ನವದೆಹಲಿ: ಬಾಂಬೆ ಬ್ಲೂ ಬಾಯ್ಸ್ ಸಂತೋಷವಾಗಿರಲಿ ಎಂದು ಮಾಜಿ ಸಚಿವ ಕಾಂಗ್ರೆಸ್ ನಾಯಕ ಡಿ.ಕೆ ಶಿವಕುಮಾರ್ ಅವರು ಅನರ್ಹ ಶಾಸಕರನ್ನು ಲೇವಡಿ ಮಾಡಿದ್ದಾರೆ.
ಇಂದು ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀವ್ ಗಾಂಧಿ ಅವರು ನನ್ನ ಹೃದಯಕ್ಕೆ ಹತ್ತಿರವಾದ ನಾಯಕ ಅವರ ಜನ್ಮ ದಿನವನ್ನು ಆಚರಣೆ ಮಾಡಲು ದೆಹಲಿಗೆ ಬಂದಿದ್ದೇನೆ. ನಾಳೆ ಮಧ್ಯಪ್ರದೇಶಕ್ಕೆ ಹೋಗಿ ನಂತರ ಬೆಂಗಳೂರಿಗೆ ವಾಪಸ್ ಆಗುತ್ತೇನೆ ಎಂದು ತಿಳಿಸಿದರು.
ಇದೇ ವೇಳೆ ಬಿಜೆಪಿ ಹೈಕಮಾಂಡ್ ಭೇಟಿ ಮಾಡಲು ದೆಹಲಿಗೆ ತೆರೆಳಿರುವ ಅನರ್ಹ ಶಾಸಕರ ಬಗ್ಗೆ ಮಾತನಾಡಿದ ಅವರು, 40 ವರ್ಷ ಕಟ್ಟಿ ಬೆಳಸಿದ ಕಾಂಗ್ರೆಸ್ ಪಾರ್ಟಿಯನ್ನು ಬೀಳಿಸಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡಿದ್ದಾರೆ. ಯಾವಗಲೂ ಬಸವಣ್ಣನ ಬಗ್ಗೆ ಮಾತನಾಡುವ ಬಿಎಸ್‍ವೈಗೆ ಅನರ್ಹ ಶಾಸಕರು ದೊಡ್ಡ ತ್ಯಾಗಿಗಳ ರೀತಿಯಲ್ಲಿ ಕಾಣುತ್ತಿದ್ದಾರೆ. ಬಾಂಬೆ ಬ್ಲೂ ಬಾಯ್ಸ್ ಸಂತೋಷವಾಗಿರಲಿ ಎಂದು ಹೇಳಿದರು.
ಬಿಜೆಪಿ ಶಾಸಕ ಉಮೇಶ್ ಕತ್ತಿ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದ ವಿಚಾರವಾಗಿ ಮಾತನಾಡಿದ ಅವರು, ಉಮೇಶ್ ಕತ್ತಿ ಸಿದ್ದರಾಮಯ್ಯ ಅವರನ್ನು ಸೌರ್ಹದತೆಗೆ ಭೇಟಿ ಮಾಡಿರಬಹುದು. ಕೆಲವರು ಬಹಿರಂಗವಾಗಿ, ಕೆಲವರು ಗೌಪ್ಯವಾಗಿ ಭೇಟಿ ಮಾಡುತ್ತಾರೆ. ಈ ಭೇಟಿಯಲ್ಲಿ ಏನು ಇಲ್ಲ. ಉಮೇಶ್ ಕತ್ತಿ ಹಿರಿಯ ನಾಯಕ ಅವರ ಬಗ್ಗೆ ಮಾತನಾಡುವುದು ಬೇಡ ಎಂದು ಹೇಳಿದರು.
ಕಾಂಗ್ರೆಸ್ ರಾಜ್ಯಾಧ್ಯಕ್ಷರನ್ನಾಗಿ ನಿಮ್ಮನ್ನು ನೇಮಿಸುತ್ತಾರೆ ಎಂಬ ಪ್ರಶ್ನೆ ಉತ್ತರಿಸಿದ ಅವರು ರಾಜ್ಯಾಧ್ಯಕ್ಷರ ಸ್ಥಾನದ ಬಗ್ಗೆ ನಾನು ಯಾರನ್ನು ಭೇಟಿ ಮಾಡಿಲ್ಲ. ಆದರ ಬಗ್ಗೆ ಎಲ್ಲಿಯೂ ಮಾತನ್ನೂ ಆಡಿಲ್ಲ. ಇಲ್ಲಿಂದ ಹೋದಮೇಲೆ ಸುದ್ದಿಗೋಷ್ಠಿ ಮಾಡುತ್ತೇನೆ ಎಂದು ಹೇಳಿದರು.