ಪಾಟ್ನಾ: ಮಹಿಳೆಯೊಬ್ಬಳು ತನ್ನ ವಿರುದ್ಧ ದೂರು ನೀಡಿದ್ದಾಳೆ ಎಂದು ಆರೋಪಿ ಶಾಲೆಯಲ್ಲಿಯೇ 7ನೇ ತರಗತಿಯ ವಿದ್ಯಾರ್ಥಿನಿಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಬಿಹಾರದ ಮುಜಾಫರ್‍ಪುರದಲ್ಲಿ ನಡೆದಿದೆ.
ಸೂರಜ್ ಕುಮಾರ್ ಮೃತ ವಿದ್ಯಾರ್ಥಿ. ಸೂರಜ್ ಕುಮಾರ್‌ನನ್ನು ಗುರುವಾರ ಅಹಿಯಾಪುರದ ಶಾಲಾ ಆವರಣದಲ್ಲಿ ಇರಿದು ಕೊಲೆ ಮಾಡಲಾಗಿದೆ. ಈ ಘಟನೆ ನಡೆಯುವ ಹಿಂದಿನ ದಿನ ತಾಯಿ ತನ್ನ ಪರ್ಸ್ ಕದ್ದ ಇಬ್ಬರು ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮಹಿಳೆ ಮತ್ತು ಪರ್ಸ್ ಕದ್ದ ಕಳ್ಳರು ಒಂದೇ ಗ್ರಾಮದವರಾಗಿದ್ದು, ತನ್ನ ಪರ್ಸ್ ಕದ್ದ ನಂತರ ಆಕೆ ಒಬ್ಬನನ್ನು ಗುರುತಿಸಿ ಆತನೊಂದಿಗೆ ವಾಗ್ವಾದ ನಡೆಸಿದ್ದಳು. ನಂತರ ಮೃತ ವಿದ್ಯಾರ್ಥಿಯ ತಾಯಿ ತನ್ನ ಪರ್ಸ್ ಕದ್ದ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದರು. ಪೊಲೀಸರು ತಕ್ಷಣ ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಿದ್ದರು. ಇದೇ ಜಿದ್ದಿನಲ್ಲಿ ಮತ್ತೊಬ್ಬ ಆರೋಪಿ ಮಗನನ್ನು ಕೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಘಟನೆ ನಡೆದ ನಂತರ ಬಾಲಕನಿಗೆ ರಕ್ಷಣೆ ನೀಡುವಲ್ಲಿ ಶಾಲೆಯ ಆಡಳಿತ ಮಂಡಳಿ ವಿಫಲವಾಗಿದೆ ಎಂದು ಆರೋಪಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದರು. ಸದ್ಯಕ್ಕೆ ಈ ಕುರಿತು ದೂರು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಮುಕುಲ್ ಕುಮಾರ್ ರಂಜನ್ ತಿಳಿಸಿದ್ದಾರೆ.