ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್ ಶೋ ವೇಳೆ ಉಂಟಾಗಿದ್ದ ಅಗ್ನಿ ಅವಘಡದಲ್ಲಿ 500ಕ್ಕೂ ಹೆಚ್ಚು ಕಾರುಗಳು ಬೆಂಕಿಗೆ ಸಿಕ್ಕಿ ಸುಟ್ಟು ಕರಕಲಾಗಿದ್ದು, ಹಲವರು ಲಕ್ಷಾಂತರ ರೂ. ಮೌಲ್ಯದ ಕಾರುಗಳನ್ನು ಕಳೆದುಕೊಂಡಿದ್ದಾರೆ. ಆದರೆ ಕಾರು ಕಳೆದುಕೊಂಡ ಸಾರ್ವಜನಿಕರ ನೆರವಿಗೆ ರಾಜ್ಯ ಸಾರಿಗೆ ಆಗಮಿಸಿದ್ದು, ಸಂತ್ರಸ್ತರಿಗೆ ಸಿಗಬೇಕಾದ ಎಲ್ಲಾ ದಾಖಲೆಗಳನ್ನು ನೀಡಲಾಗುತ್ತದೆ. ಕಾನೂನಿ ನಿಯಮಗಳ ಪ್ರಕಾರ ದಾಖಲೆ ಸಲ್ಲಿಸಿ ಪರಿಹಾರ ಪಡೆಯಿರಿ ಎಂದು ಇಲಾಖೆಯ ಜಂಟಿ ನಿರ್ದೇಶಕರಾದ ಜ್ಞಾನೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.
ಅನಿರೀಕ್ಷಿತವಾಗಿ ಅವಘಡ ನಡೆದಿದ್ದು, ಇಂತಹ ಪರಿಸ್ಥಿತಿಯಲ್ಲಿ ವಿಮೆ ಪಡೆಯಲು ಸಾಧ್ಯವಿದೆ. ಇದಕ್ಕೆ ವಾಹನದ ಮಾಲೀಕರು ಪೊಲೀಸರಿಗೆ ದೂರು ನೀಡಬೇಕು. ದೂರು ನೀಡುವ ಸಂದರ್ಭದಲ್ಲಿ ವಾಹನ ದಾಖಲೆಗಳನ್ನು ನೀಡಬೇಕಾಗುತ್ತದೆ. ಆದರೆ ಅಧಿಕೃತ ದಾಖಲೆ ಇಲ್ಲದಿದ್ದರೆ ಆರ್‍ಟಿಒ ಕಚೇರಿಗೆ ತೆರಳಿ ನಕಲು ದಾಖಲೆಗಳನ್ನು ಪಡೆದು ದೂರು ಸಲ್ಲಿಸಬಹುದಾಗಿದೆ. ಪೊಲೀಸ್ ದೂರನ್ನು ಅಗತ್ಯ ದಾಖಲಾತಿಗಳೊಂದಿಗೆ ವಿಮೆ ಸಂಸ್ಥೆಗೆ ನೀಡಿದರೆ ನಿಯಮಗಳ ಅನುಸಾರ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ವಾಹನ ಖರೀದಿ ಮಾಡಿ 15 ವರ್ಷ ಆಗಿದ್ದರೆ ರಿನೀವಲ್ (ವಿಮೆ ನವೀಕರಣ) ಮಾಡಿಸಬೇಕು. ಹಳದಿ ಬೋರ್ಡ್ ವಾಹನ ಆದರೆ ವಾಹನದ ಕಂಡಿಷನ್ ಪ್ರಮಾಣ ಪತ್ರ ನೀಡಬೇಕು. ಎಲ್ಲಾ ದಾಖಲೆಗಳು ಅವಧಿಯ ಒಳಗೆ ಇರಬೇಕಾಗುತ್ತದೆ. ವಿಮಾ ಸಂಸ್ಥೆಗಳು ಕೇಳುವ ಎಲ್ಲಾ ದಾಖಲೆಗಳನ್ನು ಸಾರಿಗೆ ಇಲಾಖೆ ನೀಡುತ್ತದೆ. ಒನ್ ಟೈಮ್ ಆಪಿಯರೇನ್ಸ್ ನಲ್ಲೇ ಇದನ್ನು ನೀಡಲು ಸದ್ಯ ನಿರ್ಧರಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಸಹಾಯ ಕೇಂದ್ರ: ವಾಹನ ಮಾಲೀಕರ ಅನುಕೂಲಕ್ಕಾಗಿ ವಾಹನ ನೊಂದಣಿ ಮತ್ತು ಚಾಲನಾ ಪತ್ರ ವಿವರಗಳನ್ನು ಪಡೆಯಲು ಬೇಕಾದ ವಿಧಾನಗಳನ್ನು ತಿಳಿದುಕೊಳ್ಳಲು ಸಾರಿಗೆ ಇಲಾಖೆ ಸಹಾಯವಾನಿಯನ್ನು ಆರಂಭಿಸಿದೆ. ಯಲಹಂಕದ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಸಹಾಯ ಕೇಂದ್ರ ಆರಂಭಿಸಲಾಗಿದ್ದು, 080-2972 9908 ಹಾಗೂ ಮೊಬೈಲ್ ಸಂಖ್ಯೆ 94498 64050 ನಂಬರ್ ಗಳನ್ನು ಸಂಪರ್ಕಿಸಬಹುದು. ನಾಳೆ ಭಾನುವಾರ ಸರ್ಕಾರಿ ರಜಾ ದಿನವವಾದರೂ ಕೂಡ ಸಹಾಯ ಕೇಂದ್ರ ತೆರೆದಿರುತ್ತದೆ ಎಂಬ ಮಾಹಿತಿ ಲಭಿಸಿದೆ.
