ಬ್ಯಾನರ್‌ನಲ್ಲಿ ಫೋಟೋ ಮಿಸ್ – ಅಧಿಕಾರಿಗಳ ವಿರುದ್ಧ ಶಾಸಕ ಮುನವಳ್ಳಿ ಗರಂ

Public TV
2 Min Read
KPL Paranna Munavalli

– ಮನವೊಲಿಕೆಗೆ ಬಂದ ವೈದ್ಯಾಧಿಕಾರಿಗೆ ಶಾಸಕರಿಂದ ಕ್ಲಾಸ್

ಕೊಪ್ಪಳ: ಗಂಗಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಕಾರ್ಯಕ್ರಮದ ಬ್ಯಾನರ್‌ನಲ್ಲಿ ತಮ್ಮ ಫೋಟೋ ಇಲ್ಲವೆಂದು ಶಾಸಕ ಪರಣ್ಣ ಮುನವಳ್ಳಿ ಅವರು ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ಗಂಗಾವತಿಯಲ್ಲಿ 30 ಹಾಸಿಗೆಯ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಹಾಗೂ ಪಲ್ಸ್ ಪೋಲಿಯೋ ಲಸಿಕೆಗೆ ಚಾಲನೆ ನೀಡುವ ಕಾರ್ಯಕ್ರಮ ಇಂದು ನಡೆದಿತ್ತು. ಆದರೆ ವೇದಿಕೆಯ ಮೇಲಿದ್ದ ಬ್ಯಾನರ್ ನಲ್ಲಿ ಶಾಸಕ ಪರಣ್ಣ ಮುನವಳ್ಳಿ, ಕೊಪ್ಪಳ ಸಂಸದರಾದ ಕೆ.ಎಸ್.ಅಮರಪ್ಪ ಅವರ ಹೆಸರು ಹಾಗೂ ಫೋಟೋವನ್ನೇ ಹಾಕಿರಲಿಲ್ಲ. ಇದರಿಂದಾಗಿ ಶಾಸಕರು ವೇದಿಕೆ ಬಿಟ್ಟು ಕೆಳಗಿಳಿದು ನೇರವಾಗಿಯೇ ಅಸಮಾಧಾನವನ್ನು ಹೊರ ಹಾಕಿದರು.

KPL Paranna Munavalli 3

ಇದು ಕೇಂದ್ರ ಸರ್ಕಾರದ ಯೋಜನೆಯ ಕಾರ್ಯಕ್ರಮ. ಆದರೆ ವೇದಿಕೆಯ ಮೇಲಿರುವ ಬ್ಯಾನರ್ ನಲ್ಲಿ ಬಿಜೆಪಿ ಸಂಸದ ಕೆ.ಎಸ್.ಅಮರಪ್ಪ ಹಾಗೂ ನನ್ನ ಹೆಸರು, ಫೋಟೋವನ್ನೇ ಹಾಕಲಿಲ್ಲ. ಕೇವಲ ಸಿಎಂ ಕುಮಾರಸ್ವಾಮಿ, ಡಿಸಿಎಂ ಜಿ.ಪರಮೇಶ್ವರ್ ಹಾಗೂ ಆರೋಗ್ಯ ಸಚಿವ ಶಿವಾನಂದ್ ಪಾಟೀಲ್ ಅವರ ಹೆಸರು, ಫೋಟೋ ಹಾಕಿದ್ದೀರಿ ಎಂದು ಶಾಸಕ ಪರಣ್ಣ ಮುನವಳ್ಳಿ ಕಿಡಿಕಾರಿದರು.

ಇದು ರಾಜ್ಯ ಸರ್ಕಾರದ ಕಾರ್ಯಕ್ರಮವೋ? ಅಥವಾ ಕೇಂದ್ರ ಸರ್ಕಾರದ ಕಾರ್ಯಕ್ರಮವೋ? ರಾಜ್ಯ ಸರ್ಕಾರದ ಕಾರ್ಯಕ್ರಮವಾಗಿದ್ದರೆ ಸಿಎಂ ಕುಮಾರಸ್ವಾಮಿ ಅವರೇ ಬಂದು ಉದ್ಘಾಟನೆ ಮಾಡಲಿ. ಬಿಜೆಪಿಯವರು ಯಾಕೆ ಬೇಕು. ಹೆಸರಿಗೆ ಎಂಬಂತೆ ನಮ್ಮನ್ನು ಆಮಂತ್ರಿಸಿ ಅವಮಾನ ಮಾಡಲಾಗಿದೆ ಎಂದು ಶಾಸಕರು ವೈದ್ಯಾಧಿಕಾರಿಗಳ ವಿರುದ್ಧ ಅಸಮಾಧಾನವನ್ನು ಹೊರ ಹಾಕಿದರು.

KPL Paranna Munavalli 2

ಕಾರ್ಯಕ್ರಮ ಉದ್ಘಾಟನೆಗೆ ಆಗಮಿಸಿದ್ದ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅವರು ಶಾಸಕರ ಮನವೊಲಿಸುವಲ್ಲಿ ಯಶಸ್ವಿಯಾದರು. ತಕ್ಷಣವೇ ಎಚ್ಚೆತ್ತುಕೊಂಡ ಆಸ್ಪತ್ರೆಯ ಸಿಬ್ಬಂದಿ ವೇದಿಕೆಯ ಮೇಲಿದ್ದ ಬ್ಯಾನರ್ ತೆರವುಗೊಳಿಸಿ ಶಾಸಕರು ಹಾಗೂ ಸಂಸದರ ಫೋಟೋ ಇರುವ ಬ್ಯಾನರ್ ಹಾಕಿದರು. ಅಷ್ಟೇ ಅಲ್ಲದೆ ಆಸ್ಪತ್ರೆಯ ಮುಂಭಾಗದಲ್ಲಿ ದೊಡ್ಡ ಬ್ಯಾನರ್ ಹಾಕಿ ಶಾಸಕ ಪರಣ್ಣ ಮುನವಳ್ಳಿ ಅವರ ಮನವೊಲಿಸಿದರು.

ಸಚಿವ ಶಿವಾನಂದ ಪಾಟೀಲ್ ಭಾಷಣದ ವೇಳೆ ವೇದಿಕೆಯತ್ತ ನುಗ್ಗಿದ ಬಿಜೆಪಿ ಕಾರ್ಯಕರ್ತ ಸೋಮನಾಥ, ಸ್ಥಳೀಯ ಶಾಸಕರು ಹಾಗೂ ಸಂಸದರಿಗೆ ಅವಮಾನ ಮಾಡಲಾಗಿದೆ ಎನ್ನುತ್ತ, ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಸ್ಥಳದಲ್ಲಿದ್ದ ಪೊಲೀಸರು ಸೋಮನಾಥ ಅವರನ್ನು ವಶಕ್ಕೆ ಪಡೆದು, ಪರಿಸ್ಥಿತಿ ತಿಳಿಗೊಳಿಸಿದರು.

KPL Paranna Munavalli 1

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *