ಕೊಪ್ಪಳ: ಜಿಲ್ಲೆಯ ಕೆಲ ಬಿಜೆಪಿ ಶಾಸಕರನ್ನು ಸೆಳೆಯಲು ಸಿಎಂ ಕುಮಾರಸ್ವಾಮಿ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಮಾತುಗಳಿಗೆ ಪುಷ್ಠಿ ನೀಡುವಂತೆ ಬಿಜೆಪಿ ಶಾಸಕ ಬಸವರಾಜ್ ದಡೇಸಗೂರ್ ಮತ್ತು ಸಿಎಂ ಕುಮಾರಸ್ವಾಮಿ ಭೇಟಿಯಾಗಿರುವ ಫೋಟೋ ವೈರಲ್ ಆಗಿದೆ.
ಶನಿವಾರ ವೆಂಕಟರಾವ್ ನಾಡಗೌಡ ಅವರ ಸಮ್ಮುಖದಲ್ಲಿ ಬಸವರಾಜ್ ದಡೇಸಗೂರ್ ಸಿಎಂ ಜೊತೆ ಕೈ ಕುಲುಕಿರುವ ಫೋಟೋ ಹಲವು ಜಿಲ್ಲೆಯ ಕಮಲ ಅಂಗಳದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ. ಕಳೆದ ಹಲವು ದಿನಗಳಿಂದ ಬಸವರಾಜ್ ತೊರೆಯಲಿದ್ದಾರೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿದ್ದವು. ಒಂದು ವೇಳೆ ಬಿಜೆಪಿ ತೊರೆದು ಕಾಂಗ್ರೆಸ್ ಅಥವಾ ಜೆಡಿಎಸ್ ಸೇರಲಿದ್ದಾರೆ ಎನ್ನಲಾಗಿದೆ.
ಕೇವಲ ನಮ್ಮ ಶಾಸಕರನ್ನು ಹಿಡಿದಿಟ್ಟುಕೊಂಡರೆ ಸಾಲದು ಆಪರೇಷನ್ ಕಮಲಕ್ಕೆ ತಿರುಗೇಟು ನೀಡಲು ಬಿಜೆಪಿಯ ಎಂಎಲ್‍ಎ ಗಳನ್ನು ಸೆಳೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಬೆಂಬಲಿಗರು ಮುಂದಾಗಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿತ್ತು. ಈ ಸುದ್ದಿಯ ಬೆನ್ನಲ್ಲೆ ಬಸವರಾಜ್ ದಡೇಸಗೂರ್ ಫೋಟೋ ವೈರಲ್ ಆಗಿದೆ.
ಕನಕಗಿರಿ ಶಾಸಕ ಬಸವರಾಜ್ ದಡೇಸಗೂರ್, ಸುರಪುರ ಶಾಸಕ ರಾಜುಗೌಡ, ಸಿರಗುಪ್ಪ ಶಾಸಕ ಸೋಮಲಿಂಗಪ್ಪ ಮತ್ತು ರಾಯಚೂರು ಶಾಸಕ ಡಾ. ಶಿವರಾಜ್ ಪಾಟೀಲ್‍ಗೆ ಕೈ ಗಾಳ ಹಾಕಿದೆ. ಕನಕಗಿರಿ ಶಾಸಕ ಬಸವರಾಜ್ ದಡೇಸಗೂರು ಬಗ್ಗೆ ಈಗಾಗಲೇ ಸಿದ್ದರಾಮಯ್ಯ ಅವರು ಮಾಹಿತಿ ಪಡೆದಿದ್ದಾರೆ ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸುರಪುರ ಶಾಸಕ ರಾಜುಗೌಡ, ತಾಯಿಯ ಅನಾರೋಗ್ಯ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದರಿಂದ ಕಳೆದ ಕೆಲ ದಿನಗಳಿಂದ ಮೊಬೈಲ್ ಸ್ವಿಚ್ಛ್ ಆಫ್ ಅಗಿತ್ತು. ನಾನು ಬಿಜೆಪಿ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟನೆ ನೀಡಿದ್ದರು.