ಭಾರತ ಕೊಟ್ಟ ಶಾಕ್‍ಗೆ ತಲೆಬಾಗಿ ಉಗ್ರ ಸಂಘಟನೆ ನಿಷೇಧಿಸಿದ ಪಾಕ್

Public TV
2 Min Read
modi imran khan

ಇಸ್ಲಾಮಾಬಾದ್: ಭಾರತ ಒಂದೊಂದಾಗಿ ಶಾಕ್ ನೀಡುತ್ತಿದ್ದಂತೆ ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಪಾಕಿಸ್ತಾನ ಕೊನೆಗೂ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲು ನಿರ್ಧಾರ ತೆಗೆದುಕೊಂಡಿದೆ.

ಮುಂಬೈ ದಾಳಿಯ ರೂವಾರಿ ಉಗ್ರ ಹಫೀಸ್ ಸಯೀದ್ ನೇತೃತ್ವದ ಜಮಾತ್ ಉದ್ ದಾವ(ಜೆಯುಡಿ) ಮತ್ತು ಇದರ ಚಾರಿಟಿ ಸಂಸ್ಥೆಯಾದ ಫಾಲ-ಐ-ಇನ್ಸಾತ್ ಫೌಂಡೇಶನ್(ಎಫ್‍ಐಎಫ್) ಸಂಸ್ಥೆಯನ್ನು ನಿಷೇಧಿಸಿದೆ.

pulwama attack

ಪ್ರಧಾನಿ ನಿವಾಸದಲ್ಲಿ ಪ್ರಧಾನಿ ಇಮ್ರಾನ್ ಖಾನ್ ಅವರು ಗುರುವಾರ ಸಂಜೆ ರಾಷ್ಟ್ರೀಯ ಭದ್ರತಾ ಸಮಿತಿಯ ಸಭೆಯನ್ನು ಕರೆದಿದ್ದರು. ಈ ಸಭೆಯಲ್ಲಿ ಪುಲ್ವಾಮ ಉಗ್ರರ ದಾಳಿಯ ಬಗ್ಗೆ ಚರ್ಚೆ ನಡೆದ ಬಳಿಕ ಈ ನಿಷೇಧ ನಿರ್ಧಾರವನ್ನು ಪಾಕ್ ಸರ್ಕಾರ ತೆಗೆದುಕೊಂಡಿದೆ.

ಫೆ.14 ರಂದು ಸಿಆರ್ ಪಿಎಫ್ ಯೋಧರ ಮೇಲೆ ಉಗ್ರರ ದಾಳಿ ನಡೆದ ಬಳಿಕ ಭಾರತ ಸರ್ಕಾರ ಪಾಕಿಸ್ತಾನವನ್ನು ವಿಶ್ವದಲ್ಲಿ ಏಕಾಂಗಿಯಾಗಿಸುವ ನಿಟ್ಟಿನಲ್ಲಿ ವಿದೇಶಗಳ ಜೊತೆ ಮಾತುಕತೆ ನಡೆಸಿತ್ತು. ಹಲವು ದೇಶಗಳು ಪುಲ್ವಾಮಾ ದಾಳಿಯನ್ನು ಖಂಡಿಸಿತ್ತು.  ಇದನ್ನು ಓದಿ: ಮತ್ತೊಂದು ಶಾಕ್: ಉಗ್ರರನ್ನು ಛೂ ಬಿಡೋ ಪಾಕಿಗೆ ನದಿ ನೀರು ಕೊಡಲ್ಲ!

ಇದಾದ ಬಳಿಕ ಭಾರತ ಪಾಕಿಸ್ತಾನಕ್ಕೆ ನೀಡಿದ್ದ ಪರಮಾಪ್ತ ರಾಷ್ಟ್ರ ಸ್ಥಾನಮಾನವನ್ನು ಕಿತ್ತೆಸೆದು ಅಲ್ಲಿಂದ ದೇಶಕ್ಕೆ ರಫ್ತಾಗುತ್ತಿದ್ದ ಉತ್ಪನ್ನಗಳ ಮೇಲೆ ಶೇ.200 ರಷ್ಟು ಆಮದು ಸುಂಕವನ್ನು ಏರಿಸಿ ಆರ್ಥಿಕ ಹೊಡೆತ ನೀಡಿತ್ತು. ಭಾರತದ ರೈತರು ಪಾಕಿಸ್ತಾನಕ್ಕೆ ತರಕಾರಿ ರಫ್ತು ಮಾಡುವುದನ್ನು ನಿಲ್ಲಿಸಿದ ಪರಿಣಾಮ ಪಾಕಿಸ್ತಾನದಲ್ಲಿ ತರಕಾರಿ ಮತ್ತು ಹಣ್ಣು ಹಂಪಲುಗಳ ಬೆಲೆ ದಿಢೀರ್ ಏರಿಕೆಯಾಗಿತ್ತು. ಲಾಹೋರ್‍ನಲ್ಲಿ ಪ್ರತಿ ಕೆಜಿ ಟೊಮೆಟೊ ಬೆಲೆ 180 ರೂ.ಗೆ ಏರಿಕೆ ಆಗಿತ್ತು.

