ತುಮಕೂರು ಡಿಸಿಸಿ ಬ್ಯಾಂಕ್ ಸೂಪರ್ ಸೀಡ್ – ರಾಜಣ್ಣ ವಿರುದ್ಧ ಸೇಡು?

Public TV
2 Min Read
tmk dcc bank

ತುಮಕೂರು: ಕೆ.ಎನ್.ರಾಜಣ್ಣ ಅಧ್ಯಕ್ಷರಾಗಿದ್ದ ಜಿಲ್ಲಾ ಸಹಕಾರಿ ಬ್ಯಾಂಕ್(ಡಿಸಿಸಿ) ಅನ್ನು ಸರ್ಕಾರ ಸೂಪರ್ ಸೀಡ್ ಮಾಡಿ ಆದೇಶ ಹೊರಡಿಸಿದೆ. ಸೂಪರ್ ಸೀಡ್ ಆದ ಹಿನ್ನೆಲೆಯಲ್ಲಿ ಸಂಜೆ 5 ಗಂಟೆಯಿಂದ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಸರ್ಕಾರದಿಂದ ಒಂದು ವರ್ಷ ಅವಧಿಗಾಗಿ ಬ್ಯಾಂಕಿನ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಡಾ.ರಾಕೇಶ್ ಕುಮಾರ್ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಸೂಪರ್ ಸೀಡ್ ಮಾಡಿರುವುದನ್ನು ಅಧಿಕೃತವಾಗಿ ವಾರ್ತಾ ಇಲಾಖೆ ತಿಳಿಸಿದೆ.

RAJANNA

2003 ರಿಂದ ಮಾಜಿ ಶಾಸಕ ರಾಜಣ್ಣ ಸತತ 5 ವರ್ಷಗಳ ಡಿಸಿಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಆರ್. ಶ್ರೀನಿವಾಸ ಪ್ರಸಾದ್ ಉಪಾಧ್ಯಕ್ಷರಾಗಿದ್ದರೂ ರಾಜಣ್ಣ ಅವರು ಬ್ಯಾಂಕಿನಲ್ಲಿ ಹಿಡಿತ ಹೊಂದಿದ್ದರು. ಡಿಸಿಸಿ ಬ್ಯಾಂಕ್ ಈ ರೀತಿ ಸೂಪರ್ ಸೀಡ್ ಆಗುವುದು ಇದೇ ಮೊದಲಲ್ಲ. 2004ರಲ್ಲೂ ಸೂಪರ್ ಸೀಡ್ ಆಗಿತ್ತು.

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಸರ್ಕಾರದ ವಿರುದ್ಧ ರಾಜಣ್ಣ ಬಹಿರಂಗವಾಗಿಯೇ ಹೇಳಿಕೆ ನೀಡುತ್ತಿದ್ದರು. ಕಾಂಗ್ರೆಸ್ ಉಳಿಯಬೇಕಾದರೆ ಜೆಡಿಎಸ್‍ನಿಂದ ಹೊರ ಬರಬೇಕು ಎಂದು ಹೇಳಿದ್ದರು. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸೋಲಲು ರಾಜಣ್ಣ ನೀಡಿದ ಹೇಳಿಕೆಗಳು ಕಾರಣ ಎನ್ನುವ ವಿಚಾರ ಚರ್ಚೆಯಾಗಿತ್ತು. ಅಷ್ಟೇ ಅಲ್ಲದೇ ಪರಮೇಶ್ವರ್ ವಿರುದ್ಧವೂ ರಾಜಣ್ಣ ಹೇಳಿಕೆಗಳನ್ನು ನೀಡುತ್ತಿದ್ದರು. ಹೀಗಾಗಿ ಸರ್ಕಾರ ಸೂಪರ್ ಸೀಡ್ ಮಾಡಿರಬಹುದಾ ಎನ್ನುವ ಪ್ರಶ್ನೆ ಎದ್ದಿದೆ.

ವಿಶೇಷ ಏನೆಂದರೆ ಶನಿವಾರ ಬೆಳಗ್ಗೆ ರಾಜಣ್ಣ ಸುದ್ದಿಗೋಷ್ಠಿ ನಡೆಸಿ ಸಿಎಂ, ದೇವೇಗೌಡರ ವಿರುದ್ಧ ಗುಡುಗಿದ್ದಾರೆ. ಆದರೆ ಸಂಜೆ 5 ಗಂಟೆಯ ವೇಳೆಗೆ ಪೊಲೀಸರು ಭದ್ರತೆಗಾಗಿ ಡಿಸಿಸಿ ಬ್ಯಾಂಕಿಗೆ ನಿಯೋಜನೆ ಗೊಂಡಿದ್ದರು.

K.N.Rajanna HDK

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ರಾಜಣ್ಣ, ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಂಡು ನಾವು ನೆಲಕಚ್ಚಿದ್ದೇವೆ. ಹೀಗಿರುವಾಗ ಸಿಎಂ ಅವರನ್ನು ಸಮರ್ಥಿಸಿಕೊಳ್ಳುವ ನಮ್ಮವರಿಗೆ ಬುದ್ಧಿ ಇಲ್ಲ ಎಂದು ಹೇಳಿ ಕೈ ನಾಯಕರ ವಿರುದ್ಧವೇ ಕಿಡಿಕಾರಿದ್ದರು.

ಶಾಸನ ಸಭೆಯಲ್ಲಿ ಮಾತನಾಡುವುದು ಶಾಸಕರ ಹಕ್ಕು. ಹಾಗಂತ ಸುಖಾಸುಮ್ಮನೆ ಕಾಲ ಹರಣ ಮಾಡಬಾರದು. ಈಗ ಶಾಸಕರು ಮಾಡುತ್ತಿರುವುದು ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕೆ. ಸರ್ಕಾರ ಉಳಿಯಬಾರದು. ಸರ್ಕಾರ ಉರುಳಬೇಕು ಎನ್ನುವುದು ನನ್ನ ಅಭಿಪ್ರಾಯ ಎಂದು ಹೇಳಿದ್ದರು.

1989ರಲ್ಲಿ 20 ಜನ ಶಾಸಕರ ರಾಜೀನಾಮೆ ಕೊಡಿಸಿ ಎಚ್.ಡಿ.ದೇವೇಗೌಡ ಅವರು ಎಸ್.ಆರ್. ಬೊಮ್ಮಯಿಯವರ ಸರ್ಕಾರ ಉರುಳಿಸಿದರು. ಆಗ ದೇವೇಗೌಡರಿಗೆ ಪ್ರಜಾಪ್ರಭುತ್ವದ ಕಗ್ಗೊಲೆ ಆಗಿರಲಿಲ್ಲ. ಇವತ್ತು ಪ್ರಜಾಪ್ರಭುತ್ವದ ಕಗ್ಗೊಲೆ ಎನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದ್ದರು.

tmk dcc bank 2

 

Share This Article
Leave a Comment

Leave a Reply

Your email address will not be published. Required fields are marked *