ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗದ ಚಂದ್ರವಳ್ಳಿ ಕೆರೆಯಲ್ಲಿ ತಾಯಿ ಕೋತಿಯೊಂದು ತನ್ನ ಹೊಟ್ಟೆಪಾಡಿಗಾಗಿ ಪ್ರವಾಸಿಗರು ಎಸೆದ ಮಾವಿನಕಾಯಿ ತುಂಡಿಗಾಗಿ ಕೆರೆಗೆ ಡೈವ್ ಹೊಡೆದಿದೆ.
ಕೆರೆಗೆ ಹಾರಿದ ಬಳಿಕ ಮಾವಿನಕಾಯಿ ತುಂಡು ಹಿಡಿದುಕೊಂಡು, ತನ್ನ ಪುಟ್ಟ ಮರಿಯನ್ನು ತಲೆಯ ಮೇಲೆ ಹೊತ್ತುಕೊಂಡು ಈಜಿ ದಡ ಸೇರಿದೆ. ಕೆಲ ಕೋತಿಗಳು ಕೆರೆಯ ದಂಡೆಯ ಮೇಲೆ ಪ್ರವಾಸಿಗರು ಎಸೆದ ಆಹಾರ ತಿಂದು, ತಮ್ಮ ಮರಿಗಳಿಗೂ ತಿನಿಸಿವೆ.
ಕೋತಿಗಳು ನೀರಿನಲ್ಲಿ ಈಜುವುದನ್ನು ನೋಡಬೇಕು ಎಂದು ಕೆಲ ಪ್ರವಾಸಿಗರು ಆಹಾರ ಪದಾರ್ಥವನ್ನು ಕೆರೆಗೆ ಎಸೆಯುತ್ತಾರೆ. ಹಸಿದ ಕೋತಿಗಳು ನೀರಿನಲ್ಲಿ ಈಜಿ ಆಹಾರವನ್ನು ಎತ್ತಿಕೊಂಡು ಬಂದು, ಕೆರೆಯಲ್ಲಿರುವ ಬಂಡೆಗಲ್ಲುಗಳ ಮೇಲೆ ಕುಳಿತು ತಿನ್ನುತ್ತಿವೆ.
ಆಹಾರ ಪದಾರ್ಥವನ್ನು ಹಾಗೂ ಪ್ರಾಣಿಗಳಿಗೆ ಪ್ರಿಯವಾದ ವಸ್ತುಗಳನ್ನು ನೀರಿಗೆ ಎಸೆಯಬಾರದು. ಹೀಗೆ ಮಾಡುವುದರಿಂದ ಕೋತಿಗಳ ಜೀವಕ್ಕೆ ಅಪಾಯ. ಆಹಾರಕ್ಕಾಗಿ ಕೋತಿಗಳು ಮರಿಯ ಜೊತೆಗೆ ನೀರಿಗೆ ಧುಮುಕುತ್ತವೆ. ಹೀಗಾಗಿ ತಿನಿಸುಗಳನ್ನು ದಯವಿಟ್ಟು ನೀರಿನಲ್ಲಿ ಎಸೆಯಬೇಡಿ ಎಂದು ಸ್ಥಳೀಯ ಪ್ರಾಣಿ ಪ್ರಿಯರು ಪ್ರವಾಸಿಗರಲ್ಲಿ ಮನವಿ ಮಾಡಿಕೊಂಡಿದ್ದಾರೆ.
https://youtu.be/Kj1tEqbUSzY