ಕೋಲಾರ: ಇಂದು ವಿಶ್ವ ಪರಿಸರ ದಿನ. ಎಲ್ಲೆಡೆ ಗಿಡ-ಮರಗಳನ್ನ ನೆಟ್ಟು ಪರಿಸರ ದಿನಾಚರಣೆ ಆಚರಣೆ ಮಾಡುತ್ತಿದ್ದರೆ, ಕೋಲಾರದಲ್ಲಿ ಈ ದಿನದಂತೆ ಬೆಸ್ಕಾಂ ಅಧಿಕಾರಿಗಳು ಮರಗಳ ಮಾರಣ ಹೋಮ ಮಾಡಿರುವ ಘಟನೆ ನಡೆದಿದೆ.
ಮುಳಬಾಗಿಲು ತಾಲೂಕಿನ ಮೇಲ್‍ತಾಯಲೂರಿನಿಂದ ತಾಯಲೂರಿಗೆ ಇರುವ ರಸ್ತೆ ಬದಿಯಲ್ಲಿರುವ ಮರಗಳನ್ನು ಬೆಸ್ಕಾಂ ಸಿಬ್ಬಂದಿ ನಿರ್ದಾಕ್ಷಣ್ಯವಾಗಿ ಕಡಿದು ಹಾಕಿದ್ದಾರೆ. ಸುಮಾರು ವರ್ಷಗಳಿಂದ ಅರಣ್ಯ ಇಲಾಖೆಯವರು ಬೆಳಸಿದ್ದ ಮರಗಳನ್ನು ವಿದ್ಯುತ್ ತಂತಿಗೆ ತಗುಲುತ್ತವೆ ಎನ್ನುವ ಒಂದೇ ಕಾರಣಕ್ಕೆ ಮರಗಳನ್ನು ಕಡಿದು ಹಾಕಿದ್ದಾರೆ. ರಸ್ತೆಯ ಎರಡೂ ಬದಿಯಲ್ಲಿ ಬೆಳೆಸಲಾಗಿದ್ದ ಸುಮಾರು 150ಕ್ಕೂ ಹೆಚ್ಚು ಮರಗಳನ್ನು ಈ ರೀತಿ ಕಡಿದು ಹಾಕಲಾಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಸ್ಕಾಂನವರು ಸಾಮಾನ್ಯವಾಗಿ ವಿದ್ಯುತ್ ತಂತಿಗಳಿಗೆ ತಾಗುವ ಮರದ ರೆಂಬೆಗಳನ್ನು ಮಾತ್ರ ಕತ್ತರಿಸುತ್ತಾರೆ. ಆದರೆ ಇಲ್ಲಿ ಮರಗಳನ್ನು ಬುಡ ಸಮೇತ ಕಡಿದು ಹಾಕಿರುವುದು ಪರಿಸರ ಪ್ರೇಮಿಗಳ ವಿರೋಧಕ್ಕೆ ಕಾರಣವಾಗಿದೆ. ಅಲ್ಲದೆ ಈ ಬಗ್ಗೆ ಅರಣ್ಯ ಇಲಾಖೆಯವರು ಸಂಬಂಧಪಟ್ಟವರ ಮೇಲೆ ಕ್ರಮ ತೆಗೆದುಕೊಳ್ಳಬೇಕೆಂದು ಪರಿಸರವಾದಿಗಳು ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ.
ಪರಿಸರ ದಿನದ ಆಚರಣೆ:
ಇತ್ತ ವಿಶ್ವ ಪರಿಸರ ದಿನದ ಅಂಗವಾಗಿ ಕೋಲಾರ ನಗರದ ವಿವಿಧೆಡೆ ಹಲವು ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾಡಳಿತ ಗಿಡ ನೆಡುವ ಮೂಲಕ ವಿಶ್ವ ಪರಿಸರ ದಿನವನ್ನ ಆಚರಣೆ ಮಾಡಲಾಗಿದೆ. ಮೊದಲಿಗೆ ಎರಡನೇ ಅಪರ ಜಿಲ್ಲಾ ನ್ಯಾಯಾಧೀಶೆ ಬಿ.ಎಸ್.ರೇಖಾ ಹಾಗೂ ಜಿಲ್ಲಾಧಿಕಾರಿ ಜೆ.ಮಂಜುನಾಥ್ ನಗರದ ಕೋರ್ಟ್ ಆವರಣದಲ್ಲಿ ಗಿಡಕ್ಕೆ ಪೂಜೆ ಮಾಡಿ, ಹತ್ತಾರು ಗಿಡಗಳನ್ನ ನೆಡುವ ಮೂಲಕ ಪರಿಸರ ಜಾಗೃತಿ ಹಾಗೂ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದರು.
ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಗರದ ರೈಲ್ವೇ ನಿಲ್ದಾಣದ ಸಮೀಪ ಜಿಲ್ಲಾಧಿಕಾರಿ ಜೆ.ಮಂಜುನಾಥ್, ಸಿಇಓ ಜಗದೀಶ್, ಎಸ್‍ಪಿ ರೋಹಿಣಿ ಕಟೋಜ್ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ವಿದ್ಯಾರ್ಥಿಗಳು ನೂರಾರು ಗಿಡಗಳನ್ನ ನೆಡುವ ಮೂಲಕ ಪರಿಸರ ದಿನವನ್ನ ಆಚರಣೆ ಮಾಡಲಾಗಿದೆ. ಇದೆ ವೇಳೆ ನಗರದ ಹಲವೆಡೆ ವಿವಿಧ ಸಂಘಟನೆಗಳ ಮುಖಂಡರು ಗಿಡಗಳನ್ನ ನೆಟ್ಟು ನಗರ ವಾಸಿಗಳಲ್ಲಿ ಪರಿಸರ ಜಾಗೃತಿ ಮೂಡಿಸಿದರು.