ಪತಿಯನ್ನು ಬಿಡಲು ನಿರಾಕರಿಸಿದ್ದಕ್ಕೆ ಲವ್ವರ್‌ನಿಂದ ಎದೆ, ಸೊಂಟಕ್ಕೆ ಚಾಕು ಇರಿತ

Public TV
3 Min Read
delhi woman

– ತಾನೂ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ

ನವದೆಹಲಿ: ಪತಿಗೆ ಡಿವೋರ್ಸ್ ನೀಡಲು ಒಪ್ಪದಿದ್ದಕ್ಕೆ ಪ್ರಿಯತಮೆಯ ಸೊಂಟ ಹಾಗೂ ಎದೆಗೆ ಮನಬಂದಂತೆ ಚಾಕು ಇರಿದು, ಬಳಿಕ ವ್ಯಕ್ತಿಯೊಬ್ಬ ತನ್ನ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನವದೆಹಲಿಯಲ್ಲಿ ನಡೆದಿದೆ.

5 ವರ್ಷಗಳ ಹಿಂದೆ ಪಿಂಕಿಯನ್ನು ಸಂಬಂಧಿಕರೊಬ್ಬರೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ಆಗ ಆಕೆಗೆ 19 ವರ್ಷ ವಯಸ್ಸಾಗಿತ್ತು. ಹಾಗೆಯೇ ದಂಪತಿಗೆ ಗಂಡು ಮಗುವೂ ಜನಿಸಿತ್ತು. ನಂತರ ದಂಪತಿ ಆರ್ಥಿಕವಾಗಿ ಸದೃಢವಾಗುವಲ್ಲಿ ನಿರತರಾಗಿದ್ದು, ಪಿಂಕಿ ಬ್ಯೂಟಿ ಪಾರ್ಲರ್ ತೆರೆಯುವ ಮೂಲಕ ಜೀವನ ಸಾಗುತಿತ್ತು.

marriage 4

ಕಳೆದ ಪ್ರೇಮಿಗಳ ದಿನದಿಂದ ಪಿಂಕಿ ಜೀವನದಲ್ಲಿ ಮಹತ್ತರ ಟ್ವಿಸ್ಟ್ ಸಿಕ್ಕಿದೆ. ಗೆಳತಿಯೊಬ್ಬಳ ಮುಖಾಂತರ ದಕ್ಷಿಣ ದೆಹಲಿಯ ದೆವ್ಲಿ ನಿವಾಸಿ 26 ವರ್ಷದ ಸನ್ನಿ ಎಂಬಾತನ ಪರಿಚಯವಾಗಿದೆ. ಮೊದಲು ಇಬ್ಬರು ಗೆಳೆಯರಾಗಿದ್ದು, ಕ್ರಮೇಣ ಗೆಳೆತನ ಪ್ರೇಮಕ್ಕೆ ತಿರುಗಿತ್ತು. ಅಲ್ಲದೆ ಮುಂದುವರಿದು ಸನ್ನಿ, ಪಿಂಕಿಯನ್ನು ತನ್ನ ಬೈಕಿನಲ್ಲಿ ಕೂರಿಸಿಕೊಂಡು ಇಬ್ಬರೂ ಸುತ್ತಾಡಲು ಪ್ರಾರಂಭಿಸಿದರು. ಪಿಂಕಿಗೆ ಚಾಕಲೇಟ್ಸ್ ನೀಡುವುದರಿಂದ ಹಿಡಿದು ದಿನದ ಹೆಚ್ಚಿನ ಸಮಯವನ್ನು ಸನ್ನಿ ಜೊತೆಯೇ ಕಳೆಯಲು ಆರಂಭಿಸಿದ್ದಳು.

love complaint 1

ಇಷ್ಟೆಲ್ಲಾ ಆದ ಇವರ ಪ್ರೇಮ ಪ್ರಸಂಗ ಜಾಸ್ತಿ ದಿನ ಗುಟ್ಟಾಗಿ ಉಳಿಯಲಿಲ್ಲ. ಇವರಿಬ್ಬರು ಹಲವಾರು ಸ್ಥಳಗಳಿಗೆ ತಿರುಗಾಡುತ್ತಿರುವ ವಿಚಾರ ಪಿಂಕಿ ಪತಿ ಗಮನಕ್ಕೆ ಬಂದಿದೆ. ಈ ವಿಚಾರ ಪತಿಗೆ ತಿಳಿಯುತ್ತಿದ್ದಂತೆಯೇ ಪಿಂಕಿ ಜೀವನದಲ್ಲಿ ತೊಂದರೆ ಆರಂಭವಾಗಿದೆ. ಪತ್ನಿಯ ಅಕ್ರಮ ಸಂಬಂಧದ ವಿಚಾರ ತಿಳಿಯುತ್ತಿದ್ದಂತೆಯೇ ಪತಿ ತಮ್ಮ ಮನೆಯನ್ನು ದೆವ್ಲಿಯಿಂದ ಚಿರಾಗ್ ದಿಲ್ಲಿಗೆ ಕಳೆದ ತಿಂಗಳಲ್ಲಿ ಶಿಫ್ಟ್ ಮಾಡಿದರು. ಆದರೆ ಈ ವೇಳೆ ಪಿಂಕಿ ನಾನು ಮನೆಯಲ್ಲೇ ಇದ್ದು, ಕುಟುಂಬಸ್ಥರನ್ನು ನೋಡಿಕೊಳ್ಳುವುದಾಗಿ ತನ್ನ ಗಂಡನಲ್ಲಿ ಹೇಳಿದ್ದಾಳೆ. ಆ ಬಳಿಕ ಪಿಂಕಿ ಪತಿ ಕೆಲಸದ ನಿಮಿತ್ತ ಹೊರಗಡೆ ಹೋದ ನಂತರ ಸನ್ನಿ ಆಗಾಗ ಮನೆಗೆ ಬರುತ್ತಿದ್ದನು. ಸನ್ನಿಯ ಈ ನಡತೆಯಿಂದ ಪಿಂಕಿಗೆ ತಾನು ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ತಪ್ಪಿನ ಅರಿವಾಯಿತು. ಹೀಗಾಗಿ ಸನ್ನಿಯನ್ನು ದೂರ ಮಾಡಲು ಪ್ರಯತ್ನಿಸುತ್ತಾಳೆ.

couple

ಪಿಂಕಿಯ ನಡವಳಿಕೆಯಲ್ಲಿ ವ್ಯತ್ಯಾಸ ಕಂಡ ಸನ್ನಿಗೆ ಸಿಟ್ಟು ನೆತ್ತಿಗೇರಿತ್ತು. ಪರಿಣಾಮ ಆಗಾಗ ಪಿಂಕಿಗೆ ಕರೆ ಮಾಡಿ ಗಂಡನಿಗೆ ಡಿವೋರ್ಸ್ ನೀಡುವಂತೆ ಒತ್ತಾಯಿಸಿದ್ದಾನೆ. ಆದರೆ ಸನ್ನಿಯ ಮಾತನ್ನು ನಿರಾಕರಿಸಿದ ಪಿಂಕಿ, ತಮ್ಮಿಬ್ಬರ ಸಂಬಂಧವನ್ನು ಕೊನೆಗೊಳಿಸುವಂತೆ ಕೇಳಿಕೊಂಡಿದ್ದಾಳೆ. ಆದರೆ ಯಾವುದೇ ಕಾರಣಕ್ಕೂ ಪಿಂಕಿಯನ್ನು ಬಿಡಲ್ಲ ಎಂದು ಸನ್ನಿ ದಿಟ್ಟ ನಿರ್ಧಾರ ತೆಗೆದುಕೊಂಡನು. ಕಳೆದ ವಾರ ಪಿಂಕಿ, ಹೀಗೆ ನೀನು ನನ್ನ ಹಿಂದೆ ಬಿದ್ದರೆ ದೂರು ನೀಡುವುದಾಗಿ ಬೆದರಿಕೆ ಹಾಕಿದ್ದಾಳೆ. ಇದರಿಂದ ಕೋಪೋದ್ರಿಕ್ತನಾದ ಸನ್ನಿ, ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಕೈಯಲ್ಲಿ ಚಾಕು ಹಿಡಿದುಕೊಂಡು ನೇರವಾಗಿ ಪಿಂಕಿ ಮನೆಗೆ ತೆರಳಿದ್ದಾನೆ. ಅಲ್ಲದೆ ನಾವಿಬ್ಬರು ಓಡಿಹೋಗುವಂತೆ ಪಿಂಕಿಯಲ್ಲಿ ಹೇಳಿದ್ದಾನೆ. ಆದರೆ ಸನ್ನಿಯ ಈ ಮನವಿಯನ್ನು ಪಿಂಕಿ ನಿರಾಕರಿಸಿ, ಮನೆಯಿಂದ ಹೊರ ನಡೆಯುವಂತೆ ಗದರಿಸಿದ್ದಾಳೆ. ಈ ವೇಳೆ ಇಬ್ಬರ ಮಧ್ಯೆ ವಾಗ್ವಾದ ನಡೆದಿದೆ.

lover

ಇಬ್ಬರ ನಡುವೆ ನಡೆದ ಮಾತಿನ ಚಕಮಕಿಯ ವೇಳೆ ಸನ್ನಿ `ದಯವಿಟ್ಟು ನನ್ನ ಲೈಫ್ ಗೆ ಬಾ’ ಎಂದು ಪದೇ ಪದೇ ಬೇಡಿಕೊಂಡಿದ್ದಾನೆ. ಒಂದು ವೇಳೆ ನನ್ನೊಂದಿಗೆ ಜೀವನ ಮಾಡಲು ಬರದಿದ್ದರೆ ನಿನ್ನನ್ನು ಸಾಯಿಸುವುದಾಗಿ ಬೆದರಿಕೆಯನ್ನೂ ಹಾಕಿದ್ದಾನೆ. ಆದರೆ ಸನ್ನಿ ಮಾತುಗಳನ್ನೆಲ್ಲಾ ಪಿಂಕಿ ನಿರಾಕರಿಸುತ್ತಲೇ ಬಂದಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಸನ್ನಿ, ತನ್ನ ಕೈಯಲಿದ್ದ ಚಾಕುವಿನಿಂದ ಪಿಂಕಿ ಎದೆ ಹಾಗೂ ಸೊಂಟಕ್ಕೆ 12ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ. ಈ ವೇಳೆ ತಾನು ಪರಾರಿಯಾಗದೇ ಅಲ್ಲೇ ಇದ್ದು, ತನ್ನ ಕುತ್ತಿಗೆಯನ್ನೂ ಸೀಳಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ.

police 1 1

ಈ ವೇಳೆ ಪಿಂಕಿ ಇದ್ದ ಮನೆ ಮಾಲೀಕ ಮಹಿಪಾಲ್ ಸಿಂಗ್ ಅನುಮಾನಗೊಂಡು ತನ್ನ ಪತ್ನಿಯನ್ನು ಪಿಂಕಿ ಇದ್ದ ಫ್ಲಾಟ್ ಗೆ ಹೋಗಲು ಹೇಳಿದ್ದಾರೆ. ಹೀಗೆ ಹೋದಾಗ ಪಿಂಕಿ ಹಾಗೂ ಇನ್ನೊಬ್ಬ ವ್ಯಕ್ತಿ ರಕ್ತದ ಮಡುವಿನಲ್ಲಿ ಬಿದ್ದಿರುವುದು ಬೆಳಕಿಗೆ ಬಂದಿದೆ. ಕೂಡಲೇ ಓಡಿ ಬಂದ ಪತ್ನಿ, ಮಹಿಪಾಲ್ ಸಿಂಗ್ ಜೊತೆ ಪೊಲೀಸರಿಗೆ ಕರೆ ಮಾಡುವಂತೆ ಹೇಳಿದ್ದಾರೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಇಬ್ಬರನ್ನೂ ನಗರದ ಏಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಅದಾಗಲೇ ಪಿಂಕಿ ಮೃತಪಟ್ಟಿದ್ದು, ಸನ್ನಿಯನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಆತನ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

delhi police 1

Share This Article
Leave a Comment

Leave a Reply

Your email address will not be published. Required fields are marked *