ಒಂದು ಕಥೆ ಹೇಳ್ಲಾ ಚಿತ್ರ ಈ ವಾರ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಕ್ರೌಡ್ ಫಂಡಿಂಗ್ ಮೂಲಕ ನಿರ್ಮಾಣಗೊಂಡಿರೋ ಈ ಚಿತ್ರವನ್ನು ಗಿರೀಶ್ ನಿರ್ದೇಶನ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಸಿನಿಮಾ ಧ್ಯಾನದಲ್ಲಿದ್ದ ಇವರು ಒಂದಷ್ಟು ಅನುಭವವನ್ನೂ ಹೊಂದಿದ್ದಾರೆ. ಈ ಹಿಂದೆ ದಿ ಲೂಸಿಡ್ ಹ್ಯಾಂಗೋವರ್ ಮುಂತಾದ ವಿಭಿನ್ನ ಕಿರುಚಿತ್ರಗಳನ್ನು ನಿರ್ದೇಶನ ಮಾಡಿದ ಅನುಭವ ಅವರಿಗಿದೆ.
ಹೊಸತನದೊಂದಿಗೇ ಏನನ್ನಾದ್ರೂ ಮಾಡಬೇಕನ್ನೋ ಹಂಬಲದಿಂದಲೇ ಅವರು ಒಂದು ಕಥೆ ಹೇಳ್ಲಾ ಚಿತ್ರಕ್ಕೆ ಜೀವ ತುಂಬಿದ್ದಾರೆ. ಆದ್ದರಿಂದಲೇ ಈವತ್ತಿಗೆ ಈ ಸಿನಿಮಾ ಟ್ರೈಲರ್ ಮೂಲಕವೇ ಕ್ರೇಜ್ ಹುಟ್ಟು ಹಾಕಿದೆ. ಹೊಸ ಪ್ರಯೋಗಳ ಸಂತೆಯೇ ಈ ಚಿತ್ರದಲ್ಲಿ ನೆರೆದಿದೆ. ಇದರಲ್ಲಿ ತಾಂಡವ್, ಶಕ್ತಿ ಸೋಮಣ್ಣ, ಪ್ರತೀಕ್, ಸೌಮ್ಯಾ ರಮಾಕಾಂತ್, ರಮಾಕಾಂತ್ ಮುಂತಾದವರು ನಟಿಸಿದ್ದಾರೆ. ಬಕೇಶ್ ಮತ್ತು ಕಾರ್ತಿಕ್ ಸಂಗೀತ ಸಂಯೋಜನೆ ಮಾಡಿದ್ದಾರೆ.
ಹೊಸಬರು ಇದ್ದಲ್ಲಿ ಹೊಸ ಪ್ರಯೋಗ, ಹೊಸತನ ಇದ್ದೇ ಇರುತ್ತೆ ಅನ್ನೋ ನಂಬಿಕೆ ಪ್ರೇಕ್ಷಕರಲ್ಲಿದೆ. ಅಂಥಾದ್ದೇ ಒಂದು ಹೊಸ ತಂಡ ಭಾರೀ ಹುಮ್ಮಸ್ಸಿನೊಂದಿಗೆ ಈ ಚಿತ್ರವನ್ನ ರೂಪಿಸಿದೆ. ಚಿತ್ರರಂಗವನ್ನ ಗಂಭೀರವಾಗಿ ಪರಿಗಣಿಸಿದ ಹತ್ತಾರು ಮನಸುಗಳ ಧ್ಯಾನದ ಫಲವಾಗಿ ಈ ಸಿನಿಮಾ ಮೂಡಿ ಬಂದಿದೆ. ಆದ್ದರಿಂದಲೇ ಹಾರರ್ ಜಾನರಿನ ಈ ಚಿತ್ರ ಹತ್ತು ಹಲವು ರೀತಿಯ ಪ್ರಯೋಗಗಳೊಂದಿಗೇ ತೆರೆ ಕಾಣಲು ರೆಡಿಯಾಗಿದೆ. ಸ್ಕ್ರೀನ್ ಪ್ಲೇ, ಪಾತ್ರವರ್ಗ, ಛಾಯಾಗ್ರಹಣ ಸೇರಿದಂತೆ ಎಲ್ಲದರಲ್ಲಿಯೂ ಈ ಚಿತ್ರ ಪ್ರೇಕ್ಷಕರಿಗೆ ಹೊಸಾ ಅನುಭವ ನೀಡಲಿದೆ ಅನ್ನೋದು ಚಿತ್ರತಂಡದ ಭರವಸೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv