ರಾಮನಗರದಲ್ಲಿ ಮತ್ತೊಂದು ಅಗ್ನಿಕೊಂಡ ದುರಂತ – ಬೆಂಕಿ ಕೆಂಡದಲ್ಲಿ ಬಿದ್ದ ಅರ್ಚಕನಿಗೆ ಗಂಭೀರ ಗಾಯ

Public TV
1 Min Read
rmg agnikonda collage copy

ರಾಮನಗರ: ಜಿಲ್ಲೆಯಲ್ಲಿ ಮತ್ತೊಂದು ಅಗ್ನಿಕೊಂಡ ದುರಂತ ಜರುಗಿದ್ದು, ಅಗ್ನಿಕೊಂಡ ಹಾಯುವ ವೇಳೆ ಅರ್ಚಕ ಬೆಂಕಿ ಕೆಂಡದಲ್ಲಿ ಬಿದ್ದು ಗಾಯಗೊಂಡಿರುವ ಘಟನೆ ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರ ಸ್ವಗ್ರಾಮದಲ್ಲಿ ನಡೆದಿದೆ.

ಅರ್ಚಕ ಬಸವರಾಜ್ ಅಗ್ನಿಕೊಂಡದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಬಸವರಾಜ್ ಕನಕಪುರ ತಾಲೂಕಿನ ದೊಡ್ಡ ಆಲಹಳ್ಳಿ ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಅರ್ಚರಾಗಿ ಕೆಲಸ ಮಾಡುತ್ತಿದ್ದಾರೆ. ಸಚಿವ ಡಿ.ಕೆ ಶಿವಕುಮಾರ್ ಸ್ವಗ್ರಾಮ ದೊಡ್ಡ ಆಲಹಳ್ಳಿಯಲ್ಲಿ ಇಂದು ಬಸವೇಶ್ವರ ದೇವರ ಅಗ್ನಿಕೊಂಡ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ರಾತ್ರಿ ಗ್ರಾಮದಲ್ಲೆಲ್ಲ ಎಳವಾರವನ್ನು ವಿಜೃಂಭಣೆಯಿಂದ ನಡೆಸಲಾಗಿತ್ತು. ಬೆಳಗ್ಗೆ ಗ್ರಾಮದ ಜನರಲ್ಲದೇ ಅಕ್ಕಪಕ್ಕದ ಗ್ರಾಮದ ನೂರಾರು ಜನರು ಅಗ್ನಿಕೊಂಡ ಮಹೋತ್ಸವ ನೋಡಲು ಆಗಮಿಸಿದ್ರು. ಕಳೆದ ನಾಲ್ಕು ವರ್ಷಗಳಿಂದ ಬಸವೇಶ್ವರ ದೇವರ ಅಗ್ನಿಕೊಂಡ ಹಾಯುತ್ತಿದ್ದ ಬಸವರಾಜ್ ಇಂದು ಕೂಡ ಅಗ್ನಿಕೊಂಡ ಹಾಯುವ ಕಾರ್ಯದಲ್ಲಿದ್ರು.

rmg agnikonda 2 copy

ರಾತ್ರಿಯೆಲ್ಲಾ ಕಟ್ಟಿಗೆಗಳನ್ನಾಕಿ ಸುಟ್ಟು ಬೆಂಕಿ ಕೆಂಡವನ್ನು ಮಾಡಲಾಗಿತ್ತು. ಬೆಳಗ್ಗಿನ ವೇಳೆ ಅಗ್ನಿಕೊಂಡ ಹಾಯುವ ವೇಳೆ ಅರ್ಚಕ ನಾಲ್ಕು ಹೆಜ್ಜೆಗಳನ್ನಿಟ್ಟು ಓಡುವ ವೇಳೆ ಅಗ್ನಿಕೊಂಡದಲ್ಲಿ ಮುಗ್ಗರಿಸಿ ಬಿದ್ದಿದ್ದಾರೆ. ನಂತರ ತಡಬಡಿಸಿ ಎದ್ದು ಅಗ್ನಿಕೊಂಡದಿಂದ ಹೊರಗೆ ಓಡಿ ಬಂದಿದ್ದು ಬೆಂಕಿ ಕೆಂಡದಲ್ಲಿ ಬಿದ್ದ ರಭಸಕ್ಕೆ ಮೈ-ಕೈ ಎಲ್ಲವೂ ಸಹ ಬೆಂಕಿ ಕೆಂಡದಿಂದ ಸುಟ್ಟಿದೆ. ಇನ್ನೂ ಗಂಭೀರವಾಗಿ ಗಾಯಗೊಂಡಿರುವ ಅರ್ಚಕ ಬಸವರಾಜ್‍ರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗ್ತಿದೆ.

ಇದೇ ತಿಂಗಳ 2ರಂದು ಮಾಗಡಿ ತಾಲೂಕಿನ ಕುದೂರಿನ ಕುದೂರಮ್ಮ ದೇವಿ ಅಗ್ನಿಕೊಂಡ ಮಹೋತ್ಸವದಲ್ಲಿ ಹರಕೆಯೊತ್ತು ದೇವಿಯ ಅಗ್ನಿಕೊಂಡೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತನೋರ್ವ ಅಗ್ನಿಕೊಂಡದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಘಟನೆ ನಡೆದಿತ್ತು. ದೇವಿಭಕ್ತ ರಮೇಶ್ ಅಗ್ನಿಕೊಂಡ 52ನೇ ಭಕ್ತನಾಗಿ ಅಗ್ನಿಕೊಂಡ ಹಾಯುವ ವೇಳೆ ಆಯ ತಪ್ಪಿ ಅಗ್ನಿಕೊಂಡದಲ್ಲಿ ಬಿದ್ದು ಗಾಯಗೊಂಡಿದ್ದರು. ಅಲ್ಲದೇ ಬಿದ್ದ ಬಳಿಕ ಅಗ್ನಿಕೊಂಡದಲ್ಲಿ ಎದ್ದು ಮತ್ತೆ ಓಡುವ ವೇಳೆ ಎರಡು ಬಾರಿ ಬೆಂಕಿ ಕೆಂಡದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಸುಟ್ಟಗಾಯಗಳಿಗೆ ಒಳಗಾಗಿರುವ ರಮೇಶ್‍ರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.

Share This Article
Leave a Comment

Leave a Reply

Your email address will not be published. Required fields are marked *