ಬೆಂಗಳೂರು: ಹುಲ್ಲು ತುಂಬಿದ್ದ ಟ್ರ್ಯಾಕ್ಟರ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿ, ಮತ್ತಿಬ್ಬರು ಗಾಯಗೊಂಡಿರುವ ಘಟನೆ ನಗರದ ಹೊರವಲಯ ಚಿಂತಾಮಣಿ ರಾಷ್ಟ್ರೀಯ ಹೆದ್ದಾರಿ ನಂದಗುಡಿ ಬಳಿ ನಡೆದಿದೆ.
ಹುಲ್ಲು ತುಂಬಿಕೊಂಡು ಬರುತ್ತಿದ್ದ ಟ್ರ್ಯಾಕ್ಟರ್ ಗೆ ಬೆಂಗಳೂರು ಕಡೆಯಿಂದ ಬರುತ್ತಿದ್ದ ಸಿಫ್ಟ್ ಕಾರೊಂದು ಡಿಕ್ಕಿಯಾಗಿದೆ. ಅಪಘಾತದಿಂದ ಕಾರಿನಲ್ಲಿದ್ದ ನಂಜುಂಡಪ್ಪ(67) ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತ್ನಿ ನಾರಾಯಣಮ್ಮ(55) ಹಾಗು ಸೊಸೆ ಶೀಲಾ ಗಂಭೀರ ಗಾಯಗೊಂಡಿದ್ದಾರೆ.
ಗಂಭೀರವಾಗಿ ಗಾಯಗೊಂಡ ನಾರಾಯಣಮ್ಮ ಹಾಗೂ ಶೀಲಾರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದ್ದು, ಇಬ್ಬರ ಸ್ಥಿತಿಯೂ ಚಿಂತಾಜನಕವಾಗಿದೆ. ಮೃತ ನಂಜುಂಡಪ್ಪ ಹಾಗೂ ಕುಟುಂಬದವರು ಮೂಲತಃ ಕೋಲಾರದ ಜಯನಗರ ನಿವಾಸಿಗಳು. ಕುಟುಂಬ ಸಮೇತ ಸಂಬಂಧಿಕರ ಮನೆಗೆ ಕಾರಿನಲ್ಲಿ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಕಾರು ಚಾಲಕನ ಅತೀ ವೇಗವೇ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಘಟನಾ ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಈ ಕುರಿತು ನಂದಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv