ಕಲಿಯುಗ ಕರ್ಣನ ಜನ್ಮದಿನ – ಅಂಬಿ ನೆನಪನ್ನು ಹಂಚಿಕೊಂಡ ಕಲಾವಿದರು

Public TV
3 Min Read
ambi 1

ಬೆಂಗಳೂರು: ಇಂದು ಮಂಡ್ಯದ ಗಂಡು ದಿವಂಗತ ರೆಬೆಲ್ ಸ್ಟಾರ್ ಅಂಬರೀಶ್ ಅವರ 67ನೇ ಜನ್ಮದಿನ. ಇಂದು ಅವರು ನಮ್ಮ ಜೊತೆ ಇಲ್ಲದಿದ್ದರೂ ಎಂದಿಗೂ ಅಂಬರೀಶ್ ಅಮರ ಎಂದು ಸ್ಯಾಂಡಲ್‍ವುಡ್ ಕಲಾವಿದರು ಪ್ರೀತಿಯ ನಟನಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಒಂದೆಡೆ ಕಿಚ್ಚ ಸುದೀಪ್ ಅವರು ನಿಮ್ಮ ಅನುಪಸ್ಥಿತಿ ಹೆಚ್ಚು ಕಾಡುತ್ತಿದೆ ಎಂದರೆ, ಇನ್ನೊಂದೆಡೆ ಸುಮಲತಾ ಅಂಬರೀಶ್ ಅವರು ಅಂಬಿ ಎಂದಿಗೂ ಅಮರ ಎಂದು ಹಳೆ ನೆನಪನ್ನು ನೆನೆದಿದ್ದಾರೆ. ಅಲ್ಲದೆ ನವರಸ ನಾಯಕ ಜಗ್ಗೇಶ್ ಅವರು ನೇರನುಡಿಯ ಅದ್ಭುತ ಮನುಷ್ಯ ಎಂದು ಹೊಗಳಿ ಅಂಬಿ ಅವರನ್ನು ನೆನೆದು ಹುಟ್ಟುಹಬ್ಬಕ್ಕೆ ಶುಭಕೋರಿ ಟ್ವೀಟ್ ಮಾಡಿದ್ದಾರೆ. ಹಾಗೆಯೇ ಸೂಪರ್ ಸ್ಟಾರ್ ಉಪೇಂದ್ರ, ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಪ್ರಿಯಾಂಕಾ ಉಪೇಂದ್ರ, ಹರ್ಷಿಕಾ ಪೋಣಚ, ಅಕುಲ್ ಬಾಲಾಜಿ ಸೇರಿ ಹಲವು ಸ್ಟಾರ್ಸ್‍ಗಳು ಅಂಬರೀಶ್ ಅವರನ್ನು ಇಂದು ನೆನದು ಹುಟ್ಟುಹಬ್ಬಕ್ಕೆ ಟ್ವಿಟ್ಟರ್ ನಲ್ಲಿ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಅಪ್ಪಾಜಿಯವ್ರ ಪ್ರೀತಿ-ಆದರ್ಶ ಕುಟುಂಬ, ಅಭಿಮಾನಿಗಳನ್ನು ಕಾಯ್ತಿರುತ್ತದೆ- ದರ್ಶನ್

ಟ್ವೀಟ್‍ಗಳಲ್ಲಿ ಏನಿದೆ?
ಕಿಚ್ಚ ಸುದೀಪ್
ಮಾಮ ನಿಮ್ಮ ಅನುಪಸ್ಥಿತಿ ಹೆಚ್ಚು ಕಾಡುತ್ತಿದೆ. ನಿಮ್ಮನ್ನು ಸದಾ ಪ್ರೀತಿಸುತ್ತೇನೆ. ಇನ್ನುಮುಂದೆ ಮೇ 29 ಮೊದಲಿನಂತೆ ಇರಲ್ಲ ಎಂದು ಬರೆದು ಅಂಬರೀಶ್ ಅವರ ಹಳೆಯ ಫೋಟೋವೊಂದನ್ನು ಹಾಕಿ ಭಾವುಕ ಟ್ವೀಟ್ ಮೂಲಕ ಶುಭಕೋರಿದ್ದಾರೆ.

ಜಗ್ಗೇಶ್
ಅಭಿಮಾನಿಯೊಬ್ಬರು ಅಂಬಿ ಅಣ್ಣನ ಹುಟ್ಟುಹಬ್ಬದ ಶುಭದಿನದಂದು ನಿಮ್ಮ ಹಾಗೂ ಅವರ ಒಡನಾಟದ ಬಗ್ಗೆ ನಿಮ್ಮ ನುಡಿಯಲ್ಲಿ ಹೇಳಿ ಎಂದು ಮನವಿ ಮಾಡಿದ್ದರು. ಈ ಟ್ವೀಟ್‍ಗೆ ಪ್ರತಿಕ್ರಿಯಿಸಿದ ಜಗ್ಗೇಶ್, ಅಂಬರೀಶ್ ಅವರು ನೇರನುಡಿಯ ಮನುಷ್ಯ. ಯಾರೆ ಒಟ್ಟಿಗೆ ಕೆಲಸ ಮಾಡುವಾಗ ತೃಪ್ತಿಯಾಗಿ ಅನ್ನ ತಾನೆ ಬಡಿಸಿ ತಿನಿಸಿ, ಆನಂದಿಸುತ್ತಿದ್ದ ಮನುಷ್ಯ. ಕಷ್ಟ ಎಂದರೆ ಮರು ಮಾತಾಡದೆ ಕೈ ಜೋಬಿಗೆ ಹೋಗುತ್ತಿತ್ತು. ಅವರನ್ನು ಕಾರಲ್ಲಿ ಹಿಂಬಾಲಿಸಿದರೆ ಮಕ್ಕಳ ಜೂಟಾಟದಂತೆ ಅವರ ಕಾರನ್ನು ವೇಗವಾಗಿ ಚಲಾಯಿಸಿ ಕೈಗೆ ಸಿಗದೆ ನಮಗೆ ಆಟ ಆಡಿಸಿ ಖುಷಿ ಪಡೋರು. ಅದ್ಭುತಮನುಷ್ಯ ಅಮರ ನೆನಪು ಎಂದು ಮಂಡ್ಯದ ಗಂಡನ್ನು ಹೊಗಳಿದ್ದಾರೆ.

ಉಪೇಂದ್ರ
ಇಂದು ಮಂಡ್ಯದ ಗಂಡು, ಕಲಿಯುಗ ಕರ್ಣ, ಒಂಟಿ ಸಲಗ, ರೆಬೆಲ್ ಸ್ಟಾರ್ ಅಂಬರೀಶ್ ರವರ ಜನ್ಮದಿನ. ದೈಹಿಕವಾಗಿ ನೀವು ನಮ್ಮನ್ನು ಅಗಲಿದರೂ ನಿಮ್ಮೊಂದಿಗಿನ ನೆನಪುಗಳು ಸದಾ ಅಮರ ಎಂದು ಬರೆದು ಅಂಬರೀಶ್ ಅವರ ಫೋಟೋ ಜೊತೆ ಟ್ವೀಟ್ ಮಾಡಿದ್ದಾರೆ.

ಪ್ರಿಯಾಂಕಾ ಉಪೇಂದ್ರ
ಹುಟ್ಟುಹಬ್ಬದ ಶುಭಾಶಯಗಳು ಅಂಬರೀಶ್ ಸಾರ್. ನೀವು ಹಾಗೂ ನಿಮ್ಮ ನೆನಪು ಸದಾ ನಮ್ಮ ಹೃದಯದಲ್ಲಿ ಅಮರ ಎಂದು ಬರೆದು ವಿಶ್ ಮಾಡಿದ್ದಾರೆ.

ಧ್ರುವ ಸರ್ಜಾ
ನಮ್ಮ ಪ್ರೀತಿಯ ಕಲಿಯುಗದ ಕರ್ಣ, ರೆಬೆಲ್ ಸ್ಟಾರ್ , ಡಾ. “ಅಂಬರೀಷ್” ಅಂಕಲ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಜೈ ಆಂಜನೇಯ ಎಂದು ಬರೆದು ಅಂಬಿ ಅವರ ಹಳೆಯ ಫೋಟೋವೊಂದನ್ನು ಹಾಕಿ ಟ್ವೀಟ್ ಮಾಡಿ ನೆನೆದಿದ್ದಾರೆ.

ಹರ್ಷಿಕಾ ಪೂಣಚ್ಚ
ಜನ್ಮದಿನದ ಶುಭಾಶಯಗಳು ಅಂಬರೀಶ್ ಅಂಕಲ್. ಮಿಸ್ ಯು ಎಂದು ರೆಬೆಲ್ ಸ್ಟಾರ್ ಅವರ ಜೊತೆಗೆ ತಾವು ನಿಂತಿರುವ ಫೊಟೋವನ್ನು ಹಾಕಿ ಶುಭಾಶಯ ತಿಳಿಸಿದ್ದಾರೆ.

ಅಕುಲ್ ಬಾಲಾಜಿ
ನಮ್ಮ ಕಲಿಯುಗ ಕರ್ಣನಿಗೆ ಶುಭಕೋರುತ್ತಿದ್ದೇನೆ. ಅಂಬರೀಶ್ ಸಾರ್ ಹುಟ್ಟುಹಬ್ಬದ ಶುಭಾಷಯಗಳು. ನೀವು ಇಂದು ನಮ್ಮೊಂದಿಗೆ ಇಲ್ಲದಿದ್ದರೂ, ನಿಮ್ಮ ನೆನಪು ನಮ್ಮನ್ನು ಬಹಳ ಕಾಡುತ್ತಿದೆ. ನಿಮ್ಮನ್ನು ಸದಾ ನೆನಪಿಸಿಕೊಳ್ಳುತ್ತೇವೆ. ಲವ್ ಯು ಅಂಬಿ ಎಂದು ಬರೆದು ರೆಬೆಲ್ ಸ್ಟಾರ್ ಹಾಗು ಸುಮಲತಾ ಅವರ ಜೊತೆ ತಾವಿರುವ ಫೋಟೋ ಹಾಕಿ ಶುಭಾಶಯ ಹೇಳಿದ್ದಾರೆ.

ಅಷ್ಟೇ ಅಲ್ಲದೆ ಈ ಸಂದರ್ಭದಲ್ಲಿ ಸುಮಲತಾ ಅಂಬರೀಶ್ ಅವರು ಕೂಡ ತಮ್ಮ ಪ್ರೀತಿಯ ಪತಿಯನ್ನು ನೆನೆದಿದ್ದಾರೆ. ಎಂದೆಂದಿಗೂ ನಮ್ಮೊಂದಿಗೆ. ಅಂಬಿ ಅಮರ ಎಂದೆಂದಿಗೂ ಅಮರ ಎಂದು ಬರೆದು ಅಂಬರೀಶ್ ಹಾಗೂ ಮಗ ಅಭಿಷೇಕ್ ಅವರ ಜೊತೆ ಇರುವ ಫೋಟೋವನ್ನು ಹಾಕಿ ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *