ಬೆಂಗಳೂರು: ತಂದೆ-ತಾಯಿ ಎಂದರೆ ಮಕ್ಕಳಲ್ಲಿ ಪೂಜ್ಯ ಭಾವನೆ ಇರುತ್ತದೆ. ಆದರೆ ಹೆತ್ತು ಹೊತ್ತು, ಸಾಕಿ ಬೆಳೆಸಿದ ಮಗಳು ತಂದೆಯನ್ನು ಮನೆಯಿಂದ ಹೊರ ಹಾಕಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಜೋಗಿಪಾಳ್ಯದ ಗ್ರಾಮದಲ್ಲಿ ಘಟನೆ ನಡೆದಿದ್ದು, 52 ವರ್ಷದ ಮಹದೇವಪ್ಪ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ವೃದ್ಧ ಮಹದೇವಪ್ಪ ಅವರ ಮಗಳು ರತ್ನಮ್ಮ ಮನೆಯಿಂದ ಹೊರಹಾಕಿದ್ದಾರೆ.
ನಾನು ಜೋಗಿಪಾಳ್ಯದ ಗ್ರಾಮದ ನಿವಾಸಿ. ನಿನಗೆ ವಯಸ್ಸಾಗಿದೆ, ದುಡಿಯುವುದಿಲ್ಲ ಎಂದು ಮಗಳು ಹಾಗೂ ಮೊಮ್ಮಗ ಸೇರಿ ನನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ. ಮಳೆ ಬರುತ್ತಿದ್ದಾಗಲೇ ಮನೆ ಬಿಟ್ಟು ಬಂದೆ. ಕಳೆದ ಮೂರು ದಿನಗಳಿಂದ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಕಾಲ ಕಳೆಯುತ್ತಿದ್ದೇನೆ ಎಂದು ಮಹದೇವಪ್ಪ ಅಳಲು ತೋಡಿಕೊಂಡಿದ್ದಾರೆ.
ಉಟ್ಟ ಬಟ್ಟೆಯ ಮೇಲೆಯೇ ಮನೆಯಿಂದ ಹೊರ ಹಾಕಿದರು. ಮೂರು ದಿನಗಳಿಂದ ರಾತ್ರಿ ಶಾಲೆಯ ಕಟ್ಟೆಯ ಮೇಲೆ ಮಲಗುತ್ತಿದ್ದೇನೆ. ಅವರು ಇವರು ಕೊಟ್ಟ ಆಹಾರ ಸೇವಿಸಿ ಕಾಲ ಕಳೆಯುತ್ತಿದ್ದೇನೆ ಎಂದು ಮಹದೇವಪ್ಪ ಕಣ್ಣೀರು ಹಾಕಿದ್ದಾರೆ.