ಆಪರೇಷನ್ ಆಡಿಯೋ: ಸದನದಲ್ಲಿ ಭಾವುಕರಾದ ಸ್ಪೀಕರ್ ರಮೇಶ್ ಕುಮಾರ್

Public TV
2 Min Read
Speaker Ramesh kumar copy 1

ಬೆಂಗಳೂರು: ಆಪರೇಷನ್ ಆಡಿಯೋ ಕುರಿತು ವಿಧಾನಸಭಾ ಕಲಾಪದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.

ಆಪರೇಷನ್ ಆಡಿಯೋವನ್ನು ನನ್ನ ಗಮನಕ್ಕೆ ತಂದ ಸಿಎಂ ಕುಮಾರಸ್ವಾಮಿ ಅವರಿಗೆ ಧನ್ಯವಾದಗಳು. ಸದನದ ಎಲ್ಲ ಸದಸ್ಯರಿಂದ ಅವಿರೋಧವಾಗಿ ಆಯ್ಕೆಯಾಗಿದ್ದೇನೆ. ಹೀಗಾಗಿ ಗೌರವ ಪೂರಕವಾಗಿ ನಡೆದುಕೊಳ್ಳಬೇಕಾಗುತ್ತದೆ. ಇದಕ್ಕೆ ಅಪಚಾರವಾಗುವಂತೆ ನೀವು ನಡೆದುಕೊಳ್ಳಬಾರದು.

ದೌರ್ಭಾಗ್ಯಕ್ಕೆ ಆಪರೇಷನ್ ಡೀಲ್‍ನಲ್ಲಿ ಮಾತನಾಡಿರುವವರು ನನ್ನ ಹೆಸರು ಪ್ರಸ್ತಾಪಿಸಿದ್ದಾರೆ. ಶಾಸಕರು ರಾಜೀನಾಮೆ ನೀಡಿದರೆ ತಕ್ಷಣವೇ ಒಪ್ಪಿಕೊಳ್ಳಲು ಸ್ಪೀಕರ್ ಗೆ 50 ಕೋಟಿ ನೀಡಿ ಸರಿಮಾಡಿಕೊಂಡಿದ್ದೇವೆ ಎಂದು ಆಡಿಯೋದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಒಂದು ವೇಳೆ ಸ್ಪೀಕರ್ ಒಪ್ಪಿಕೊಳ್ಳದಿದ್ದರೆ ಕೊರ್ಟ್ ಗೆ ಹೋಗುತ್ತೇವೆ ಎಂದು ಮಾತನಾಡಿದ್ದಾರೆ. ಇದು ಸ್ಪೀಕರ್ ಸ್ಥಾನಕ್ಕೆ ಮಾಡಿದ ಅವಮಾನ ಎಂದು ಬೇಸರ ವ್ಯಕ್ತಪಡಿಸಿದರು.

HDK speaker Ramesh kumar

ಮತ್ತೊಂದು ದುಃಖದ ಸಂಗತಿಯೆಂದರೆ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಉಲ್ಲೇಖಿಸಿದ್ದಾರೆ. ಅವರನ್ನು ಇಂತಹ ಕೆಲಸಕ್ಕೆ ಎಳೆದುಬಿಟ್ಟಿದ್ದಾರೆ. ಇದು ದೇಶಕ್ಕೆ, ಸಂಸತ್ತು ಹಾಗೂ ಶಾಸನ ಸಭೆಗೆ ಗೌರವ ತರುವುದಿಲ್ಲ, ಒಳ್ಳೆಯದಲ್ಲ ಎಂದು ಅಸಮಾಧಾನ ಹೊರಹಾಕಿದರು.

ಸ್ಪೀಕರ್ ಆಗಿರುವವರು ಸದನದ ಮೌಲ್ಯವಾಗಿ ಹಾಗೂ ಎಲ್ಲ ಸದಸ್ಯರ ಪ್ರತೀಕವಾಗಿರುತ್ತಾರೆ. ಹೊರಗಿನ ಜನರು ನಮ್ಮನ್ನು ನೋಡುತ್ತಾರೆ. ಇದು ಒಂದು ಪಕ್ಷಕ್ಕೆ, ವ್ಯಕ್ತಿಗೆ ಸೀಮಿತವಾದ ವಿಚಾರವಲ್ಲ. ಸಿಎಂ ಕುಮಾರಸ್ವಾಮಿ ಅವರ ಕಚೇರಿಯಿಂದ ಫೆಬ್ರವರಿ 8 ರಂದು ಸಂಜೆ ನನಗೆ ಪತ್ರ ಕಳುಹಿಸಿದ್ದಾರೆ. ಸಂಪ್ರದಾಯವನ್ನು ಮರೆತು ಬಜೆಟ್ ಅಧಿವೇಶವನ್ನು ಮುಂದೆ ಹಾಕುವಂತಿರಲಿಲ್ಲ. ಶನಿವಾರ ಹಾಗೂ ಭಾನುವಾರ ರಜೆ ಕಳೆದಿದ್ದೇವೆ. ಹೀಗಾಗಿ ನಾನು ಇಂದು ಸ್ವಲ್ಪ ಸಮಯ ತೆಗೆದುಕೊಳ್ಳುತ್ತಿರುವೆ ಎಂದು ತಿಳಿಸಿ ಶಾಸಕರಿಗೆ ಚಾಟಿ ಬೀಸಿದರು.

Speaker Ramesh kumar 1

ಕಳೆದ ಎರಡು ದಿನಗಳಿಂದ ಇಂತಹ ಆರೋಪವನ್ನು ಹೊತ್ತು ನಾನು ಏನೆಲ್ಲ ನೋವು ಅನುಭವಿಸಿರಬಹುದು. ಈ ಹಿಂದೆ ಸ್ಪೀಕರ್ ಆಗಿದ್ದಾಗ ವೃದ್ಧೆಯೊಬ್ಬಳು ನನ್ನ ಬಳಿಗೆ ಬಂದು, ಮೃತ ಪತಿಯ ಕೆಲಸವನ್ನು ಆಕೆಯ ವಿವಾಹಿತ ಮಗಳಿಗೆ ಕೊಡಿಸುವಂತೆ ಕೇಳಿಕೊಂಡಿದ್ದಳು. ಆಕೆಯ ಸಮಸ್ಯೆ ಅರಿತು ಕೆಲಸವನ್ನು ಕೊಡಿಸಿದೆ. ನನ್ನ ಬದುಕು, ಮನಸ್ಸು ಅಂತವರ ಜೊತೆಗೆ ಇರುತ್ತದೆಯೇ ಹೊರತು ಅವ್ಯವಹಾರದ ಕಡೆಗೆ ಗಮನ ನೀಡುವುದಿಲ್ಲ ಎಂದರು.

ಅಭಿಮಾನದಿಂದ, ಗೌರವದಿಂದ ನನ್ನನ್ನು ಆಯ್ಕೆ ಮಾಡಿದ್ದೀರಿ. ಆದರೆ ಈಗ ದೊಡ್ಡ ಆಪಾದನೆಯನ್ನೇ ನಾನು ಹೊರಬೇಕಾಗಿ ಬಂದಿದೆ. ನಾನು ಎಂದೂ ಹೀಗೆ ನಡೆದುಕೊಂಡ ವ್ಯಕ್ತಿಯಲ್ಲ ಎಂದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *