ವಿಜಯಪುರ: ಬಾಲ್ಯ ವಿವಾಹ ಮಾಡಿಕೊಡಲಾಗಿದ್ದ ಅಪ್ರಾಪ್ತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಕಾರಣ ಮಕ್ಕಳ ಸಹಾಯವಾಣಿ ಅಧಿಕಾರಿ ಶವ ಸಂಸ್ಕಾರವನ್ನು ತಡೆದು ಪರಿಶೀಲನೆ ನಡೆಸಿರುವ ಘಟನೆ ಜಿಲ್ಲೆಯ ರಾಣಿ ಬಗಿಚಾದಲ್ಲಿ ನಡೆದಿದೆ.
ರಾಣಿ ಬಗಿಚಾ ನಿವಾಸಿ ಅಪ್ರಾಪ್ತೆಯನ್ನು ಮೂರು ವರ್ಷದ ಹಿಂದೆ ಮಹಾರಾಷ್ಟ್ರದ ಕರಾಡ ತಾಲೂಕಿನ ವಾಟಾರ್ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಗುರುವಾರ ಅಪ್ರಾಪ್ತೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಳು. ಇಂದು ವಿಜಯಪುರಕ್ಕೆ ಅಪ್ರಾಪ್ತೆಯ ಶವ ತಂದು ಅಂತ್ಯ ಸಂಸ್ಕಾರಕ್ಕೆ ಪೋಷಕರು ಮುಂದಾಗಿದ್ದರು.
ಈ ಬಗ್ಗೆ ವಿಷಯ ತಿಳಿದ ಮಕ್ಕಳ ಸಹಾಯವಾಣಿ ಅಧಿಕಾರಿ ಸುನಂದಾ ತೋಳಬಂದಿ ಅವರು ಸ್ಥಳಕ್ಕೆ ಭೇಟಿ ನೀಡಿ ಶವ ಸಂಸ್ಕಾರಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗದಂತೆ ಕೆಲಕಾಲ ತಡೆದಿದ್ದರು.
ಇದು ಕೇವಲ ಆತ್ಮಹತ್ಯೆ ಎಂದು ಮಹಾರಾಷ್ಟ್ರದ ಕರಾಡ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಈಗ ಈ ಪ್ರಕರಣ ಸಂಬಂಧ ಪೋಕ್ಸೋ ಹಾಗೂ ಜೆ.ಜೆ (ಬಾಲ್ಯವಿವಾಹ) ಕಾಯ್ದೆ ಅಡಿಯಲ್ಲಿ ದಾಖಲಿಸಿಕೊಳ್ಳಲು ಆದೇಶಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ನಂತರ ಶವ ಸಂಸ್ಕಾರಕ್ಕೆ ಮಕ್ಕಳ ಸಹಾಯವಾಣಿ ಅಧಿಕಾರಿ ತೋಳಬಂದಿ ಅನುಮತಿ ನೀಡಿದರು.