ವಾಹನ ವಿಮೆ ನಿಯಮವೇನು?
ವಾಹನ ವಿಮೆಯಲ್ಲಿ ಒಟ್ಟು ಮೂರು ವಿಧಗಳಿದ್ದು, ಪ್ರಮುಖ ಕಾರು ತಯಾರಿಕಾ ಕಂಪನಿಗಳು ಮಾರುಕಟ್ಟೆಯಲ್ಲಿ ಲಭ್ಯವಿರುವ ವಿಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡು ವಿಮಾ ಪಾಲಿಸಿಯನ್ನು ಗ್ರಾಹಕರಿಗೆ ನೀಡುತ್ತಾರೆ. ರಸ್ತೆ ಅಪಘಾತ, ಅಗ್ನಿ ಆಕಸ್ಮಿಕ, ಸಿಡಿಲು, ಗಲಭೆ, ಭೂಕಂಪ, ಚಂಡಮಾರುತ ಸೇರಿದಂತೆ ಕಳ್ಳತನ ಇತ್ಯಾದಿ ಸಂದರ್ಭಗಳನ್ನು ವಿಮೆಯಲ್ಲಿ ಸೇರಿರುತ್ತೆ. ವಿಮೆ ಸಂಪೂರ್ಣವಾಗಿ ವಿಮೆ ಮೊತ್ತ ಮತ್ತು ವಾಹನದ ಬಗೆಯ ಮೇಲೆ ನಿಂತಿರುತ್ತೆ.
ಎಲ್ಲ ವಾಹನಗಳಿಗೂ ಸಿಗಲ್ಲ ಇನ್ಯೂರೆನ್ಸ್..!
ಅಪಘಾತದಲ್ಲಿ ಸಂದರ್ಭದಲ್ಲಿ ವಿಮೆ ಮಾಡಿಸಿದ ಎಲ್ಲಾ ವಾಹನಗಳಿಗೂ ಶೇ. 100 ರಷ್ಟು ಹಣ ಹಿಂದಿರುವುದಿಲ್ಲ. ಕಾರು ವಿಮೆಯಲ್ಲಿ ಒಟ್ಟು ಮೂರು ವಿಧಗಳಿದ್ದು, ಕಾಂಪ್ರಹೆನ್ಸೀವ್ ವಿಮೆ (ಸಮಗ್ರ ವಿಮೆ), ಥರ್ಡ್ ಪಾರ್ಟಿ ವಿಮೆ ಹಾಗೂ ಇತ್ತೀಚೆಗೆ ಬಂಪರ್ ಟು ಬಂಪರ್ ವಿಮೆ ಚಾಲ್ತಿಯಲ್ಲಿದೆ.
