ರಾಮನಗರ: ಖ್ಯಾತ ಉದ್ಯಮಿ ಹಾಗೂ ಮಾಜಿ ಸಿಎಂ ಎಸ್.ಎಂ ಕೃಷ್ಣರವರ ಅಳಿಯ ಸಿದ್ದಾರ್ಥ್ ಉಳ್ಳಾಲದ ನೇತ್ರಾವತಿ ನದಿಯ ಬ್ರಿಡ್ಜ್ ಬಳಿ ನಾಪತ್ತೆಯಾಗಿದ್ದು, ಅವರ ಒಡೆತನದ ಕಾಫಿ ಡೇಗಳ ಸಿಬ್ಬಂದಿಗಳಲ್ಲಿ ಆತಂಕ ಮನೆ ಮಾಡಿದೆ. ನಾಪತ್ತೆಯಾಗಿರುವ ಉದ್ಯಮಿ ಸಿದ್ಧಾರ್ಥರ ಅಚ್ಚುಮೆಚ್ಚಿನ ಕಾಫಿ ಡೇಗಳಲ್ಲಿ ಚನ್ನಪಟ್ಟಣ ತಾಲೂಕಿನ ಮುದುಗೆರೆ ಸಮೀಪದಲ್ಲಿನ ಕಾಫಿ ಡೇ ಕೂಡ ಒಂದಾಗಿತ್ತು.
ಕಾಫಿ ಡೇ ಆರಂಭವಾದಾಗಿನಿಂದ ಇಂದಿನ ತನಕ ಸಾಕಷ್ಟು ಬಾರಿ ಉದ್ಯಮಿ ಸಿದ್ಧಾರ್ಥ್ ಅವರು ಈ ಕಾಫಿ ಡೇಗೆ ಭೇಟಿ ನೀಡಿದ್ದಾರೆ. ಅಲ್ಲದೇ ಬೆಂಗಳೂರಿನಿಂದ ಮೈಸೂರು ಇಲ್ಲವೇ ಮೈಸೂರಿನಿಂದ ಬೆಂಗಳೂರು ಕಡೆಗೆ ಪ್ರಯಾಣಿಸುವ ವೇಳೆ ಈ ಕಾಫಿ ಡೇಗೆ ಭೇಟಿ ನೀಡಿ ಕೆಲ ಕಾಲ ಸಮಯ ಕಳೆಯುತ್ತಿದ್ದರು.
ಇತ್ತೀಚೆಗೆ ಮಾಜಿ ಸಿಎಂ ಎಸ್‍ಎಂ ಕೃಷ್ಣ ಅವರ ಸೋದರ ಎಸ್.ಎಂಶಂಕರ್ ನಿಧನದ ಹಾಗೂ ಅವರ ಪುಣ್ಯತಿಥಿಯ ದಿನ ಕೂಡ ಈ ಕಾಫಿ ಡೇಗೆ ಭೇಟಿ ನೀಡಿ ಕಾಫಿ ಕುಡಿದು ಕಾಫಿ ಡೇ ಸಿಬ್ಬಂದಿಯನ್ನು ಆತ್ಮೀಯವಾಗಿ ಮಾತನಾಡಿಸಿದ್ದರು.
ತಮ್ಮ ಕುಟುಂಬದ ಜೊತೆ ಹೊರಗೆ ಹೋಗುವ ವೇಳೆಯೂ ಕೂಡ ತಪ್ಪದೇ ಈ ಕಾಫಿ ಡೇಗೆ ಭೇಟಿ ನೀಡುತ್ತಿದ್ದರು ಎಂದು ಸಿಬ್ಬಂದಿಗಳು ತಿಳಿಸಿದ್ದಾರೆ. ಜೊತೆಗೆ ನಾಪತ್ತೆಯಾಗಿರುವ ತಮ್ಮ ಯಜಮಾನ ಸೇಫ್ ಆಗಿ ಬರಲಿ ಎಂದು ಹಾರೈಸುತ್ತಿದ್ದಾರೆ. ಆದರೆ ಸಿದ್ಧಾರ್ಥ್ ಅವರು ನಾಪತ್ತೆಯಾಗಿ ಸುಮಾರು 21 ಗಂಟೆಯಾದರೂ ಇನ್ನೂ ಪತ್ತೆಯಾಗಿಲ್ಲ. ಪೊಲೀಸ್, ಅಗ್ನಿಶಾಮಕ ದಳ ಸೇರಿದಂತೆ ಅನೇಕರು ಹುಡುಕಾಟ ಮಾಡುತ್ತಿದ್ದಾರೆ.