ಜನ ನಮ್ಮನ್ನ ನಂಬಲ್ಲ ಎಂದು ರಾಜಕೀಯ ನಿವೃತ್ತಿ ಚಿಂತನೆ ನಡೆಸಿದ್ದೆ: ಸಿಎಂ ಎಚ್‍ಡಿಕೆ

Public TV
2 Min Read
CM HDK copy

ಬೆಂಗಳೂರು: ಕಳೆದ ರಾಜ್ಯ ವಿಧಾನಸಭಾ ಚುನಾವಣೆಯ ವೇಳೆ ಜನರ ವಿಶ್ವಾಸಗಳಿಸಲು ಹೆಚ್ಚು ಪ್ರಯತ್ನ ನಡೆಸಿದ್ದೆ. ಆದರೆ ರಾಜ್ಯದ ಜನ 37 ಸ್ಥಾನಗಳನ್ನು ನೀಡಿದ್ದರು. ಈ ಸಂಖ್ಯೆಯನ್ನು ನೋಡಿ ನಾನು ರಾಜಕೀಯ ನಿವೃತ್ತಿಗೆ ಚಿಂತನೆ ಮಾಡಿದ್ದೆ ಎಂದು ಸಿಎಂ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಕರ್ನಾಟಕದ ಮುನ್ನಡೆಗಾಗಿ ಪರಿಣಿತರೊಂದಿಗೆ ಸಿಎಂ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಎಚ್‍ಡಿಕೆ, ನಾನು ಎಂದು ಭವಿಷ್ಯದ ಮೇಲೆ ನಂಬಿಕೆ ಇಟ್ಟು ಬಂದಿಲ್ಲ. ಆದರೆ ನಮ್ಮ ಕುಟುಂಬ ಜೋತಿಷ್ಯವನ್ನು ನಂಬುತ್ತಾರೆ. ಅದಕ್ಕೆ ಕಾರಣ ಸಣ್ಣ ಹಳ್ಳಿಯಿಂದ ಬಂದ ನಮ್ಮ ತಂದೆಯವರು. ಆದರೆ ನಾನು ದೇವರನ್ನು ನಂಬುತ್ತೇನೆ. 37, 78 ಈಗಲೂ ಕೂಡ ನನಗೆ ಕಾಕತಾಳಿಯವೇ. ಅಂದು ಬಿಜೆಪಿ ಜೊತೆಗಿನ ಆಡಳಿತ ಅವಧಿಯಲ್ಲೂ ಅಷ್ಟೇ ಇತ್ತು ಎಂದರು.

CM HDK 2

ಈ ಹಿಂದೆ ಸಮ್ಮಿಶ್ರ ಸರ್ಕಾರ ರಚನೆ ಮಾಡಿದ ವೇಳೆ ಮಾಧ್ಯಮಗಳು ನನ್ನನ್ನು 20 ತಿಂಗಳ ಮುಖ್ಯಮಂತ್ರಿ ಎಂದಿದ್ದು, ಈಗಲೂ ಕೂಡ ದಿನನಿತ್ಯ ಗಡುವು ನೀಡುತ್ತಿದ್ದಾರೆ. ಅದನ್ನು ಎದುರಿಸಿ ನಾನು ಸರ್ಕಾರ ನಡೆಸುತ್ತಿದ್ದೇನೆ. ಚುನಾವಣೆಯಲ್ಲಿ ನಮ್ಮ ಪಕ್ಷ 37 ಸ್ಥಾನಗಳನ್ನು ಗಳಿಸದ ಸಂದರ್ಭದಲ್ಲಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವ ಚಿಂತನೆ ನಡೆಸಿದ್ದೆ ಎಂದರು.

ನನ್ನ ಸಮಯವನ್ನ ಏಕೆ ವ್ಯರ್ಥ ಮಾಡಿಕೊಂಡು ಇರಬೇಕು ಎಂಬ ಅಲೋಚನೆ ಆಗ ಮೂಡಿತ್ತು. ಜನತೆ ನಮ್ಮನ್ನು ನಂಬಲು ತಯಾರಾಗಿಲ್ಲ ಎಂದು ತೀರ್ಮಾನ ಮಾಡುವ ಹಂತದಲ್ಲಿ ನನಗೆ ಕರೆ ಬಂತು. ಆ ಬಳಿಕ ನಡೆದಿದ್ದು ಎಲ್ಲರಿಗೂ ತಿಳಿದಿದೆ. 20-20 ರ ಅವಧಿಯಲ್ಲಿ ದಿನಗಳು ಕಡಿಮೆ ಆಗುತ್ತಿದೆ ಎಂಬ ಆತಂಕ ಇತ್ತು. ಇವತ್ತು ಗಡುವುಗಳ ಮಧ್ಯೆ ಆಡಳಿತ ನಡೆಸಬೇಕಿದೆ ಎಂದರು.

CM HDK 1

ಎರಡು ಪಕ್ಷಗಳ ಮೈತ್ರಿ ಸರ್ಕಾರ ನಡೆಸುವುದು ಒಂದು ಸವಾಲಾಗಿದ್ದು, ಹನ್ನೆರಡು ವರ್ಷಗಳ ಹಿಂದೆ ಮೈತ್ರಿ ಸರ್ಕಾರ ರಚನೆ ಮಾಡಿದಾಗ ನನಗಿದ್ದದ್ದು ದೇವೇಗೌಡರ ಮಗ ಎಂಬ ಅರ್ಹತೆ ಮಾತ್ರ. ಯಾರೋ ಹುಡುಗ ಸರ್ಕಾರ ರಚನೆ ಮಾಡಿದ್ದಾನೆ ಎಂದು ಜನ ಅನುಮಾನದಿಂದಲೇ ನೋಡಿದರು. ಆದರೆ ಅಂದಿನ ಪರಿಸ್ಥಿತಿಯೇ ಬೇರೆ, ಈಗಿನ ಪರಿಸ್ಥಿತಿಯೇ ಬೇರೆ ಎಂದರು.

ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೃಷಿ, ಸಹಕಾರ, ಶಿಕ್ಷಣ, ಚಿತ್ರರಂಗ, ಕೈಗಾರಿಕೆ, ಮಾಹಿತಿ ತಂತ್ರಜ್ಞಾನ, ಪರಿಸರ, ವನ್ಯಜೀವಿ, ಕನ್ನಡ ಸಂಸ್ಕೃತಿ ಮತ್ತು ಮಾಧ್ಯಮ ಕ್ಷೇತ್ರಗಳ ಪರಿಣಿತರೊಂದಿಗೆ ಸಿಎಂ ಸಂವಾದ ನಡೆಸಿ ಪ್ರಶ್ನೆಗಳಿಗೆ ಉತ್ತರಿಸಿದರು. ಅಲ್ಲದೇ ಸಮ್ಮಿಶ್ರ ಸರ್ಕಾರದ ಈ ಬಗ್ಗೆ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *