ಚೆನ್ನೈ: ತಮಿಳು ಭಾಷಾ ಸಿನಿಮಾ ನಟ, ಮಾಜಿ ಸಂಸದ, ಎಐಎಡಿಎಂಕೆ ನಾಯಕ ಜೆ.ಕೆ.ರಿತೇಶ್ (46) ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಜೆ.ಕೆ.ರಿತೇಶ್ ಅವರು ಗುರುವಾರ ತಮಿಳುನಾಡಿನ ರಾಮನಾಥಪುರಂನಲ್ಲಿ ಎಐಎಡಿಎಂಕೆ ಮೈತ್ರಿ ಪಕ್ಷ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗವಹಿಸಿದ್ದರು. ಆಗ ಹೃದಯಾಘಾತವಾಗಿದ್ದು, ತಕ್ಷಣವೇ ಅವರನ್ನು ಪಕ್ಷದ ನಾಯಕರು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.
ಜೆ.ಕೆ.ರಿತೇಶ್ ಅವರು ಡಿಎಂಕೆ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆಗ ಅವರು ಜಲಸಂಪನ್ಮೂಲ ಸಮಿತಿಯ ಸದಸ್ಯರಾಗಿದ್ದರು. ಆದರೆ 2014ರ ಏಪ್ರಿಲ್‍ನಲ್ಲಿ ಡಿಎಂಕೆ ಬಿಟ್ಟು ಎಐಎಡಿಎಂಕೆಗೆ ಸೇರ್ಪಡೆಯಾಗಿದ್ದರು.
ಹಾಸ್ಯನಟ ಚಿನ್ನಿ ಜಯಂತ್ ನಿರ್ದೇಶನದ ‘ಕಾನಾಲ್ ನೀರ್’ ಸಿನಿಮಾದ ಮೂಲಕ ಜೆ.ಕೆ.ರಿತೇಶ್ ಅವರು 2007ರಲ್ಲಿ ಕಾಲಿವುಡ್ ಪ್ರವೇಶಿಸಿದ್ದರು. 2008ರಲ್ಲಿ ‘ನಾಯಗನ್’, 2010ರಲ್ಲಿ ‘ಪೆನ್ ಸಿಂಗಮ್’ ಸಿನಿಮಾಗಳಲ್ಲಿ ನಟಿಸಿದ್ದರು. ಕೊನೆಯದಾಗಿ ‘ಎಲ್‍ಕೆಜಿ’ ಯಲ್ಲಿ ಕಾಣಿಸಿಕೊಂಡಿದ್ದರು.