ಬೆಂಗಳೂರು: ಪದೇ ಪದೇ ಪ್ರೀತಿಸು ಎಂದು ಇಬ್ಬರು ಯುವಕರ ಹಿಂಸೆ ತಾಳಲಾರದೇ ಅಪ್ರಾಪ್ತ ಬಾಲಕಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನೆಲಮಂಗಲ ತಾಲೂಕಿನ ಎಡೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಧನಲಕ್ಷ್ಮೀ (14) ಮೃತ ದುರ್ದೈವಿ. ಈಕೆ ನೆಲಮಂಗಲ ತಾಲೂಕಿನ ಎಡೇಹಳ್ಳಿ ಗ್ರಾಮದ ನಿವಾಸಿಯಾಗಿದ್ದು, ಆರೋಪಿಗಳಾದ ಜಗದೀಶ್ ಹಾಗೂ ರವಿಕುಮಾರ್ ಪ್ರೀತಿಸುವಂತೆ ಬಾಲಕಿಗೆ ಕಿರುಕುಳ ನೀಡುತ್ತಿದ್ದರು.
ಯುವಕರ ಕಿರುಕುಳ ತಾಳಲಾರದೆ ಧನಲಕ್ಷ್ಮೀ ಮನೆಯಲ್ಲಿ ಯಾರೂ ಇಲ್ಲದ ವೇಳೆ ಸೀಮೆ ಎಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೀಮೆಎಣ್ಣೆ ಸುರಿದುಕೊಂಡ ನಂತರ ಬಾಲಕಿಯನ್ನು ಚಿಕಿತ್ಸೆಗೆಂದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು.
ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಧನಲಕ್ಷ್ಮೀ ಮೃತಪಟ್ಟಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಜಗದೀಶ್ ಹಾಗೂ ರವಿಕುಮಾರ್ ಎಂಬ ಇಬ್ಬರನ್ನೂ ಬಂಧಿಸಿದ್ದಾರೆ. ಈ ಬಗ್ಗೆ ಡಾಬಸ್‍ಪೇಟೆಯಲ್ಲಿ ಪ್ರಕರಣ ದಾಖಲಾಗಿದೆ.