ನವದೆಹಲಿ: ಸುಪ್ರೀಂ ಕೋರ್ಟ್ ರಾಮಮಂದಿರ ಪ್ರಕರಣದಲ್ಲಿ ಬಹುಬೇಗ ಅಂತಿಮ ತೀರ್ಪನ್ನು ಪ್ರಕಟಿಸಬೇಕಿದ್ದು, ಪ್ರಕರಣದಲ್ಲಿ ಅನಗತ್ಯ ವಿಳಂಬ ಆಗುತ್ತಿರುವುದರಿಂದ ಜನರು ನ್ಯಾಯಾಂಗ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಮಾಧ್ಯಮ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಸಿಎಂ ಯೋಗಿ ಆದಿತ್ಯನಾಥ್, ನ್ಯಾಯಾಲಯ ಬಹುಬೇಗ ತೀರ್ಪನ್ನು ಪ್ರಕಟಿಸಬೇಕು ಎಂದು ಕೋರುತ್ತೇನೆ. ಒಂದೊಮ್ಮೆ ಅದನ್ನು ಮಾಡಲು ಸಾಧ್ಯವಿಲ್ಲದಿದ್ದರೆ, ನಮಗೇ ಪ್ರಕರಣವನ್ನು ನೀಡಲಿ. 24 ಗಂಟೆಯಲ್ಲಿ ಪ್ರಕರಣವನ್ನು ಬಗೆಹರಿಸುತ್ತೇವೆ. 25 ಗಂಟೆ ಕೂಡ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಕೋಟ್ಯಾಂತರ ಜನರ ನಂಬಿಕೆಯನ್ನು ತೃಪ್ತಿಪಡಿಸಲು ನಾವು ನ್ಯಾಯಾಲಯಕ್ಕೆ ಪ್ರಕರಣದ ತೀರ್ಪು ಬಹುಬೇಗ ನೀಡಲು ಮನವಿ ಮಾಡುತ್ತೇವೆ. ಇದು ಜನರ ನಂಬಿಕೆಯ ವಿಚಾರವಾಗಿದೆ. ಅನಗತ್ಯ ವಿಳಂಬ ಮತ್ತಷ್ಟು ವಿವಾದಕ್ಕೆ ಕಾರಣವಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿರುವ ಸಿಎಂ ಯೋಗಿ, ಕಾಂಗ್ರೆಸ್ ಪಕ್ಷಕ್ಕೆ ರಾಮ ಜನ್ಮ ಭೂಮಿ ವಿವಾದ ಬಗೆಹರಿಯುವುದು ಬೇಡವಾಗಿದೆ. ಅಯೋಧ್ಯೆ ವಿವಾದ ಅಂತ್ಯವಾದರೆ, ತ್ರಿವಳಿ ತಲಾಖ್ ಸೇರಿದಂತೆ ಹಲವು ವಿಷಯಗಳ ರಾಜಕೀಯ ಶಾಶ್ವತವಾಗಿ ಅಂತ್ಯಗೊಳ್ಳುತ್ತದೆ ಎಂಬ ಉದ್ದೇಶ ಹೊಂದಿದೆ ಎಂದು ಕಿಡಿಕಾರಿದ್ದಾರೆ.
ಇದೇ ವೇಳೆ ಮೈತ್ರಿ ರಾಜಕಾರಣದ ಬಗ್ಗೆ ಪ್ರತಿಕ್ರಿಯೆ ನೀಡಿ, ಜಾತಿ ರಾಜಕಾರಣದ ಹೆಸರಿನಲ್ಲಿ ಅವರು ಮತ್ತಷ್ಟು ಕೆಳ ಮಟ್ಟಕ್ಕೆ ಇಳಿದರೂ ಕೂಡ, ಅದು ಶೇ. 70 ಮತ್ತು 30 ರ ನಡುವಿನ ಹೋರಾಟ ಆಗುತ್ತದೆ. ಏಕೆಂದರೆ 70 ಮತದಾರರು ಬಿಜೆಪಿಯ ಪರ ಇದ್ದು, 30 ರಷ್ಟು ಮಂದಿ ಮಾತ್ರ ಮಹಾಘಟಬಂಧನ್ ಪರ ಇದ್ದಾರೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೇ ಕಾಂಗ್ರೆಸ್ ಪಕ್ಷ ಪ್ರಿಯಾಂಕ ಗಾಂಧಿ ಅವರನ್ನು ಕರೆತರುವ ಮೂಲಕ ಕುಟುಂಬ ರಾಜಕಾರಣ ಬಿಟ್ಟು ಬೇರೆ ಏನು ಬರುವುದಿಲ್ಲ ಎಂದು ಸಾಬೀತು ಪಡಿಸಿದೆ. 2014 ರಲ್ಲಿ ಪಕ್ಷ ಉತ್ತರ ಪ್ರದೇಶದಲ್ಲಿ ಗೆದ್ದ ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv