ಆಹಾರವೆಂದು ಭಾವಿಸಿ ಮರಿಗೆ ಸಿಗರೇಟ್ ತುಂಡು ತಿನಿಸಿದ ಹಕ್ಕಿ

Public TV
2 Min Read
cigarrete bird

ಫ್ಲೋರಿಡಾ: ಮನುಷ್ಯನ ಸ್ವಾರ್ಥಕ್ಕೆ ಸ್ವರ್ಗದಂತಿದ್ದ ಪ್ರಕೃತಿ ಈಗಾಗಲೇ ನರಕವಾಗುತ್ತಿದೆ. ಮನುಷ್ಯ ತನ್ನ ಸ್ವಾರ್ಥಕ್ಕೆ ನಿಸರ್ಗವನ್ನು ಬಳಸಿಕೊಂಡು ನಾಶ ಮಾಡುತ್ತಿರುವುದಕ್ಕೆ ಹಕ್ಕಿಯೊಂದು ತನ್ನ ಮರಿಗೆ ಆಹಾರವೆಂದು ಭಾವಿಸಿ ಸಿಗರೇಟ್ ತಿನಿಸುತ್ತಿರುವ ಫೋಟೋ ನೋಡುಗರ ಮನಕಲಕುವಂತಿದ್ದು, ಮನುಷ್ಯನ ಸ್ವರ್ಥಕ್ಕೆ ಮೂಕ ಪ್ರಾಣಿ-ಪಕ್ಷಿಗಳು ದುಸ್ಥಿತಿಗೆ ತಲುಪಿರುವುದಕ್ಕೆ ಇದು ಉದಾಹರಣೆಯಾಗಿದೆ.

cigarrete bird 2

ಮನುಷ್ಯನ ತಪ್ಪಿಗೆ ಒಂದಲ್ಲ ಒಂದು ದಿನ ಪ್ರಕೃತಿ ಶಿಕ್ಷೆ ಕೊಟ್ಟೇ ಕೊಡುತ್ತದೆ. ಆದರೆ ಅದರ ಪರಿಣಾಮ ಮನುಷ್ಯನಿಗಿಂತ ಮೊದಲು ಮೂಕ ಪ್ರಾಣಿ-ಪಕ್ಷಿಗಳು ಅನುಭವಿಸುತ್ತಿರುವುದು ವಿಪರ್ಯಾಸ. ಇತ್ತೀಚಿಗೆ ನ್ಯಾಷನಲ್ ಆಡೊನಾನ್ ಸೊಸೈಟಿಯ ಸ್ವಯಂಸೇವಕ ಮತ್ತು ಛಾಯಾಗ್ರಾಹಕರಾಗಿರುವ ಕರೆನ್ ಮೇಸನ್ ಅವರು ಕ್ಲಿಕ್ಕಿಸಿರುವ ಚಿತ್ರವೊಂದು ಈಗ ಭಾರಿ ಚರ್ಚೆಯಲ್ಲಿದೆ. ಮಾನವ ಭೂಮಿ ಮೇಲೆ ಬದಕುವ ಜೀವಿಗಳ ಪಾಲಿಗೆ ಎಂತಹ ಅಪಾಯವನ್ನು ತಂದೊಡ್ಡಿದ್ದಾನೆ ಎನ್ನುವುದನ್ನು ಈ ಚಿತ್ರ ಸ್ಪಷ್ಟವಾಗಿ ತೋರಿಸುತ್ತದೆ.

cigarrete bird 1

ಕೆಲವು ದಿನಗಳ ಹಿಂದೆ ಫ್ಲೋರಿಡಾದ ಸೆಂಟ್ ಪೆಟಿಸ್ ಬೀಚ್‍ನಲ್ಲಿ ಕರೆನ್ ಹೋಗಿದ್ದಾಗ ಈ ಚಿತ್ರವನ್ನು ಸೆರೆಹಿಡಿದಿದ್ದರು. ಬೀಚ್‍ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ತಾಯಿ ಹಕ್ಕಿಯೊಂದು ಮರಿಗೆ ಆಹಾರವಾಗಿ ಸಿಗರೇಟ್ ತುಂಡನ್ನು ತಿನ್ನಿಸುತ್ತಿರುವುದು ಕಂಡು ಅದರ ಫೋಟೋವನ್ನು ಕರೆನ್ ಕ್ಲಿಕ್ಕಿಸಿದ್ದಾರೆ. ಅಂದರೆ ಆಹಾರವೆಂದು ಭಾವಿಸಿ ನೇರವಾಗಿ ವಿಷವನ್ನು ಮರಿಗೆ ತಾಯಿ ಹಕ್ಕಿ ಉಣ್ಣಿಸುತ್ತಿರುವುದು ನಿಜಕ್ಕೂ ಮಾನವ ಯಾವ ಸ್ಥಿತಿಗೆ ಪ್ರಕೃತಿಯನ್ನು ತಂದು ನಿಲ್ಲಿಸಿದ್ದಾನೆ ಎಂಬುದು ತಿಳಿಯುತ್ತದೆ.

cigarrete bird 3

ಈ ಬಗ್ಗೆ ಮಾತನಾಡಿದ ಕರೆನ್ ಅವರು, ಬೀಚ್‍ನಲ್ಲಿ ತಾಯಿ ಹಕ್ಕಿ ಮರಿಗೆ ಏನೋ ವಿಚಿತ್ರವಾದ ವಸ್ತುವನ್ನು ತಿನಿಸುತ್ತಿರುವುದು ನನ್ನ ಕಣ್ಣಿಗೆ ಬಿತ್ತು. ಹಕ್ಕಿ ಮೀನನ್ನು ತಿನಿಸುತ್ತಿರಲಿಲ್ಲ ಹೀಗಾಗಿ ನಾನು ಅದರ ಫೋಟೋ ತೆಗೆದೆ. ಆಗ ನಾನು ಹಕ್ಕಿ ಸಿಗರೇಟ್ ತಿನಿಸುತ್ತಿದೆ ಎನ್ನುವುದು ಗೊತ್ತಾಗಲಿಲ್ಲ. ಬಳಿಕ ಮನೆಗೆ ಬಂದು ಫೋಟೋಗಳನ್ನು ನೋಡಿದಾಗ ಹಕ್ಕಿ ಮರಿಗೆ ಸಿಗರೇಟ್ ತುಂಡನ್ನು ತಿನ್ನಿಸುತ್ತಿರುವುದನ್ನ ನೋಡಿ ಅಚ್ಚರಿಯಾಯ್ತು ಎಂದು ಆತಂಕ ವ್ಯಕ್ತಪಡಿಸಿದರು.

cigarrete bird 5

ಅಲ್ಲದೆ ಬಳಿಕ ಈ ಆಘಾತಕಾರಿ ಫೋಟೋವನ್ನು ತಾವು ವೈಲ್ಡ್‍ಲೈಫ್ ಗ್ರೂಪ್‍ಗಳಿಗೆ ಕಳುಹಿಸಿದೆ. ಅಲ್ಲದೆ ಈ ಬಗ್ಗೆ ಜಾಗೃತಿ ಮೂಡಿಸಲು ಫೇಸ್‍ಬುಕ್ ಹಾಗೂ ಇತರೇ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋವನ್ನು ಹರಿಬಿಟ್ಟೆ ಎಂದು ಕರೆನ್ ತಿಳಿಸಿದರು.

ಪ್ಲಾಸ್ಟಿಕ್ ತ್ಯಾಜ್ಯ ಜಗತ್ತನ್ನು ಬಾಧಿಸುತ್ತಿರುವ ಬಹುದೊಡ್ಡ ಸಮಸ್ಯೆ. ಅದರ ಜತೆಗೆ ಇನ್ನೊಂದು ತ್ಯಾಜ್ಯ ವಸ್ತು ನಮ್ಮ ಸಮುದ್ರ ತೀರಗಳಲ್ಲಿ ರಾಶಿ ಬೀಳುತ್ತಿದೆ. ಅದರಲ್ಲೂ ಬೀಚ್‍ಗೆ ಬಂದ ಮಂದಿ ಬಳಸಿ ಬಿಸಾಡುವ ಸಿಗರೇಟ್ ತುಂಡುಗಳು ಜಲಚರ ಮತ್ತು ಇತರ ಜೀವಿಗಳ ಪಾಲಿಗೆ ಬಹುದೊಡ್ಡ ಅಪಾಯವನ್ನು ಸೃಷ್ಟಿಸುತ್ತಿದೆ.

cigarrete bird 6

ಪ್ರತಿವರ್ಷ 5.5 ಟ್ರಿಲಿಯನ್ ಫಿಲ್ಟರ್ ಸಿಗರೇಟ್ ಅನ್ನು ಪರಿಸರದಲ್ಲಿ ಎಸೆಯಲಾಗುತ್ತದೆ ಎಂದು ಸ್ಯಾನ್ ಡಿಯಾಗೋ ಸ್ಟೇಟ್ ಯೂನಿವರ್ಸಿಟಿ ಗ್ರಾಜುಯೇಟ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್ ನಡೆಸಿದ ಅಭಿಯಾನದಿಂದ ತಿಳಿದಿದೆ. ಪ್ಲಾಸ್ಟಿಕ್ ಸ್ಟ್ರಾಗಳಿಗಿಂತ, ಸಿಗರೇಟ್ ತುಂಡುಗಳು ನಮ್ಮ ಸಾಗರಗಳಿಗೆ ದೊಡ್ಡ ಅಪಾಯವಾಗಿದೆ ಎಂದು ವರದಿ ಕೂಡ ಹೇಳುತ್ತದೆ.

cigarrete bird 7

ಒಂದೆಡೆ ಪ್ಲಾಸ್ಟಿಕ್, ಇ ತ್ಯಾಜ್ಯ ಸಮುದ್ರವನ್ನು ಕಲುಷಿತಗೊಳಿಸುತ್ತಿದೆ. ಚಿರತೆ, ಹುಲಿ, ಆನೆಗಳಂತಹ ಕಾಡು ಪ್ರಾಣಿಗಳು ಆಹಾರವನ್ನು ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬರುತ್ತಿವೆ. ಮಾನವನ ಅಟ್ಟಹಾಸಕ್ಕೆ ಲಕ್ಷಾಂತರ ಜೀವಿಗಳು ಸುಳಿವು ಇಲ್ಲದಂತೆ ಅಳಿದು ಹೋಗಿವೆ. ಇನ್ನಾದರು ಮಾನವ ಇನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ನಾಶ ಮಾಡುವುದನ್ನು ಬಿಟ್ಟಿ, ಅದರ ಉಳಿವಿಗಾಗಿ ಶ್ರಮಿಸಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *