎಂದು ಬರೆದುಕೊಂಡಿದ್ದಾರೆ.

rohan gupta twitter

ಪ್ರಧಾನಿ ನರೇಂದ್ರ ಮೋದಿ ಅಲೆಯಿಂದಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲು ಕಂಡಿದೆ. ಇದರಿಂದಾಗಿ ಎಚ್ಚೆತ್ತುಕೊಂಡ ಕಾಂಗ್ರೆಸ್ ಈಗ ಪಕ್ಷದ ಸಾಮಾಜಿಕ ಜಾಲತಾಣ ತಂಡವನ್ನು ಬಲಪಡಿಸಲು ಭರ್ಜರಿ ಸಿದ್ಧತೆ ನಡೆಸಿದೆ. ಈ ನಿಟ್ಟಿನಲ್ಲಿ ಮಾಜಿ ಸಂಸದೆ ರಮ್ಯಾ ಅವರನ್ನು ಅಧಿಕೃತವಾಗಿ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಸ್ಥಾನದಿಂದ ಕೈಬಿಡಲಾಗಿದೆ.

ಈಗ ಕಾಂಗ್ರೆಸ್ ಹೈಕಮಾಂಡ್ ತಳಮಟ್ಟದಿಂದ ಪಕ್ಷ ಸಂಘಟನೆಗೆ ಮುಂದಾಗಿದೆ. ಹೀಗಾಗಿ ಸಾಮಾಜಿಕ ಜಾಲತಾಣದ ಮೂಲಕ ಯುವ ಜನತೆ ಹಾಗೂ ಮತದಾರರನ್ನು ಪಕ್ಷಕ್ಕೆ ಸೇರುವಂತೆ ಪ್ರೋತ್ಸಾಹಿಸಲು ಸಕಲ ಸಿದ್ಧತೆ ನಡೆದಿದೆ. ಆದರೆ ಇದು ಸದ್ಯವಿರುವ ಸಾಮಾಜಿಕ ಜಾಲತಾಣ ತಂಡದಿಂದ ಸಾಧ್ಯವಿಲ್ಲ ಎಂದು ಅರಿತ ಕಾಂಗ್ರೆಸ್ ಹೈಕಮಾಂಡ್ ಹೊಸ ತಂಡ ರಚನೆ ಮಾಡುತ್ತಿದೆ.

ramya 1

 ಗೇಟ್‍ಪಾಸ್ ಯಾಕೆ?
ಪ್ರಧಾನಿ ಮೋದಿ ವಿರುದ್ಧ ಆಕ್ಷೇಪಾರ್ಹ ಟ್ವೀಟ್ ನಿಂದ ಪಕ್ಷಕ್ಕೆ ಮುಜುಗರವಾದ ಹಿನ್ನೆಲೆಯಲ್ಲಿ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಹುದ್ದೆಯಿಂದ ಕಿಕ್‍ಔಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇದಲ್ಲದೇ ರಾಹುಲ್ ಗಾಂಧಿಯವರ ಟ್ವೀಟ್ ಹಾಗೂ ಸಾರ್ವಜನಿಕ ಭಾಷಣಗಳ ಉಸ್ತುವಾರಿಗಳಿಂದಲೂ ಅವರಿಗೆ ಕೋಕ್ ನೀಡಲಾಗಿತ್ತು ಎಂದು ಹಿಂದೆ ವರದಿಯಾಗಿತ್ತು.

ಇದಾದ ನಂತರ ರಮ್ಯಾರವರು ರಾಹುಲ್ ಗಾಂಧಿಯವರ ಟ್ವೀಟ್‍ಗಳನ್ನು ರೀ ಟ್ವೀಟ್ ಮಾಡುವ ಮೂಲಕ ಸೋಷಿಯಲ್ ಮೀಡಿಯಾ ಘಟಕವನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ ಎಂಬುದಾಗಿ ಸುದ್ದಿಯಾಗಿತ್ತು. ಈ ಸುದ್ದಿಗೆ ಪೂರಕ ಎಂಬಂತೆ ರಮ್ಯಾ ಅವರು ಈ ಹಿಂದೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಎಐಸಿಸಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ, ನಟಿ, ಸಂಸದೆ ಎಂದು ಬರೆದುಕೊಂಡಿದ್ದರು. ನಂತರ ಈ ಎಲ್ಲ ವಿವರಗಳನ್ನು ಡಿಲೀಟ್ ಮಾಡಿದ್ದರು. ಲೋಕಸಭಾ ಚುನಾವಣೆಯ ಫಲಿತಾಂಶ ಪ್ರಕಟವಾದ ನಂತರ ರಮ್ಯಾ ತಮ್ಮ ಟ್ವಿಟ್ಟರ್ ಮತ್ತು ಇನ್‍ಸ್ಟಾಗ್ರಾಂ ಖಾತೆಯನ್ನು ಹೈಡ್ ಮಾಡಿದ್ದಾರೆ.

ramya bng copy

ಲೋಕಸಭಾ ಚುನಾವಣೆಯ ಫಲಿತಾಂಶದ ಬಳಿಕವೂ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದ ರಮ್ಯಾ ಖಾತೆ ಟ್ವಿಟ್ಟರ್ ಅಂಗಳದಿಂದ ಮಾಯವಾಗಿದೆ. ಲೋಕಸಭಾ ಚುನಾವಣೆಯ ಸೋಲಿನ ನಿರಾಶೆಯಿಂದ ಸಾಮಾಜಿಕ ಜಾಲತಾಣದಿಂದ ದೂರ ಉಳಿದ್ರಾ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ಸದ್ಯಕ್ಕೆ ಫೇಸ್‍ಬುಕ್ ಖಾತೆಯನ್ನು ರಮ್ಯಾ ಹೊಂದಿದ್ದು, ಕೊನೆಯ ಬಾರಿಗೆ ಮೇ 29 ರಂದು ತಮ್ಮ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.

ಎಫ್‍ಐಆರ್ ದಾಖಲಾಗಿತ್ತು
ರಫೇಲ್ ಒಪ್ಪಂದ ಕುರಿತು ರಮ್ಯಾ ಸೆಪ್ಟೆಂಬರ್ 24 ರಂದು ಮೋದಿ ಅವರ ಮೇಣದ ಪ್ರತಿಮೆಯ ಫೋಟೋ ಟ್ವೀಟ್ ಮಾಡಿದ್ದರು. ಈ ಫೋಟೋದಲ್ಲಿ ಮೋದಿ ಸ್ವತಃ ತಮ್ಮ ಪ್ರತಿಮೆ ಮೇಲೆ ಕಳ್ಳ ಎಂದು ಬರೆಯುವಂತೆ ಚಿತ್ರಿಸಲಾಗಿದೆ. ಈ ಫೋಟೋಗೆ ಕಳ್ಳ ಪ್ರಧಾನಿ ಸುಮ್ಮನಿದ್ದಾರೆ (#ChorPMChupHai) ಎಂಬ ಹ್ಯಾಷ್ ಟ್ಯಾಗನ್ನು ರಮ್ಯಾ ಬಳಸಿ ಟ್ವೀಟ್ ಮಾಡಿದ್ದರು. ರಮ್ಯಾ ಮಾಡಿದ ಟ್ವಿಟ್ ನಲ್ಲಿ ನರೇಂದ್ರ ಮೋದಿ ವಿರುದ್ಧ ದ್ವೇಷ ಕಾರುವ ಅಂಶವಿದೆ ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ರಿಜ್ವಾನ್ ಅಹ್ಮದ್ ದೂರು ನೀಡಿದ್ದರು. ದೂರು ನೀಡಿದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದಲ್ಲಿ ಎಫ್‍ಐಆರ್ ದಾಖಲಾಗಿತ್ತು.

ramya congress

ಕರ್ನಾಟಕಕ್ಕೆ ಬಂದಿರಲಿಲ್ಲ
ಕರ್ನಾಟಕ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹೆಸರಿದ್ದರೂ ಕೂಡ ರಮ್ಯಾರವನ್ನು ದೂರ ಇಡಲಾಗಿತ್ತು. ಒಂದು ವೇಳೆ ಅವರನ್ನು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡರೇ ಪಕ್ಷಕ್ಕೆ ನಷ್ಟ ಹೆಚ್ಚಾಗುವ ಸಾಧ್ಯತೆಯಿದೆ ಎಂದು ರಾಜ್ಯ ನಾಯಕರು ಪ್ರಚಾರದಿಂದ ದೂರ ಇಟ್ಟಿದ್ದರು ಎನ್ನಲಾಗಿದೆ.

ರಮ್ಯಾರವರು ಪ್ರಧಾನಿ ಮೋದಿ ವಿರುದ್ಧ ಟ್ವೀಟ್ ಮಾಡುವ ಭರದಲ್ಲಿ ಹಲವು ಬಾರಿ ಪಕ್ಷಕ್ಕೆ ಭಾರೀ ಮುಜುಗರಕ್ಕೀಡು ಮಾಡುವಂತೆ ಮಾಡಿದ್ದರು. ಅಲ್ಲದೇ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ತರಬೇತಿ ನೀಡುವ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆ ತೆರೆಯುವಂತೆ ಸಲಹೆ ನೀಡಿದ್ದು, ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.

TEACHER RAMYA 6

 

ಲೆಕ್ಕ ಕೊಟ್ಟಿಲ್ಲ:
ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸಮೀಕ್ಷೆ ಮಾಡಲು ಚುನಾವಣಾ ತಂತ್ರಗಾರಿಕೆ ಜವಾಬ್ದಾರಿ ವಹಿಸಿದ್ದ ಪ್ರವೀಣ್ ಚಕ್ರವರ್ತಿ ಅವರಿಗೆ 24 ಕೋಟಿ ರೂ. ಸಂದಾಯ ಆಗಿತ್ತು. ಈ ಹಣದಲ್ಲಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ಜಾಲತಾಣ ಜವಾಬ್ದಾರಿ ವಹಿಸಿಕೊಂಡಿದ್ದ ರಮ್ಯಾ ಅವರಿಗೆ 8 ಕೋಟಿ ರೂ. ನೀಡಲಾಗಿದೆ. ಈ ಬಗ್ಗೆ ಅವರು ಯಾವುದೇ ರೀತಿಯ ಲೆಕ್ಕ ಕೊಟ್ಟಿಲ್ಲ ಎಂದು ದಿ ಸಂಡೇ ಗಾರ್ಡಿಯನ್ ವರದಿ ಪ್ರಕಟಿಸಿತ್ತು.

ಚುನಾವಣೆಯ ಫಲಿತಾಂಶದ ಬಳಿಕ ಪ್ರವೀಣ್ ಚಕ್ರವರ್ತಿ ಹಾಗೂ ಕಾಂಗ್ರೆಸ್ ಪಕ್ಷದ ಶಕ್ತಿ ಆ್ಯಪ್ ಸೇರಿದಂತೆ ವಿವಿಧ ಉಸ್ತುವಾರಿಗಳಿಂದ ರಮ್ಯಾ ದೂರವಾಗಿದ್ದಾರೆ. ಅಲ್ಲದೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಂದ ಸಂಗ್ರಹಿಸಿದ್ದ ಮಾಹಿತಿಯನ್ನು ಕೂಡ ಸಲ್ಲಿಕೆ ಮಾಡಿಲ್ಲ. ಇದಕ್ಕಾಗಿ ಸುಮಾರು 24 ಕೋಟಿ ರೂ. ವೆಚ್ಚ ಮಾಡಿದ್ದರು. ಇದರೊಂದಿಗೆ ರಮ್ಯಾ ಅವರು ಕೂಡ 8 ರೂ. ಪಡೆದಿದ್ದರು. ಆದರೆ ಈ ಹಣದ ಕುರಿತು ರಮ್ಯಾ ಅವರು ಇನ್ನೂ ಯಾವುದೇ ಲೆಕ್ಕವನ್ನು ನೀಡಿಲ್ಲ ಎನ್ನಲಾಗಿದೆ.

RAMYA 6

ಲೋಕಸಭಾ ಚುನಾವಣೆ ಬಳಿಕ ಸಾಮಾಜಿಕ ಜಾಲತಾಣದಿಂದ ದೂರವಾಗಿದ್ದ ರಮ್ಯಾ ಅವರು ಇದೇ ಕಾರಣಕ್ಕೆ ಟ್ವಿಟ್ಟರ್ ತೊರೆದಿದ್ದಾರಾ ಎಂಬ ಅನುಮಾನ ವ್ಯಕ್ತವಾಗಿತ್ತು. ಅಲ್ಲದೆ ಹಣದ ಬಗ್ಗೆ ಸರಿಯಾದ ಲೆಕ್ಕ ನೀಡದ ಕಾರಣದಿಂದಲೇ ಎಐಸಿಸಿ ಅವರನ್ನು ಸಾಮಾಜಿಕ ಜಾಲತಾಣದಿಂದ ದೂರ ಇಟ್ಟಿದೆಯಾ ಎಂಬ ಪ್ರಶ್ನೆಯೂ ದೆಹಲಿ ರಾಜಕೀಯ ವಲಯದಲ್ಲಿ ಚರ್ಚೆಯಾಗಿತ್ತು. ರಮ್ಯಾ ಅವರು ಇನ್ನೂ ಪಕ್ಷಕ್ಕೆ ಯಾವುದೇ ಲೆಕ್ಕವನ್ನು ನೀಡಿಲ್ಲ ಎಂದು ವರದಿಯಾಗಿದೆ.

ಚುನಾವಣಾ ಸಮಯದಲ್ಲಿ ಕಾಂಗ್ರೆಸ್ ಪಕ್ಷದ ತಂತ್ರಗಾರಿಕೆಯನ್ನು ಹೆಣೆಯುತ್ತಿದ್ದ ರಾಹುಲ್ ಆಪ್ತರು, ಅಖಿಲೇಶ್ ಯಾದವ್, ಎಂಕೆ ಸ್ಟಾಲಿನ್, ಓಮರ್ ಅಬ್ದುಲ್ಲ ಸೇರಿದಂತೆ ಹಲವು ನಾಯಕರೊಂದಿಗೆ ಯುಪಿಎ ಮೈತ್ರಿ ರಚಿಸಲು ಸಿದ್ಧತೆ ನಡೆಸಿದ್ದರು. ಕಾಂಗ್ರೆಸ್ ಪಕ್ಷದ ಸಮೀಕ್ಷೆಗಳು ನೀಡುವ ಮಾಹಿತಿಯಂತೆ ಕಾಂಗ್ರೆಸ್ 164ಕ್ಕೂ ಹೆಚ್ಚು ಸ್ಥಾನ ಪಡೆದು ಮೈತ್ರಿ ಮೂಲಕ ಅಧಿಕಾರ ರಚಿಸಲು ಸಿದ್ಧತೆ ನಡೆಸಿತ್ತು ಎಂದು ವರದಿಯಲ್ಲಿ ವಿವರಿಸಲಾಗಿತ್ತು. ಅಲ್ಲದೆ ಚುನಾವಣೆಯಲ್ಲಿ ಗೆಲುವು ಪಡೆದರೆ 10 ಸಾವಿರಕ್ಕೂ ಹೆಚ್ಚು ಕಾರ್ಯಕರ್ತರೊಂದಿಗೆ ಸಂಭ್ರಮಾಚರಣೆ ನಡೆಸುವ ಪ್ಲ್ಯಾನ್ ಕೂಡ ಮಾಡಿತ್ತು.

Share This Article
Leave a Comment

Leave a Reply

Your email address will not be published. Required fields are marked *