ಬೆಂಗಳೂರು: ಸಾಹಿತಿ ಗಿರೀಶ್ ಕಾರ್ನಾಡ್ ವೃತ್ತಿ ಏನೇ ಇದ್ದರೂ ಅವರು ಒಳ್ಳೆಯ ಸಾಹಿತಿ, ನಟ, ನಿರ್ದೇಶಕ, ನಿರ್ಮಾಪಕರಾಗಿದ್ದು, ಅದಕ್ಕಿಂತಲೂ ಅವರು ಒಬ್ಬ ಒಳ್ಳೆಯ ಮನುಷ್ಯರಾಗಿದ್ದರು ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಸಂತಾಪ ಸೂಚಿಸಿದರು.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಅವರೊಂದಿಗಿನ ಒಳ್ಳೆಯ ನೆನಪುಗಳು ಸಾಕಷ್ಟಿವೆ. ಎಕೆ 47, ಜನ್ಮದಾತ ಹೀಗೆ ಅವರ ಜೊತೆ ಮಾಡಿದ ಸಿನಿಮಾಗಳು ನೆನಪುಗಳನ್ನು ನೀಡಿವೆ. ಅವರು ಅಭಿನಯಿಸುವ ಮಾಡುವ ಶೈಲಿ ತುಂಬಾನೇ ಅದ್ಭುತವಾಗಿತ್ತು. ಇಷ್ಟು ಮಾತ್ರವಲ್ಲದೆ ಅವರಿಗೆ ಭಾಷೆಯಲ್ಲೂ ಹಿಡಿತವಿತ್ತು. ಇವೆಲ್ಲವನ್ನೂ ಕೇಳಲು ಚಂದ. ಆದರೆ ಇಂದು ಅವರು ನಮ್ಮಿಂದ ದೂರವಾಗಿರುವುದು ಸ್ಯಾಂಡಲ್‍ವುಡ್ ಗೆ ಮಾತ್ರವಲ್ಲ, ಇಡೀ ಭಾರತದ ಚಿತ್ರತಂಡಕ್ಕೆ ತುಂಬಲಾರದ ನಷ್ಟವಾಗಿದೆ ಎಂದರು.
ನಟನೆಯ ಸಂದರ್ಭದಲ್ಲಿ ಅವರು ಅತ್ಯಂತ ಆತ್ಮೀಯರಾಗಿರುತ್ತಿದ್ದರು. ಅವರಿಗೆ ನಾನೊಬ್ಬ ಹಿರಿಯವನು ಎಂಬ ಅಹಂಕಾರ ಇರಲಿಲ್ಲ. ಜೊತೆ ಇರುವಾಗ ತಮಾಷೆ ಮಾಡುತ್ತಿದ್ದರು ಎಂದರು.
ನಾನು ಅವರನ್ನು ಭೇಟಿಯಾಗದೇ ಹಲವು ವರ್ಷಗಳೇ ಕಳೆದಿವೆ. ಸದ್ಯ ನಾನು ಚೆನ್ನೈನಲ್ಲಿದ್ದೇನೆ. ಹೀಗಾಗಿ ಇಲ್ಲಿ ಬಂದ ಬಳಿಕ ಈ ವಿಚಾರ ತಿಳಿಯಿತು. ಒಟ್ಟಿನಲ್ಲಿ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತ ನೀಡಲಿ. ಹಾಗೆಯೇ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಶಿವರಾಜ್ ಕುಮಾರ್ ಆಶಿಸಿದರು.
ಅವರು ಯಾವತ್ತೂ ನಮ್ಮ ಜೊತೆ ಇರುತ್ತಾರೆ. ಎಲ್ಲರಿಗೂ ಅವರ ಮಾರ್ಗದರ್ಶನ ಇರಲಿ ಎಂದು ಭಾವಿಸುವುದಾಗಿ ತಿಳಿಸಿದರು. ಬಹು ಅಂಗಾಂಗ ವೈಫಲ್ಯದಿಂದ ಕಳೆದ 1 ತಿಂಗಳಿನಿಂದ ಬಳಲುತ್ತಿದ್ದ ಸಾಹಿತಿ ಬೆಂಗಳೂರಿನ ಲ್ಯಾವೆಲ್ಲಾ ರಸ್ತೆಯ ತಮ್ಮ ನಿವಾಸದಲ್ಲಿ ಇಂದು ನಿಧನ ಹೊಂದಿದ್ದಾರೆ.
ಸಾಹಿತಿಯ ನಿಧನಕ್ಕೆ ಸುದೀಪ್, ಪುನೀತ್ ರಾಜ್ ಕುಮಾರ್, ಉಪೇಂದ್ರ, ದರ್ಶನ್ ಸೇರಿದಂತೆ ಸ್ಯಾಂಡಲ್ ವುಡ್ ನ ಎಲ್ಲಾ ನಟರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.
https://www.youtube.com/watch?v=yF-htwgaLuA