ಹೈದರಾಬಾದ್: ದಿಢೀರ್ ಬೆಳವಣಿಗೆಯಲ್ಲಿ ಕೆಲ ತಿಂಗಳ ಹಿಂದೆಯಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಣೆ ಮಾಡಿದ್ದ ಟೀಂ ಇಂಡಿಯಾ ಆಟಗಾರ ಅಂಬಟಿ ರಾಯುಡು, ತಮ್ಮ ನಿವೃತ್ತಿ ತೀರ್ಮಾನದಿಂದ ಹಿಂದೆ ಸರಿಯುವ ಸೂಚನೆಯನ್ನು ನೀಡಿದ್ದಾರೆ.
ಚೆನ್ನೈನಲ್ಲಿ ನಡೆಯುತ್ತಿರುವ ಟಿಎನ್‍ಸಿಎ ಏಕದಿನ ಕ್ರಿಕೆಟ್ ಲೀಗ್ ಆಡುತ್ತಿರುವ ಅಂಬಟಿ ರಾಯುಡು ಮುಂದಿನ ವರ್ಷದ ಐಪಿಎಲ್ ಟೂರ್ನಿಯಲ್ಲಿ ಆಡುತ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ ಇದೇ ವೇಳೆ ಮತ್ತೆ ವೈಟ್ ಬಾಲ್ ಕ್ರಿಕೆಟ್‍ಗೆ ಹಿಂದಿರುಗುವ ಅವಕಾಶ ಲಭಿಸಿದರೆ ಮತ್ತೆ ಟೀಂ ಇಂಡಿಯಾ ಪರ ಆಡುವುದಾಗಿ ಹೇಳಿದ್ದಾರೆ.
ನನ್ನ ನಿವೃತ್ತಿಯ ನಿರ್ಧಾರವನ್ನು ನಾನು ಆವೇಶದಿಂದ ತೆಗೆದುಕೊಂಡಿಲ್ಲ. ಕಳೆದ 4 ವರ್ಷಗಳಲ್ಲಿ ವಿಶ್ವಕಪ್ ಟೂರ್ನಿ ಆಡಲು ತೀವ್ರವಾಗಿ ಶ್ರಮ ವಹಿಸಿದ್ದೆ. ಆದರೆ ಅದು ಸಾಧ್ಯವಾಗದ ಸಂದರ್ಭದಲ್ಲಿ ತೀವ್ರ ಯೋಚನೆ ಮಾಡಿ ತೀರ್ಮಾನ ಕೈಗೊಂಡಿದ್ದೆ ಎಂದಿದ್ದಾರೆ.
ಕಳೆದ 2 ವರ್ಷಗಳಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುತ್ತಿರುವ ರಾಯುಡು, ಸಿಎಸ್‍ಕೆ ಪರ ಯಾವುದೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಕಳುಹಿಸಿದರು ಉತ್ತಮ ಪ್ರದೇರ್ಶನ ನೀಡಿ ತಂಡಕ್ಕೆ ಬಲ ತುಂಬಿದ್ದರು. ಆದರೆ ನಿವೃತ್ತಿ ಪರಿಣಾಮ ಮತ್ತೆ ಅವರು ಐಪಿಎಲ್ ಟೂರ್ನಿ ಆಡಲಿದ್ದಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು. ಸದ್ಯ ತಾನು ಮುಂದಿನ ಟೂರ್ನಿಗೆ ಸಿದ್ಧತೆ ನಡೆಸುತ್ತಿದ್ದೇನೆ ಎಂದು ಹೇಳುವ ಮೂಲಕ ರಾಯುಡು ನಿವೃತ್ತಿಯಿಂದ ಯೂ ಟರ್ನ್ ಮಾಡುವ ಸೂಚನೆ ನೀಡಿದ್ದಾರೆ.