ಬೆಂಗಳೂರು: ಜಿಂದಾಲ್ ಕಂಪನಿಗೆ ಭೂಮಿ ಕೊಡುವುದನ್ನು ನಾನು ಬೆಂಬಲಿಸುತ್ತೇನೆ. ಬಂಡವಾಳ ಹೂಡಿ ಕಂಪನಿಗಳು ಉದ್ಯೋಗ ಸೃಷ್ಟಿಸುತ್ತವೆ. ಹೀಗಾಗಿ ತೆರಿಗೆ ಕಟ್ಟಿದೋರಿಗೆ ಭೂಮಿ ಕೊಡುತ್ತಿದ್ದೇವೆ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳುವ ಮೂಲಕ ಜಿಂದಾಲ್ ಪರ ನಿಂತಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜಿಂದಾಲ್ ಗೆ ಭೂಮಿ ಕೊಡುವುದನ್ನು ನಾನಂತೂ ಬೆಂಬಲಿಸುತ್ತೇನೆ. ಇಂತಹ ಕಂಪನಿಗಳಿಗೆ ಅವಕಾಶ ನೀಡದಿದ್ದರೆ ಸರ್ಕಾರ ಎಲ್ಲಿಂದ ಉದ್ಯೋಗ ಸೃಷ್ಟಿ ಮಾಡುತ್ತದೆ. ನಾನು ಜಿಂದಾಲ್ ಪರ ಇದ್ದೇನೆ. ಹಳ್ಳಿಗಳಿಂದ ಯಾರೂ ತೆರಿಗೆ ಕಟ್ಟೋದಿಲ್ಲ. ವ್ಯವಸಾಯ ಮಾಡಿಕೊಂಡು ಇರುತ್ತಾರೆ ಅಷ್ಟೇ. ಸರ್ಕಾರಕ್ಕೆ ತೆರಿಗೆ ಕಟ್ಟೋದು, ಬಂಡವಾಳ ಹೂಡೋದು ಕಂಪನಿಗಳು, ಉದ್ಯಮಿಗಳು. ಅವರು ಜಿಎಸ್‍ಟಿ ಕಟ್ಟುತ್ತಾರೆ ಹಾಗೂ ಇತರೆ ನಿಯಮಗಳನ್ನು ಕೂಡ ಪಾಲಿಸುತ್ತಾರೆ ಎಂದು ಉದ್ಯಮಿಗಳ ಪರ ಡಿಕೆಶಿ ಮಾತನಾಡಿದರು. ಇದನ್ನೂ ಓದಿ:ಬಿಎಸ್‍ವೈ ಕಾಲದಲ್ಲೇ ಜಿಂದಾಲ್ ಯೋಜನೆಗೆ ಚಾಲನೆ: ಕೆ.ಜೆ.ಜಾರ್ಜ್
ಬಳಿಕ ಜಿಂದಾಲ್ ವಿಚಾರಕ್ಕೆ ಬಿಜೆಪಿ ಹೋರಾಟ ವಿಚಾರವಾಗಿ ಪ್ರತಿಕ್ರಿಯಿಸಿ, ಅವರು ಈ ಪ್ರತಿಭಟನೆಯನ್ನು ಮುಂಚೆಯೇ ಮಾಡಬೇಕಿತ್ತು. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ್ ಶೆಟ್ಟರ್ ಅವರೇ ಜಿಂದಾಲ್ ವಿಚಾರಕ್ಕೆ ಫೌಂಡೇಶನ್ ಹಾಕಿದವರು. ಬೇಕಾದರೆ ದಾಖಲೆಗಳನ್ನು ತೆಗೆದು ನೋಡಲಿ. ಬಿಜೆಪಿಯವರು ಲೇಟ್ ಮಾಡಬಾರದು ಕೂಡಲೇ ಹೋರಾಟ ಆರಂಭಿಸಲಿ. ಜಿಂದಾಲ್ ಒಳ್ಳೆಯ ಉದ್ಯಮಿ, ಲಾಭ ಇಲ್ಲದೇ ಯಾರೂ ವ್ಯವಹಾರ ಮಾಡಲ್ಲ. ಆದರೆ ಇದರಿಂದ ಉದ್ಯೋಗ ಸೃಷ್ಟಿಯಾಗುತ್ತದೆ. ಆಗ ನಿರುದ್ಯೋಗಿಗಳಿಗೆ ಕೆಲಸ ಸಿಗುತ್ತದೆ, ಸಹಾಯ ಆಗುತ್ತದೆ ಎಂದು ಹೇಳಿದರು.
ಹಾಗೆಯೇ ಪರಭಾರೆ ವಿಚಾರ ಸಿಎಂ ಮರು ಪರಿಶೀಲನೆ ಮಾಡುವ ಸಂಬಂಧ ಮಾತನಾಡಿ, ಹೌದು ಮರು ಪರಿಶೀಲನೆ ಮಾಡಲಿ ಅದರಲ್ಲಿ ತಪ್ಪಿಲ್ಲ. ಇದರಿಂದ ಉದ್ಯೋಗ ಸೃಷ್ಟಿಯಾಗಿದೆ. ನಮ್ಮ ರಾಜ್ಯದಿಂದ ಉದ್ಯಮಿಗಳು ಹೊರ ಹೋಗಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ರಿದೇ ವೇಳೆ ಕೋಳಿವಾಡ ಭವಿಷ್ಯ ವಿಚಾರ ಮಾತನಾಡಿದ ಅವರು, ಬಹಳ ಜನರ ಭವಿಷ್ಯ ನೋಡಿದ್ದೀನಿ, ಕೇಳಿದ್ದೀನಿ. ಬಿಜೆಪಿಯವರ ಭವಿಷ್ಯವನ್ನೂ ಕೇಳಿದ್ದೀನಿ. 20 ಜನ ಶಾಸಕರು ಮೈತ್ರಿಯಿಂದ ಹೊರ ಬರುತ್ತಾರೆ. ಅವರೇ ಕಚ್ಚಾಡ್ಕೊತ್ತಾರೆ ಎಂದು ಯಡಿಯೂರಪ್ಪ ಹೇಳಿದ್ದರು. ಅವರವರ ಖುಷಿಗೆ ಏನಾದರೂ ಹೇಳಿಕೊಳ್ಳಲಿ. ಈ ಸರ್ಕಾರದ ಬಗ್ಗೆ ಯಾರೂ ಏನೇ ಭವಿಷ್ಯ ಬೇಕಾದರೂ ನುಡಿಯಲಿ. ಆದರೆ ಸರ್ಕಾರ ಮಾತ್ರ ಗಟ್ಟಿಯಾಗಿ ಉಳಿಯುತ್ತದೆ. ಏನೇನೋ ಭವಿಷ್ಯ ಹೇಳಿದವರನ್ನು ಕಂಡಿದ್ದೇನೆ. ಅದೆಲ್ಲ ಏನೂ ಆಗಲ್ಲ. ಎಲ್ಲ ಶಾಸಕರಿಗೂ ಆಸೆ ಆಕಾಂಕ್ಷೆಗಳು ಇರುತ್ತವೆ. ಹಿರಿಯರು ಪ್ರಾಮಾಣಿಕರಿಗೂ ಅವಕಾಶ ಸಿಕ್ಕೇ ಸಿಗುತ್ತದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.