ಹುಬ್ಬಳ್ಳಿ: ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ನಾವೇ ಕಾಂಗ್ರೆಸ್ಸಿಗೆ ಬಿಟ್ಟುಕೊಟ್ಟಿದ್ದೇವೆಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಬಗ್ಗೆ ಹಲವಾರು ಭಾವನೆಗಳು ಇವೆ. ಮೈತ್ರಿ ಸರ್ಕಾರದಲ್ಲಿ ಸಮಸ್ಯೆಗಳು ಬರುವುದು ಸಾಮಾನ್ಯ. ಈ ಸರ್ಕಾರವನ್ನು ಉಳಿಸಿಕೊಂಡು ಹೋಗಲು ಪ್ರಯತ್ನ ಮಾಡಲಾಗುವುದು. ಹೀಗಾಗಿ ಕಾಂಗ್ರೆಸ್ಸಿಗೆ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ನಾವೇ ಬಿಟ್ಟುಕೊಟ್ಟಿದ್ದೇವೆಂದು ತಿಳಿಸಿದ್ರು.
ಇದೇ ವೇಳೆ ಸಚಿವರ ಸಂಪುಟದ ಕುರಿತು ಪ್ರತಿಕ್ರಿಯಿಸಿ, ಸಚಿವ ಸ್ಥಾನ ಹಂಚಿಕೆಯಲ್ಲಿ ಯಾವುದೇ ಗೊಂದಲ ಇಲ್ಲ. ಈ ತಿಂಗಳ ಅಂತ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಆಗಲಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸುತ್ತವೆ. ಜಾತ್ಯಾತೀತ ವಿರೋಧಿಗಳನ್ನು ದೂರ ಇಡಲು, ನಾವು ಒಟ್ಟಾಗಿ ಕೆಲಸ ಮಾಡುತ್ತೇವೆ. ಕಾಂಗ್ರೆಸ್ಸಿನ ವೇಣುಗೋಪಾಲ್ ಅವರ ಸೂಚನೆ ಮೇರೆಗೆ ಸಿದ್ದರಾಮಯ್ಯ ಹಾಗೂ ನಾನು ಈ ಬಗ್ಗೆ ಚರ್ಚೆ ಮಾಡುತ್ತೇನೆ. ಲೋಕಸಭಾ ಚುನಾವಣೆಯ ಸೀಟು ಹಂಚಿಕೆಯ ಬಗ್ಗೆ ಹಲವಾರು ಒಡಂಬಡಿಕೆಯನ್ನು ಮಾಡಲಿದ್ದೇವೆ. ಇನ್ನೂ ಎರಡು-ಮೂರು ದಿನಗಳಲ್ಲಿ ಸೀಟು ಹಂಚಿಕೆಯ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ಹೇಳಿದರು.
ರೈತರ ಆತ್ಮಹತ್ಯೆ ಕುರಿತು ಕೇಳಿದ ಪ್ರಶ್ನೆಗೆ ಕೆಂಡಾಮಂಡಲವಾಗಿ ಉತ್ತರಿಸಿದ ದೇವೇಗೌಡರು, ಈಗಾಗಲೇ ರಾಜ್ಯದಲ್ಲಿ ಸಾಲಮನ್ನಾ ಮಾಡಲಾಗಿದೆ. ನಾವೇನು ಬಿಜೆಪಿಯವರ ಹಾಗೇ ರೈತರ ಮೇಲೆ ಗೋಲಿಬಾರ್ ಮಾಡಿಸಿಲ್ಲ. ರೈತರ ಸಮಸ್ಯೆಗಳು ಆದಷ್ಟು ಬೇಗ ಬಗೆಹರಿಯಲಿವೆ. ಆತ್ಮಹತ್ಯೆ ಮಾಡಿಕೊಂಡ ರೈತರು, ಸಾಲದ ಹೊರೆಯಿಂದಲೇ ಮೃತಪಟ್ಟಿಲ್ಲ. ಕೆಲ ಮಾಧ್ಯಮಗಳಲ್ಲಿ ತಪ್ಪಾಗಿ ತೋರಿಸುತ್ತಿದ್ದಾರೆ. ಮಾಧ್ಯಮದವರಿಂದ ನಾನು ಕಲಿಯಬೇಕಾಗಿರುವುದು ಏನು ಇಲ್ಲ. ಮಾಧ್ಯಮದವರು ಸಮಾಧಾನದಿಂದ ಮಾತನಾಡಿ, ಪ್ರಚೋದನೆ ಮಾಡುವ ಕೆಲಸ ಮಾಡಬೇಡಿ ಎಂದು ಕಿಡಿಕಾರಿದರು.
ನಾನೂ ಸಹ ದೇಶದ ಪ್ರಧಾನಿಯಾಗಿ ಕೆಲಸ ಮಾಡಿದ್ದೇನೆ. ಈಗಲೂ ಸಹ ರೈತರ ಸಮಸ್ಯೆ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿಯವರ ಮನೆಗೆ ಹೋಗಿ ಬಂದಿದ್ದೇನೆ. ಅವರೇಕೆ ಸಮಸ್ಯೆ ಬಗೆಹರಿಸಿಲ್ಲ. ಅದನ್ನು ಏಕೆ ಮಾಧ್ಯಮಗಳು ಪ್ರಶ್ನಿಸುವುದಿಲ್ಲ. ಈಗಾಗಲೇ ಕಬ್ಬು ಬೆಳೆಗಾರರು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆಯಲಾಗಿದೆ. ಸಮಸ್ಯೆಗಳು ಆದಷ್ಟು ಬೇಗ ಬಗೆ ಹರಿಯಲಿವೆ. ನಾವು ಕೆಲಸ ಮಾಡುತ್ತಿದ್ದೇವೆ. ಆದರೆ ಎಲೆಕ್ಟ್ರಾನಿಕ್ ವೇಗದಲ್ಲಿ ಕೆಲಸ ಮಾಡಲು ಸಾಧ್ಯವಿಲ್ಲವೆಂದು ಉತ್ತರಿಸಿದರು. ಇದನ್ನೂ ಓದಿ: ಮೈಸೂರು ಮೇಯರ್ ಸ್ಥಾನ ಕಾಂಗ್ರೆಸ್ಸಿಗೆ ಯಾಕೆ ನೀಡ್ಬೇಕು- ಸಿದ್ದರಾಮಯ್ಯ ಖಡಕ್ ಸ್ಪಷ್ಟನೆ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews