ಭುವನೇಶ್ವರ: 8 ವರ್ಷದ ಬಾಲಕಿಯೊಬ್ಬಳು ಕಸದ ಬುಟ್ಟಿಯಲ್ಲಿ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆಕೆಯನ್ನು ದುಷ್ಕರ್ಮಿಗಳು ಅತ್ಯಾಚಾರಗೈದು ಈ ರೀತಿ ಎಸೆದು ಹೋಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.
ಒಡಿಶಾದ ಅಂಗುಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಬಾಲಕಿ ಅರೆಪ್ರಜ್ಞಾವಸ್ಥೆಯಲ್ಲಿ ಕಸದ ರಾಶಿಯ ಮೇಲೆ ಪತ್ತೆಯಾಗಿದ್ದಾಳೆ. ಬಾಲಕಿ ದೇಹದ ಮೇಲೆ ಹಲವು ಗಾಯಗಳಾಗಿದ್ದು ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಕಸದ ಬುಟ್ಟಿಗೆ ಎಸೆದಿದ್ದಾರೆ ಎಂಬ ಅನುಮಾನ ಹುಟ್ಟಿಕೊಂಡಿದೆ.
ಕಸದ ರಾಶಿಯಲ್ಲಿ ಬಿದ್ದಿದ್ದ ಬಾಲಕಿಯನ್ನು ನೋಡಿದ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಾಲಕಿಯನ್ನು ಅಪಹರಿಸಿ ನಂತರ ಅತ್ಯಾಚಾರವೆಸಗಿ ಕಸದ ಬುಟ್ಟಿಗೆ ಎಸೆದು ದುಷ್ಕರ್ಮಿಗಳು ವಿಕೃತಿ ಮೆರೆದಿದ್ದಾರೆ ಎಂದು ಶಂಕಿಸಲಾಗಿದೆ. ಈಗಾಗಲೇ ಬಾಲಕಿಯ ವೈದ್ಯಕೀಯ ಪರೀಕ್ಷೆ ನಡೆಸಿದ್ದು, ವರದಿ ಬಂದ ಬಳಿಕ ಈ ಬಗ್ಗೆ ಸ್ಪಷ್ಟವಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ರಾತ್ರಿ ಬಾಲಕಿ ಕುಟುಂಬದವರ ಜೊತೆ ಮನೆಯಲ್ಲಿ ಮಲಗಿದ್ದಳು. ಆದರೆ ಸ್ಪಲ್ಪ ಹೊತ್ತಿನ ಬಳಿಕ ಆಕೆ ಕಾಣೆಯಾಗಿದ್ದಳು. ಈ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿ, ಬಾಲಕಿಗಾಗಿ ಹುಡುಕಾಟ ನಡೆಸುತ್ತಿದ್ದರು. ಆದರೆ ಮರುದಿನ ಆಕೆ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಕಸದ ರಾಶಿಯಲ್ಲಿ ಪತ್ತೆಯಾಗಿದ್ದಾಳೆ.
ಪೊಲೀಸರು ಪ್ರಾಥಮಿಕ ಹಂತದ ತನಿಖೆ ನಡೆಸಿದ್ದು, ಹಲವು ವಿಚಾರದ ಬಗ್ಗೆ ತಿಳಿದು ಬಂದಿದೆ. ಬಾಲಕಿ ಮೇಲೆ ಅತ್ಯಾಚಾರ ನಡೆದಿರುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ. ವೈದ್ಯಕೀಯ ವರದಿ ಬಂದ ಬಳಿಕ ಶಂಕೆ ನಿಜವಾದಲ್ಲಿ ಆರೋಪಿಗಳನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಬಾಲಕಿ ಹೇಳಿಕೆ ನೀಡುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ ನಾವು ವಿಧಿವಿಜ್ಞಾನ ತಂಡವನ್ನು ಘಟನಾ ಸ್ಥಳಕ್ಕೆ ಪರಿಶೀಲನೆಗಾಗಿ ಕಳುಹಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.