Hafiz Saeedjpg

ಭಾರತದ ಮೇಲೆ ಉಗ್ರರನ್ನು ಛೂ ಬಿಟ್ಟು ಪರೋಕ್ಷವಾಗಿ ಯುದ್ಧ ಮಾಡುತ್ತಿರುವ ಪಾಕಿಸ್ತಾನಕ್ಕೆ ಪಾಠ ಕಲಿಸಲೇಬೇಕೆಂಬ ಜನಾಗ್ರಹ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ನದಿ ನೀರನ್ನು ಬಿಡದಿರುವ ಕಠಿಣ ತೀರ್ಮಾನವನ್ನು ತೆಗೆದುಕೊಂಡಿದೆ. ಪಾಕಿಸ್ತಾನಕ್ಕೆ ಹರಿಯುತ್ತಿರುವ ಮೂರು ನೀರಿನ ಹರಿವನ್ನು ನಿಲ್ಲಿಸಲಾಗುವುದು ಎಂದು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಗುರುವಾರ ಖಡಕ್ ಹೇಳಿಕೆ ನೀಡಿದ್ದರು. ಭಾರತ ಪ್ರತಿ ದಿನ ನೀಡುತ್ತಿರುವ ಹೊಡೆತಗಳಿಂದ ಈಗ ಸಮಸ್ಯೆ ಆಗದೇ ಇದ್ದರೂ ವಿವಿಧ ರಾಷ್ಟ್ರಗಳಿಂದ ಭಿಕ್ಷೆ ಬೇಡುತ್ತಿರುವ ನಮಗೆ ಮುಂದಿನ ದಿನಗಳಲ್ಲಿ ಭಾರೀ ಸಮಸ್ಯೆಯಾಗಲಿದೆ ಎನ್ನುವುದು ನಿಧಾನವಾಗಿ ಗೊತ್ತಾಗುತ್ತಿದ್ದಂತೆ ಪಾಕಿಸ್ತಾನ ಈಗ ಎಚ್ಚೆತ್ತುಕೊಂಡು ಹಫೀಸ್ ಸಯೀದ್ ಸಂಘಟನೆಯನ್ನು ನಿಷೇಧಿಸಲು ಕ್ರಮ ಕೈಗೊಂಡಿದೆ. ಇದನ್ನು ಓದಿ: ಮುಂಬೈ ಸ್ಫೋಟದ ರೂವಾರಿ ಹಫೀಜ್ ಸಯೀದ್ ಬಿಡುಗಡೆ-ಉತ್ತರ ಪ್ರದೇಶದಲ್ಲಿ ಸಂಭ್ರಮಾಚರಣೆ

ದಾಳಿ ನಡೆದ ಬಳಿಕ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಾಕ್ಷ್ಯಗಳನ್ನು ಕೊಟ್ಟರೆ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಭಾರತ ಮುಂಬೈ ದಾಳಿ ನಡೆದ ಬಳಿಕ ನಾವು ಸಾಕಷ್ಟು ಸಾಕ್ಷ್ಯಗಳನ್ನು ನೀಡಿದ್ದೇವೆ. ಆದರೆ ಇದರಿಂದ ಯಾವುದೇ ಫಲಿತಾಂಶ ಬಂದಿಲ್ಲ. ಹೀಗಾಗಿ ನಾವು ನಿಮಗೆ ಯಾವುದೇ ಸಾಕ್ಷ್ಯಗಳನ್ನು ನೀಡುವುದಿಲ್ಲ ಎಂದು ಹೇಳಿತ್ತು. ದಾಳಿ ಬಳಿಕ ನಡೆದ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ನಮ್ಮ ಸೈನಿಕರ ಬಲಿದಾನವನ್ನು ವ್ಯರ್ಥವಾಗಲು ನಾನು ಬಿಡುವುದಿಲ್ಲ. ಈ ಕೃತ್ಯಕ್ಕೆ ಪ್ರತೀಕಾರವನ್ನು ತೀರಿಸಿಯೇ ತೀರಿಸುತ್ತೇವೆ ಎಂದು ಗುಡುಗಿದ್ದರು.

modi

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *