ಮುಂಬೈ: 25 ವರ್ಷದ ಗಗನ ಸಖಿಯ ಮೇಲೆ ಆಕೆಯ ಸ್ನೇಹಿತ ಮತ್ತು ಆತನ ರೂಮ್‍ಮೇಟ್ಸ್ ಸಾಮೂಹಿಕವಾಗಿ ಅತ್ಯಾಚಾರ ಎಸಗಿರುವ ಘಟನೆ ಮುಂಬೈನ ಉಪನಗರ ಆಂಧೇರಿಯಲ್ಲಿ ನಡೆದಿದೆ.
ಈ ಘಟನೆಯು ಮಂಗಳವಾರ ರಾತ್ರಿ ಗೋನಿ ನಗರದಲ್ಲಿರುವ ಫ್ಲಾಟ್‍ನಲ್ಲಿ ನಡೆದಿದೆ. ಗಗನ ಸಖಿಯ ಸ್ನೇಹಿತನನ್ನು ಸ್ವಪ್ನಿಲ್ ಬಡೋಡಿಯಾ(23) ಎಂದು ಗುರುತಿಸಲಾಗಿದೆ. ಆರೋಪಿ ಬಡೋಡಿಯಾ ಕೂಡ ವಿಮಾನ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದು, ಇಬ್ಬರಿಗೂ ಪರಿಚಯವಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಸದ್ಯಕ್ಕೆ ಈ ಕುರಿತು ಯುವತಿ ತನ್ನ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಆರೋಪಿಸಿ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ದೂರಿನಲ್ಲಿ ಏನಿದೆ?
ಆರೋಪಿ ನನ್ನನ್ನು ಮಂಗಳವಾರ ಸಂಜೆ ಡಿನ್ನರ್‍ಗೆ ಕರೆದಿದ್ದನು. ಕೆಲಸ ಮುಗಿಸಿಕೊಂಡು ನನ್ನ ಲಗೇಜ್ ಅನ್ನು ಮನೆಯಲ್ಲಿ ಇಟ್ಟು ಬಳಿಕ ಒಟ್ಟಿಗೆ ಡಿನ್ನರ್ ಗೆ ಹೋಗಿ ಊಟ ಮಾಡಿದೆವು. ನಂತರ ಗೋನಿ ನಗರದಲ್ಲಿರುವ ಸ್ವಪ್ನಿಲ್ ಫ್ಲಾಟ್‍ಗೆ ಹೋಗಿ ಮದ್ಯಪಾನ ಮಾಡಿದೆವು. ಬಳಿಕ ನನಗೆ ತುಂಬ ನಿದ್ದೆ ಬಂದು ಮಲಗಿಕೊಂಡೆ. ಮುಂಜಾನೆ ನನಗೆ ಎಚ್ಚರವಾದಾಗ ನನ್ನ ಮೈ ಮೇಲೆ ಬಟ್ಟೆ ಇರಲಿಲ್ಲ. ಜೊತೆಗೆ ನನ್ನ ದೇಹದ ಮೇಲೆ ಮಾರ್ಕ್ ಗಳಾಗಿದ್ದವು. ಆರೋಪಿ ಬಡೋಡಿಯಾ ಮತ್ತು ಆತನ ಸ್ನೇಹಿತರು ಬಲವಂತವಾಗಿ ನನಗೆ ಮದ್ಯ ಕುಡಿಸಿದ್ದಾರೆ. ಹೀಗಾಗಿ ನನಗೆ ಎಚ್ಚರವಿಲ್ಲದಿದ್ದಾಗ ಬಡೋಡಿಯಾ ಸೇರಿದಂತೆ ಆತನ ರೂಮ್‍ಮೇಟ್ಸ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಗಗನ ಸಖಿ ನೀಡಿದ ದೂರಿನ ಅನ್ವಯ ಬಡೋಡಿಯಾ ಮತ್ತು ಆತನ ಸ್ನೇಹಿತರ ವಿರುದ್ಧ ಐಪಿಸಿ ಸೆಕ್ಷನ್ 376 ಡಿ ಅಡಿಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದೇವೆ. ಈಗಾಗಲೇ ಆರೋಪಿ ಬಡೋಡಿಯಾನ್ನು ಬಂಧಿಸಿ ವಿಚಾರಣೆ ಮಾಡುತ್ತಿದ್ದೇವೆ ಎಂದು ಪೊಲೀಸ್ ಅಧಿಕಾರಿ ನಿತಿನ್ ಅಲಕ್ನೂರ್ ಹೇಳಿದ್ದಾರೆ.
ಆರೋಪಿ ವಿಚಾರಣೆ ವೇಳೆ ಗಗನ ಸಖಿ ಮೇಲೆ ಅತ್ಯಾಚಾರ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ ತನ್ನ ರೂಮ್‍ಮೇಟ್ಸ್ ಜೊತೆ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ್ದನ್ನು ನಿರಾಕರಿಸಿದ್ದಾನೆ. ಸದ್ಯಕ್ಕೆ ಈ ಕುರಿತು ತನಿಖೆ ಮುಂದುವರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.