ನವದೆಹಲಿ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್‍ಪೊರಾದ ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ಡಿಸೆಂಬರ್ 2018ರಂದು ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯು ನಡೆಸಿದ್ದ ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರನನ್ನು ಯುಎಇ ಸರ್ಕಾರವು ಭಾರತಕ್ಕೆ ಹಸ್ತಾಂತರಿಸಿದೆ.
ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಉಗ್ರ ನಿಸಾರ್ ಅಹ್ಮದ್ ತಾಂಟ್ರೆಯನ್ನು ಯುಎಇ ಸರ್ಕಾರವು ಭಾರತಕ್ಕೆ ಹಸ್ತಾಂತರಿಸಿದೆ. ನಿಸಾರ್ ಮತ್ತು ಕೆಲ ಉಗ್ರರು 2017, ಡಿಸೆಂಬರ್ 30 ಹಾಗೂ 31ರ ಮಧ್ಯರಾತ್ರಿ ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ದಾಳಿ ಮಾಡಿದ್ದರು. ಈ ದಾಳಿಯಲ್ಲಿ 5 ಜನ ಸೈನಿಕರು ಹುತಾತ್ಮರಾಗಿದ್ದು, ಮೂವರು ಉಗ್ರರು ಹತ್ಯೆಯಾಗಿದ್ದರು.
ಭಾರತೀಯ ಭದ್ರತಾ ಸಂಸ್ಥೆಯ(ಎನ್‍ಐಎ) ಅಧಿಕಾರಿಗಳು 2019 ಫೆಬ್ರವರಿ 1ರಂದು ನಿಸಾರ್ ಸಹಚರರನ್ನು ಬಂಧಿಸಿದ್ದರು. ಬಂಧನ ಭೀತಿಗೆ ಒಳಗಾದ ನಿಸಾರ್ ಪುಲ್ವಾಮಾದಿಂದ ಯುಎಇಗೆ ಪರಾರಿಯಾಗಿದ್ದ. ಅಲ್ಲಿನ ಪೊಲೀಸರ ಸಹಾಯದಿಂದ ನಿಸಾರ್ ನನ್ನು ಎನ್‍ಐಎ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಬಳಿಕ ಆತನನ್ನು ಅಲ್ಲಿನ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ಹೀಗಾಗಿ ಉಗ್ರ ನಿಸಾರ್ ನನ್ನು ಯುಎಇ ಭಾರತಕ್ಕೆ ಹಸ್ತಾಂತರಿಸಿದೆ.
ಉಗ್ರ ನಿಸಾರ್, ನೂರ್ ತಾಂಟ್ರೇಯ ಕಿರಿಯ ಸಹೋದರ. ನೂರ್ ತಾಂಟ್ರೇ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಜೊತೆಗೆ ಸಂಬಂಧ ಹೊಂದಿದ್ದ. ಆತನನ್ನು ಪುಲ್ವಾಮಾದಲ್ಲಿ 2017 ಡಿಸೆಂಬರ್ 26ರಂದು ಭಾರತೀಯ ಸೈನಿಕರು ಹತ್ಯೆ ಮಾಡಿದ್ದರು.
ಸಿಆರ್‌ಪಿಎಫ್ ಕ್ಯಾಂಪ್ ಮೇಲೆ ದಾಳಿಯ ವೇಳೆ ಹತ್ಯೆಯಾಗಿದ್ದ ಉಗ್ರರಾದ ಫರೀದ್ ಹಾಗೂ ಮಂಜೂರ್ ಪುಲ್ವಾಮಾ ಜಿಲ್ಲೆಯವರೇ ಆಗಿದ್ದು, ಮತ್ತೊರ್ವ ಅಬ್ದುಲ್ ಶಾಕೂರ್ ಪಾಕಿಸ್ತಾನದ ಪ್ರಜೆ ಎಂದು ಗುರುತಿಸಲಾಗಿತ್ತು. ಈ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ ಫೈಯಾಜ್ ಅಹ್ಮದ್ ಕೂಡ ಪುಲ್ವಾಮಾ ಜಿಲ್ಲೆಯವನು. ಆತನನ್ನು 2019 ಫೆಬ್ರವರಿ 4ರಂದು ಎನ್‍ಐಎ ಅಧಿಕಾರಿಗಳು ಬಂಧಿಸಿದ್ದರು.
ಎನ್‍ಐಎ ಮೂಲಗಳ ಪ್ರಕಾರ ಫೈಯಾಜ್ ಅಹ್ಮದ್ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಭೂಗತ ಪಾತಕಿಯಾಗಿದ್ದು, ಭಾರತದ ಮೇಲೆ ದಾಳಿ ಮಾಡಲು ಬರುತ್ತಿದ್ದ ಉಗ್ರರಿಗೆ ವಸತಿ ನೀಡುತ್ತಿದ್ದ. ಸಿಆರ್‍ಪಿಎಫ್ ಕ್ಯಾಂಪ್ ಮೇಲೆ ದಾಳಿಯ ಮಾಡಿದ್ದ ಫರೀದ್, ಮಂಜೂರ್ ಹಾಗೂ ಅಬ್ದುಲ್ ಶಾಕೂರ್ ಗೆ ಸಹಾಯ ಮಾಡಿದ್ದ ಎನ್ನಲಾಗಿದೆ.