ಕೋಲಾರ: ಮಂಡ್ಯ ಬಸ್ ದುರಂತಕ್ಕೆ ಕೇಂದ್ರ ಸರ್ಕಾರದಿಂದ ಪರಿಹಾರ ಹಣ ಬಂದ ಕ್ರೆಡಿಟ್ ಮಾಜಿ ಸಂಸದ ಶಿವರಾಮೇಗೌಡರಿಗೆ ಸಲ್ಲುತ್ತದೆ ಎಂದು ಸಣ್ಣ ನೀರಾವರಿ ಸಚಿವ ಪುಟ್ಟರಾಜು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಮಂಡ್ಯ ಬಸ್ ದುರಂತದ ಬಗ್ಗೆ ಕೇಂದ್ರಕ್ಕೆ ಪರಿಹಾರ ಹಣಕ್ಕಾಗಿ ಒತ್ತಾಯಿಸಿದ್ದು ನಾನು ಎಂದು ಟ್ವೀಟ್ ಮಾಡಿದ್ದ ಶಿವರಾಮೇಗೌಡರನ್ನು ಸಮರ್ಥಿಸಿಕೊಂಡು, ಆ ಕ್ರೆಡಿಟ್ ಅವರಿಗೆ ಸಲ್ಲಬೇಕು. ಈ ದುರಂತದ ಬಗ್ಗೆ ಕೇಂದ್ರ ಸರ್ಕಾರದಿಂದ ಪರಿಹಾರದ ಕುರಿತು ಅಂದಿನ ಜಿಲ್ಲಾಧಿಕಾರಿಗಳು ವಿಸ್ತೃತ ವರದಿ ನೀಡಿದ್ದರು. ಅವರ ವರದಿ ಆಧಾರದ ಮೇಲೆ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಮಾಡಿತ್ತು. ಅದರಂತೆ ಕಳೆದ ಫೆಬ್ರವರಿಯಲ್ಲಿಯೇ ಪರಿಹಾರ ಬಂದಿತ್ತು. ಆ ಸಮಯದಲ್ಲಿ ಲೋಕಸಭಾ ಚುನಾವಣೆಯಾದ ಕಾರಣ ಚೆಕ್ ವಿತರಣೆ ಮಾಡಲಾಗಲಿಲ್ಲ. ಈಗ ಆ ಪ್ರಕ್ರಿಯೆ ಡಿಸಿ ಅವರ ನೇತೃತ್ವದಲ್ಲಿ ನಡೆಯುತ್ತಿದೆ. ಈ ಕ್ರೆಡಿಟ್ ಆಗಿನ ಲೋಕಸಭಾ ಸದಸ್ಯರಿಗೆ ಸಲ್ಲುತ್ತದೆ. ಇನ್ನು ಹೆಚ್ಚಿನ ಪರಿಹಾರ ಕೊಡಿಸಲು ಆಗುವಂತಿದ್ದರೆ ಕೊಡಿಸಲಿ ಎಂದು ಸಂಸದೆ ಸುಮಲತಾರಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಇದೇ ವೇಳೆ ಮೈತ್ರಿ ಸರ್ಕಾರದ ಬಗ್ಗೆ ಮಾತನಾಡಿ, ಬಹುತೇಕ ಸೋತವರು ಸರ್ಕಾರ ಉಳಿಯುವುದಿಲ್ಲ ಎಂದು ಹೇಳುತ್ತಿದ್ದಾರಷ್ಟೆ. ಆದರೆ ಐದು ವರ್ಷ ಸಿಎಂ ನೇತೃತ್ವದಲ್ಲಿ ನೂರಕ್ಕೆ ನೂರರಷ್ಟು ಮೈತ್ರಿ ಸರ್ಕಾರ ನಡೆಯುತ್ತದೆ. ಯಾರು ಯಾವ ಬ್ಲಾಕ್‍ಮೇಲ್‍ಗೂ ನಾವು ಮಣಿದಿಲ್ಲ. ಸರ್ಕಾರಕ್ಕೆ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ ಪಕ್ಷೇತರರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಜೆಡಿಎಸ್‍ನಲ್ಲಿ ಮತ್ತಷ್ಟು ಜನರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿಸಲು ಚಿಂತನೆ ಮಾಡಲಾಗಿದೆ. ಈ ಮೂಲಕ ಜೆಡಿಎಸ್ ಖೋಟಾದ ಖಾಲಿ ಇರೋ ಸಚಿವ ಸ್ಥಾನ ಮುಸ್ಲಿಂ ಸಮುದಾಯದವರಿಗೆ ನೀಡಲಾಗುತ್ತದೆ. ಎಲ್ಲಾ ಸಮುದಾಯಕ್ಕೆ ಒತ್ತುಕೊಡುವ ನಿಟ್ಟಿನಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡರು ಮುಸ್ಲಿಂ ಸಮುದಾಯಕ್ಕೆ ಸಚಿವ ಸ್ಥಾನ ನೀಡಲು ತೀರ್ಮಾನಿಸಿದ್ದಾರೆ ಎಂದು ಹೇಳಿದರು.