– ಆಸ್ಪತ್ರೆಯಲ್ಲಿದ್ದ ಕಂಪ್ಯೂಟರ್, ಕಿಟಕಿ ಗ್ಲಾಸ್ ಪುಡಿಪುಡಿ
ರಾಮನಗರ: ಗಂಡು ಮಗುವಿಗೆ ಜನ್ಮ ನೀಡಿ ಅರ್ಧ ಗಂಟೆಯ ಬಳಿಕ ಬಾಣಂತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.
ಮೃತ ರಶ್ಮಿ ಸಂಬಂಧಿಕರು ಬೆಂಗಳೂರು – ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಅಲ್ಲದೆ ಆಸ್ಪತ್ರೆಗೆ ನುಗ್ಗಿ ಕಂಪ್ಯೂಟರ್, ಕಿಟಕಿ ಗ್ಲಾಸ್ ಗಳು, ಪೀಠೋಪಕರಣಗಳು ಧ್ವಂಸ ಮಾಡಿದ್ದಾರೆ. ರಶ್ಮಿ ಪೋಷಕರು ಸ್ಥಳಕ್ಕೆ ವೈದ್ಯರು ಬರಬೇಕು ಎಂದು ಪಟ್ಟು ಹಿಡಿದಿದ್ದಾರೆ.
ಘಟನೆ ವಿವರ:
ಚನ್ನಪಟ್ಟಣದ ದೇವರಹೊಸಹಳ್ಳಿ ಗ್ರಾಮದ ರಶ್ಮಿ(19)ಯನ್ನು ಹೆರಿಗೆಗೆಂದು ನಿನ್ನೆ ತಡರಾತ್ರಿ 12 ಗಂಟೆ ಸುಮಾರಿಗೆ ನರ್ಸಿಂಗ್ ಹೋಂಗೆ ದಾಖಲಿಸಲಾಗಿತ್ತು. ಹಾಗೆಯೇ ರಶ್ಮಿ 12 ಗಂಟೆ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದರು. ಮಗು ಜನನವಾದ ಅರ್ಧ ಗಂಟೆಯಲ್ಲೇ ರಶ್ಮಿ ಮೃಪಟ್ಟಿದ್ದಾರೆ. ಮಗು ಆರೋಗ್ಯವಾಗಿದೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ.
ರಶ್ಮಿಗೆ ಶಸ್ತ್ರ ಚಿಕಿತ್ಸೆ ಮಾಡುವಾಗ ವೈದ್ಯರು ಎಡವಟ್ಟು ಮಾಡಿದ್ದಾರೆ. ಹೀಗಾಗಿ ರಶ್ಮಿ ಮೃತಪಟ್ಟಿದ್ದಾರೆ. ಘಟನೆಯ ಬಳಿಕ ವೈದ್ಯರು ಆಪರೇಷನ್ ಥಿಯೇಟರ್ ನಲ್ಲಿ ಶವ ಬಿಟ್ಟು ಪೊಲೀಸ್ ಭದ್ರತೆಯಲ್ಲಿ ಪರಾರಿಯಾಗಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕಳೆದ ಒಂದು ವರ್ಷದ ಹಿಂದೆ ರಶ್ಮಿಯನ್ನು ದೇವರ ಹೊಸಹಳ್ಳಿಯ ವ್ಯಕ್ತಿಗೆ ಮದುವೆ ಮಾಡಿಕೊಡಲಾಗಿತ್ತು. ಸದ್ಯ ಆಸ್ಪತ್ರೆಗೆ ಡಿಎಚ್‍ಓ ಭೇಟಿ ನೀಡಿ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಘಟನೆ ಸಂಬಂಧ ಚನ್ನಪಟ್ಟಣ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.