ಬೆಂಗಳೂರು: ಜಿಂದಾಲ್ ಸ್ಟೀಲ್ ಕಂಪನಿಗೆ ಬಳ್ಳಾರಿಯ ತೋರಣಗಲ್ಲು, ಕುರೆಕುಪ್ಪದಲ್ಲಿ 2 ಸಾವಿರ ಎಕರೆ ಹಾಗೂ ಮುಸೇನಾಯಕನಹಳ್ಳಿ, ಯರಬನಹಳ್ಳಿ ಬಳಿ 1,666.73 ಎಕರೆ ಸೇರಿದಂತೆ ಒಟು 3,666.73 ಎಕರೆ ಭೂಮಿ ನೀಡಿಕೆ ನಿರ್ಧಾರದಿಂದ ರಾಜ್ಯ ಸರ್ಕಾರ ತಾತ್ಕಾಲಿಕವಾಗಿ ಹಿಂದೆ ಸರಿಯಲಿದೆ ಎನ್ನಲಾಗಿದೆ.
ಬೃಹತ್ ಕೈಗಾರಿಕಾ ಸಚಿವ ಕೆ.ಜೆ ಜಾರ್ಜ್ ಅವರ ಒತ್ತಡಕ್ಕೆ ಮಣಿದು ಮೈತ್ರಿ ಸರ್ಕಾರ ಮೇ 27ರ ಸಂಪುಟದ ಸಮ್ಮತಿ ನೀಡಿತ್ತು. ಆದರೆ ಕ್ಯಾಬಿನೆಟ್ ನಿರ್ಣಯವನ್ನು ಮಾಜಿ ಸಚಿವ ಎಚ್.ಕೆ ಪಾಟೀಲ್ ತೀವ್ರವಾಗಿ ವಿರೋಧಿಸಿದ್ದರು. ಕ್ಯಾಬಿನೆಟ್ ಸಭೆಗೆ ಗೈರಾಗಿದ್ದ ಜಾರ್ಜ್, ಅಂದು ದೆಹಲಿಗೆ ತೆರಳಿದ್ದ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್‍ಗೆ ವಿಷಯ ತಿಳಿಸಿದ್ದರು ಎನ್ನಲಾಗಿದೆ.
ಆದರೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿಗಳ ಜೊತೆ ವೇಣುಗೋಪಾಲ್ ಚರ್ಚೆ ನಡೆಸಿ, ಪರಭಾರ ಮಾಡಿದರೆ ಕಾಂಗ್ರೆಸ್‍ಗೆ ಕೆಟ್ಟ ಹೆಸರು ಬರಲಿದೆ. ಸದ್ಯಕ್ಕೆ ಯೋಜನೆ ಕೈಬಿಡೋಣ ಎಂದು ಹೇಳಿದ್ದಾರೆ ಎನ್ನಲಾಗಿದೆ.
ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಇದೇ 14, 15 ಮತ್ತು 16 ರಂದು ಅಹೋರಾತ್ರಿ ಧರಣಿ ನಡೆಸಿ, ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದೆ. ಹೀಗಾಗಿ ಇಷ್ಟು ದಿನ ಮೌನವಹಿಸಿದ್ದ ಮುಖ್ಯಮಂತ್ರಿಗಳು ಸೇಲ್ ಡೀಲ್ ಒಪ್ಪಂದದಲ್ಲಿ ಗೊಂದಲಗಳಿವೆ ಎಂದು ಭೂಮಿ ನೀಡಿಕೆ ಪ್ರಕ್ರಿಯೆಯನ್ನು ತಾತ್ಕಾಲಿಕವಾಗಿ ಮುಂದೂಡುತ್ತಾರೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಹಿಂಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಬಳ್ಳಾರಿಯ ತೋರಣಗಲ್‍ನಲ್ಲಿರುವ ಜಿಂದಾಲ್ ಕಾರ್ಖಾನೆ ದೇಶದಲ್ಲೇ ಅತಿ ದೊಡ್ಡದಾದ ಸ್ಟೀಲ್ ಕಾರ್ಖಾನೆ. ಈ ಕಾರ್ಖಾನೆ ಶುರು ಮಾಡಲು ಸರ್ಕಾರ 3 ಸಾವಿರ ಎಕರೆ ಭೂಮಿ ನೀಡಿತ್ತು. ಜೊತೆಗೆ ವಿದ್ಯುತ್, ನೀರು, ರೋಡ್ ವ್ಯವಸ್ಥೆ ಕೂಡಾ ಮಾಡಿಸಿತ್ತು. ತೋರಣಗಲ್ ಹಾಗೂ ವಡ್ಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಫ್ಯಾಕ್ಟರಿ ಕಟ್ಟಲಾಗಿದೆ. ಆದರೆ ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಪ್ರತಿ ವರ್ಷ ತೆರಿಗೆ ಕಟ್ಟುತ್ತಿಲ್ಲ. ಎರಡು ಗ್ರಾಮ ಪಂಚಾಯತ್‍ಗಳಿಗೆ ಪ್ರತಿ ವರ್ಷ 5 ಕೋಟಿ ರೂಪಾಯಿ ವಂಚನೆ ಮಾಡುತ್ತಿದೆ. ಆ ದಾಖಲೆ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು.