ಸಿದ್ದರಾಮಯ್ಯ ಒತ್ತಡಕ್ಕೆ ಮಣಿದ ಸಿಎಂ ಎಚ್‍ಡಿಕೆ!

Public TV
2 Min Read
HDK BJP Siddu

– ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದ ಮಾಜಿ ಸಿಎಂ
– ಸದನ ಸಮಿತಿ ತನಿಖೆಗೆ ಬೇಡವೆಂದ ಸಿದ್ದರಾಮಯ್ಯ

ಬೆಂಗಳೂರು: ಆಪರೇಷನ್ ಕಮಲ ಆಡಿಯೋ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಒತ್ತಡಕ್ಕೆ ಮಣಿದು ಸಿಎಂ ಕುಮಾರಸ್ವಾಮಿ ಅವರು ವಿಶೇಷ ತನಿಖಾ ತಂಡಕ್ಕೆ ಪ್ರಕರಣವನ್ನು ವಹಿಸಿದ್ದಾರೆ.

ಹೌದು. ಎಸ್‍ಐಟಿ ಮುಖ್ಯಮಂತ್ರಿಗಳ ಕೈಕೆಳಗಡೆ ಕೆಲಸ ಮಾಡುತ್ತದೆ. ಇದರಿಂದ ತನಿಖೆ ಸರಿಯಾಗಿ ನಡೆಯುವುದು ಅನುಮಾನ ಹೀಗಾಗಿ ಸದನ ಸಮಿತಿಗೆ ನೀಡಬೇಕೆಂದು ಬಿಜೆಪಿ ಸದಸ್ಯರು ಆಗ್ರಹಿಸಿದ್ದರು. ಈ ವಿಚಾರದಲ್ಲಿ ಇಂದು ಕುಮಾರಸ್ವಾಮಿ ಅವರು ತಮ್ಮ ನಿಲುವು ಬದಲಿಸಿದರೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರ ಒತ್ತಡಕ್ಕೆ ಮಣಿದು ಎಸ್‍ಐಟಿಗೆ ಪ್ರಕರಣವನ್ನು ನೀಡಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

SESSION 1

ಈ ಪ್ರಕರಣದ ತನಿಖೆಯನ್ನು ಯಾರು ನಡೆಸಬೇಕು ಎನ್ನುವ ಬಗ್ಗೆ ಇಂದು ಸ್ಪೀಕರ್ ರಮೇಶ್ ಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಡಳಿತ ಮತ್ತು ಬಿಜೆಪಿಯ ನಾಯಕರು ಭಾಗವಹಿಸಿ ಚರ್ಚೆ ನಡೆಸಿದ್ದರು. ಈ ವೇಳೆ ಸಿಎಂ ಎಸ್‍ಐಟಿ ಬದಲಾಗಿ ಸದನ ಸಮಿತಿ ರಚನೆ ಮಾಡಲು ಒಪ್ಪಿಗೆ ಸೂಚಿಸಿದ್ದರು. ಆದರೆ ಮಾಜಿ ಸಿಎಂ ಮಾತ್ರ ಹಠಕ್ಕೆ ಬಿದ್ದು ಎಸ್‍ಐಟಿ ತನಿಖೆಯೇ ನಡೆಸಬೇಕೆಂದು ಪಟ್ಟು ಹಿಡಿದಿದ್ದರು.

ಒಂದು ಹಂತದಲ್ಲಿ ಸಭೆಯಿಂದ 10 ನಿಮಿಷ ಹೊರ ಬಂದ ವೇಳೆಯೂ ಸಿದ್ದರಾಮಯ್ಯ ಪಟ್ಟು ಸಡಿಲಿಸದ ಕಾರಣ ಸ್ವತಃ ಸಿಎಂ ಕುಮಾರಸ್ವಾಮಿ ಅವರು ಮನಸ್ಸು ಬದಲಿಸಿ ವಿಧಿ ಇಲ್ಲದೆ ಎಸ್‍ಐಟಿ ತನಿಖೆಗೆ ನೀಡಲು ಮುಂದಾದರು ಎಂದು ಮೂಲಗಳು ತಿಳಿಸಿವೆ.

ಆಪರೇಷನ್ ಕಮಲ ಮೂಲಕ ಕಾಂಗ್ರೆಸ್ ಶಾಸಕರನ್ನು ಸೆಳೆದು ತಮಗೇ ತಲೆ ನೋವು ತಂದಿದ್ದ ಬಿಎಸ್‍ವೈ ಅವರ ವಿರುದ್ಧದ ಸೇಡಿಗೆ ಸಿದ್ದರಾಮಯ್ಯ ಅವರು ಎಸ್‍ಐಟಿ ತನಿಖೆಯೇ ನಡೆಯಬೇಕಂಬ ಹಠ ಹಿಡಿದಿದ್ದರು ಎನ್ನಲಾಗಿದೆ. ಸಿಎಂ ಕುಮಾರಸ್ವಾಮಿ ಅವರು ಈಗ ಬಿಜೆಪಿ ಅವರ ಮೇಲೆ ಸಾಫ್ಟ್ ಕರ್ನರ್ ಮೂಡಿದರೆ ಅದು ಮುಂದೇ ಸಮ್ಮಿಶ್ರ ಸರ್ಕಾರಕ್ಕೆ ಮುಳವಾಗಬಹುದು ಎಂಬ ಚಿಂತನೆಯೂ ಇತ್ತು ಎನ್ನಲಾಗಿದೆ. ಈ ಮೂಲಕ ಎಸ್‍ಐಟಿ ತನಿಖೆ ವಹಿಸಿ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ತಂತ್ರವನ್ನು ಪ್ರಯೋಗಿಸಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ ಎನ್ನುವ ವಿಶ್ಲೇಷಣೆ ಈಗ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *