-ಐಎಂಎ ಪ್ರಕರಣ ಸಿಬಿಐಗೆ?
ಬೆಂಗಳೂರು: ಫೋನ್ ಟ್ಯಾಪಿಂಗ್ ಪ್ರಕರಣ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ಫೋನ್ ಕದ್ದಾಲಿಕೆ ಪ್ರಕರಣವನ್ನು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ ಮೇರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿಬಿಐಗೆ ವರ್ಗಾಯಿಸಿದ್ದಾರೆ. ಇದೀಗ ಅಮಿತ್ ಶಾ ಎರಡನೇ ಸಂದೇಶವೊಂದನ್ನು ರವಾನಿಸಿದ್ದು, ಘಟಾನುಘಟಿ ನಾಯಕರುಗಳಿಗೆಲ್ಲ ನಡುಕು ಶುರುವಾಗಿದೆ ಎನ್ನಲಾಗುತ್ತಿದೆ.
ಏನದು ಆದೇಶ?
ಫೋನ್ ಕದ್ದಾಲಿಕೆ ಪ್ರಕರಣವನ್ನು ಸಿಬಿಐ ಗೆ ವಹಿಸಿದ ಮೇಲೆ ಇದೀಗ ರಾಜ್ಯದಲ್ಲಿ ಸದ್ದು ಮಾಡಿದ್ದ ಐಎಂಎ ಬಹುಕೋಟೆ ಹಗರಣವನ್ನು ಸಿಬಿಐಗೆ ವರ್ಗಾಯಿಸಲು ಅಮಿತ್ ಶಾ ಸೂಚನೆ ನೀಡಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ. ಐಎಂಎ ಬಹುಕೋಟೆ ಹಗರಣದಲ್ಲಿ ಈಗಾಗಲೇ ಹಲವು ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಹೆಸರುಗಳು ಕೇಳಿ ಬಂದಿವೆ. ಇತ್ತ ಅಧಿಕಾರಿಗಳು ತನ್ನಿಂದ ಅಪಾರ ಪ್ರಮಾಣದ ಹಣ ಪಡೆದಿದ್ದಾರೆ ಎಂದು ವಂಚಕ ಮನ್ಸೂರ್ ಖಾನ್ ಆರೋಪಿಸಿದ್ದಾನೆ.
ಈ ಹಿನ್ನೆಲೆಯಲ್ಲಿ ಐಎಂಎ ಪ್ರಕರಣವನ್ನು ಸಿಬಿಐಗೆ ನೀಡಿದ್ರೆ ರಾಜಕೀಯ ವಿರೋಧಿಗಳನ್ನು ಸುಲಭವಾಗಿ ಕಟ್ಟಿ ಹಾಕಬಹದು ಎಂದು ಅಮಿತ್ ಶಾ ಪ್ಲಾನ್ ಮಾಡಿಕೊಂಡಿದ್ದಾರಂತೆ. ಇತ್ತ ಯಡಿಯೂರಪ್ಪ ಈ ಸಂಬಂಧ ಹಿರಿಯ ಅಧಿಕಾರಿಗಳು, ಕಾನೂನು ತಜ್ಞರು ಮತ್ತು ಆಪ್ತರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಯಾರಿಗೆಲ್ಲ ಸಂಕಷ್ಟ?
ಐಎಂಎ ಬಹುಕೋಟಿ ಹಗರಣದಲ್ಲಿ ಆರಕ್ಕೂ ಅಧಿಕ ರಾಜಕೀಯ ನಾಯಕರು, ಐಪಿಎಸ್, ಐಎಎಸ್ ಅಧಿಕಾರಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆಗಳಿವೆ. ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮಾಜಿ ಡಿಸಿಎಂ ಜಿ.ಪರಮೇಶ್ವರ್, ಮಾಜಿ ಸಚಿವರುಗಳಾದ ಜಮೀರ್ ಅಹ್ಮದ್, ರೋಷನ್ ಬೇಗ್, ಕೆ.ಜೆ.ಜಾರ್ಜ್, ಆರ್.ವಿ.ದೇಶಪಾಂಡೆ, ಅಜಯ್ ಹಿಲೋರಿ-ಐಪಿಎಸ್ ಅಧಿಕಾರಿ, ರಮೇಶ್‍ಕುಮಾರ್-ಎಸಿಪಿ, ರಮೇಶ್-ಇನ್ಸ್ ಪೆಕ್ಟರ್, ವಿಜಯ್‍ಶಂಕರ್-ಐಎಎಸ್ ಅಧಿಕಾರಿ, ನಾಗರಾಜ್-ಸಹಾಯಕ ಆಯುಕ್ತ, ಕುಮಾರ್-ಬಿಡಿಎ ಅಧಿಕಾರಿ, ಇಸ್ತಿಯಾಕ್- ಶಿವಾಜಿನಗರ ಕಾರ್ಪೋರೇಟರ್ ಗಂಡ, ಮುಜಾಹೀದ್- ಜಮೀರ್, ಬೇಗ್ ಶಿಷ್ಯ.