ಸಮಗ್ರ ವಿಮೆಯಲ್ಲಿ ಗಾಡಿಯ ಮೌಲ್ಯ ಹಾಗೂ ವಿಮೆಯ ಮೊತ್ತದ ಮೇಲೆ ವಿಮೆ ಮೊತ್ತ ಸಿಗುತ್ತೆ. ಗಾಡಿ ಹೊಸತಾಗಿದ್ದರೆ ಬಹುತೇಕ ವಿಮಾ ಮೊತ್ತ ಹೆಚ್ಚಿರುತ್ತೆ. ಆದರೆ ಕಾಂಪ್ರೋಹೆನ್ಸಿವ್ ಇನ್ಸೂರೆನ್ಸ್ ಪಾಲಿಸಿಯಲ್ಲಿ ದುರಂತ ಸಂಭವಿಸಿದಾಗ ಕಾರಿನ ರಬ್ಬರ್, ನೈಲಾನ್ ಹಾಗೂ ಪ್ಲಾಸ್ಟಿಕ್ ವಸ್ತುಗಳಿಗೆ ಕೇವಲ ಫಿಫ್ಟಿ ಪರ್ಸೆಂಟ್ ವಿಮೆ, ಫೈಬರ್ ಗ್ಲಾಸ್‍ಗಳಿಗೆ ಶೇ. 30ರಷ್ಟು ವಿಮೆ ಹಾಗೂ ಗಾಜಿನಿಂದ ತಯಾರಿಸಲಾದ ಭಾಗಗಳಿಗೆ ಯಾವುದೇ ಇನ್ಸೂರೆನ್ಸ್ ಸಿಗುವುದಿಲ್ಲ. ಈ ಸಂದರ್ಭದಲ್ಲಿ ಅರ್ಧ ಹಣ ಮಾತ್ರ ಗ್ರಾಹಕರಿಗೆ ಲಭ್ಯವಾಗುತ್ತದೆ. ಗಾಡಿ ಒಂದು ವರ್ಷದ ಒಳಗಿದ್ದರೆ ಮಾತ್ರ ಬಹುತೇಕರಿಗೆ ಈ ಪಾಲಿಸಿನಲ್ಲಿ ದುಡ್ಡು ಸಿಗಬಹುದು. ಗಾಡಿ ಹಳೆಯದಾಗಿದ್ರೆ ಅರ್ಧದಷ್ಟೇ ಹಣ ಸಿಗುವ ಸಾಧ್ಯತೆಗಳಿವೆ.
ಥರ್ಡ್ ಪಾರ್ಟಿ ಇನೂರೆನ್ಸ್:
ದೊಡ್ಡ ಮೊತ್ತದ ವಿಮೆ ಕಟ್ಟಲಾರದವರು ಸಾಮಾನ್ಯ ಥರ್ಡ್ ಪಾರ್ಟಿ ಇನೂರೆನ್ಸ್ ಹೊಂದಿರುತ್ತಾರೆ. ಹಳೆಯ ಕಾರು ಹೊಂದಿರುವವರು, ಹಳೆಯ ಕಾರು ಖರೀದಿಸುವವರು ಭಾದ್ಯತಾ ವಿಮೆಯನ್ನು ಮಾಡಿಕೊಂಡಿರುತ್ತಾರೆ. ಈ ವಿಮೆ ಮಾಡಿಕೊಂಡರೆ ಬಹುತೇಕ ಅರ್ಧದಷ್ಟು ವಿಮೆ ಮಾತ್ರ ಸಿಗಲಿದೆ. ಅತ್ಯಂತ ಕಡಿಮೆ ವಿಮೆಯ ದುಡ್ಡು ವಾಪಾಸು ಸಿಗುತ್ತೆ.
ಬಂಪರ್ ಟು ಬಂಪರ್ ಟು ಇನ್ಸೂರೆನ್ಸ್:
ಬಹುತೇಕ ಲಕ್ಸುರಿ ಗಾಡಿಗಳು ಬಂಪರ್ ಟು ಬಂಪರ್ ಇನ್ಸುರೆನ್ಸ್ ಮಾಡಿಕೊಂಡಿರುತ್ತಾರೆ. ಈ ಇನ್ಸೂರೆನ್ಸ್ ಮಾಡಿಕೊಂಡರೆ ಬಹುತೇಕ 100% ವಿಮೆ ಪಾವತಿಯಾಗುತ್ತೆ. ಆದರೆ ವಾಹನ ತೀರಾ ಹಳೆಯದಾಗಿದರೆ ಈ ಇನ್ಯೂರೆನ್ಸ್ ಕೂಡ ಲಾಭವಿಲ್ಲ. ನೈಸರ್ಗಿಕ ವಿಪತ್ತು ಎಂದು ಎಂದು ಈ ಘಟನೆಯನ್ನು ಘೋಷಣೆ ಮಾಡಿದರೆ ಬಹುತೇಕ ಎಲ್ಲಾ ವಾಹನಗಳಿಗೆ ಶೇ.100 ರಷ್ಟು ವಿಮೆ ಸಿಗಲಿದೆ. ಇಲ್ಲದಿದ್ದರೆ ಆಯಾಯ ವಿಮೆಯ ಮೇಲೆ ಹಾಗೂ ಇನ್ಸೂರೆನ್ಸ್ ಬೆಲೆಯ ಮೇಲೆಯೆ ವಿಮೆ ದೊರೆಯಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv