ಪುರಾಣ ಪ್ರಸಿದ್ಧ ಭೋಗನಂದೀಶ್ವರ ದೇಗುಲದಲ್ಲಿ ದೀಪ ಬೆಳಗಲು ಬ್ರೇಕ್!

Public TV
2 Min Read
bhoga nandeeshwara temple

– ಶಿವನ ಭಕ್ತರ ಭಾವನೆಗೆ ನೋವು ತಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ!
– ದೀಪ ಹಚ್ಚುವ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದಕ್ಕೆ ಭಕ್ತರ ಆಕ್ರೋಶ

ಚಿಕ್ಕಬಳ್ಳಾಪುರ: ನೂರಾರು ವರ್ಷಗಳ ಇತಿಹಾಸವಿರುವ ಪುರಾಣಪ್ರಸಿದ್ಧ, ದಕ್ಷಿಣ ಕಾಶಿ ಎಂದೇ ಕರೆಯಲ್ಪಡುತ್ತಿರುವ ಭೋಗನಂದೀಶ್ವರ ದೇವಾಲಯದಲ್ಲಿ ದೀಪವನ್ನು ಬೆಳಗದಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದ್ದಕ್ಕೆ ಭಕ್ತರಿಂದ ಆಕ್ರೋಶ ಕೇಳಿ ಬಂದಿದೆ.

ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದಲ್ಲಿರುವ ಪುರಾತನ ಐತಿಹಾಸ ಪ್ರಸಿದ್ಧ ಶ್ರೀ ಭೋಗನಂದೀಶ್ವರ ದೇವಾಲಯದಲ್ಲಿ ಶಿವ ಪಾರ್ವತಿ, ಅರುಣಾಚಲೇಶ್ವರ, ಗಿರಿಜಾಂಭ ಸೇರಿದಂತೆ ಪ್ರಮುಖ ದೇವರುಗಳು ನೆಲೆಸಿದ್ದಾರೆ ಎನ್ನುವ ನಂಬಿಕೆಯಿದೆ.

Bhoga Nandeeshwara Temple 1

ಬೆಂಗಳೂರಿಗೆ ಹತ್ತಿರದಲ್ಲಿರುವ ಶಿವ ದೇವಸ್ಥಾನ ಎನ್ನುವ ಕಾರಣಕ್ಕೆ ಪ್ರತಿದಿನ ಸಾವಿರಾರು ಜನ ಶಿವನ ಭಕ್ತರು ಈ ದೇವಸ್ಥಾನಕ್ಕೆ ಬರುತ್ತಾರೆ. ಕಾರ್ತಿಕ ಮಾಸ ಬಂದರೆ ಸಾಕು ಪ್ರತಿದಿನ ಜನಜಾತ್ರೆ ಇಲ್ಲಿರುತ್ತದೆ. ಅದರಲ್ಲೂ ಕಾರ್ತಿಕ ಮಾಸದ ಸೋಮವಾರ ದಿನವಂತೂ ಜನಜಂಗುಳಿಯೇ ಇಲ್ಲಿರುತ್ತದೆ.

ದೇವಸ್ಥಾನಕ್ಕೆ ಬಂದ ಶಿವನ ಭಕ್ತರು, ದೇವಾಲಯದ ವರಾಂಡದಲ್ಲಿ, ಒಳಾಂಗಣ ಪ್ರಾಂಗಣದಲ್ಲಿ ತಮ್ಮ ಇಷ್ಟಾರ್ಥ ಕೋರಿಕೆಗಳನ್ನು ಈಡೇರಿಸುವಂತೆ ಪ್ರಾರ್ಥಿಸಿ, ತುಪ್ಪ, ಎಳ್ಳೆಣ್ಣೆ, ಅರಳೆಣ್ಣೆ ದೀಪ ಹಚ್ಚುವುದು ವಾಡಿಕೆ. ಆದರೆ ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ದೇವಸ್ಥಾನದ ಒಳಾಂಗಣದ ಪ್ರಾಂಗಣದಲ್ಲಿ ದೀಪ ಹಚ್ಚುವುದನ್ನು ನಿಷೇಧಿಸಿದೆ.

Bhoga Nandeeshwara Temple 3

ನಿಷೇಧ ಯಾಕೆ?
ಶ್ರೀ ಭೋಗನಂದೀಶ್ವರ ದೇವಾಲಯ ಭಾರತೀಯ ಪುರಾತತ್ವ ಹಾಗೂ ಸರ್ವೇಕ್ಷಣ ಇಲಾಖೆ ಅಧೀನದಲ್ಲಿದೆ. ಆದರೆ ದೇವಸ್ಥಾನದ ಪೂಜಾ ಕೈಕಂರ್ಯಗಳು ಮಾತ್ರ ಮುಜರಾಯಿ ಇಲಾಖೆಯ ಅಧೀನದಲ್ಲಿದೆ. ಇವರಿಬ್ಬರ ಮಧ್ಯೆ ದೇವಸ್ಥಾನದ ಸ್ವಚ್ಛತೆಯನ್ನು ನೀವು ಮಾಡಿ ತಾವು ಮಾಡಿ ಅಂತ ಭಿನ್ನಾಭಿಪ್ರಾಯಗಳಿವೆ. ಹೀಗಾಗಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದೀಪ ಹಚ್ಚುವುದನ್ನು ದೇವಸ್ಥಾನದ ಪ್ರಾಂಗಣದಲ್ಲಿ ಅವಕಾಶ ಕೊಟ್ಟರೆ ಎಣ್ಣೆಯ ಹೊಳೆ ಹರಿದು ಕೊನೆಗೆ ದೇವಸ್ಥಾನಕ್ಕೆ ಧಕ್ಕೆ ಆಗುತ್ತದೆ. ಈ ಕಾರಣಕ್ಕೆ ದೇವಸ್ಥಾನ ಸಂರಕ್ಷಣೆಗೆ ಕಠಿಣ ನಿರ್ಧಾರ ಕೈಗೊಳ್ಳಬೇಕಾಯಿತು. ಭಕ್ತರು ಸಹಕರಿಸುವಂತೆ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಮನವಿ ಮಾಡಿದ್ದಾರೆ.

ದೇವಸ್ಥಾನ ಸಂರಕ್ಷಣೆ ಹಿತ ದೃಷ್ಟಿಯಿಂದ ದೇವಸ್ಥಾನ ಒಳಾಂಗಣ ಪ್ರಾಂಗಣದಲ್ಲಿ ದೀಪದ ಎಣ್ಣೆ ಹಚ್ಚುವುದನ್ನು ಚಿಕ್ಕಬಳ್ಳಾಪರ ಜಿಲ್ಲಾಡಳಿತ ನಿಷೇಧ ಮಾಡಿದೆ. ಆದರೆ ವಾಡಿಕೆಯಂತೆ ದೇವಸ್ಥಾನದಲ್ಲಿ ದೀಪ ಹಚ್ಚಲು ಬಂದ ಶಿವನ ಭಕ್ತರು, ಈ ಬದಲಾವಣೆಯಿಂದ ಅಸಮಾಧಾನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವರ ಮೇಲಿನ ಭಕ್ತಿಯಿಂದ ಬಯಲು ಪ್ರದೇಶದಲ್ಲಿ ದೀಪ ಹಚ್ಚಲು ಹೋದರೆ ದೀಪ ನಿಲ್ಲದೆ ಗಾಳಿಗೆ ಹಾರಿ ಹೋಗುತ್ತಿದ್ದು ಮತ್ತೊಂದೆಡೆ ಚಪ್ಪಲಿ ಬಿಡೋ ಜಾಗದಲ್ಲಿ ದೀಪ ಹಚ್ಚೋದು ಹೇಗೆ ಎನ್ನುವುದು ಭಕ್ತರ ಪ್ರಶ್ನೆಯಾಗಿದೆ.

Bhoga Nandeeshwara Temple 6

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *