Tuesday, 19th November 2019

Recent News

ಮೈಸೂರು ಮೇಯರ್ ಸ್ಥಾನ ಕಾಂಗ್ರೆಸ್ಸಿಗೆ ಯಾಕೆ ನೀಡ್ಬೇಕು- ಸಿದ್ದರಾಮಯ್ಯ ಖಡಕ್ ಸ್ಪಷ್ಟನೆ

ಮೈಸೂರು: ಮಹಾನಗರ ಪಾಲಿಕೆ ಮೇಯರ್ ಸ್ಥಾನ ಕಾಂಗ್ರೆಸ್‍ಗೆ ಯಾಕೆ ಬೇಕು ಎನ್ನುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಜೆಡಿಎಸ್‍ನ ಜಿ.ಟಿ.ದೇವೇಗೌಡ ಹಾಗೂ ಸಂಪುಟದ ಸಚಿವರಾಗಿ ಸಾ.ರಾ.ಮಹೇಶ್ ಅವರಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೂ ಧ್ವನಿಯ ಅಗತ್ಯವಿದೆ. ಈ ಉದ್ದೇಶಕ್ಕಾಗಿ ಮೈಸೂರು ಮಹಾನಗರ ಪಾಲಿಕೆಯ ಮೇಯರ್ ಸ್ಥಾನವನ್ನು ನಮ್ಮ ಪಕ್ಷಕ್ಕೆ ನೀಡುವಂತೆ ಕೇಳಿದ್ದೇವೆ. ಇದು ನ್ಯಾಯಯುತವಾದ ಬೇಡಿಕೆಯೂ ಹೌದು ಎಂದು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

ಇದಕ್ಕೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ್ದ ಮಾಜಿ ಸಿಎಂ, ಮೇಯರ್ ಆಯ್ಕೆ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷರದ ದಿನೇಶ್ ಗುಂಡೂರಾವ್ ಅವರಿಗೆ ಹೇಳಿದ್ದೇನೆ. ನಾನು ಈ ವಿಚಾರದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಸಚಿವ ಸಾ.ರಾ. ಮಹೇಶ್ ಅವರೊಂದಿಗೂ ಮಾತನಾಡಿಲ್ಲ. ದಿನೇಶ್ ಗುಂಡೂರಾವ್ ಅವರೇ ಎಲ್ಲರೊಂದಿಗೂ ಚರ್ಚೆ ನಡೆಸುತ್ತಾರೆ ಎಂದಿದ್ದರು. ಇದನ್ನು ಓದಿ: ಪಾಲಿಕೆ ಮೇಯರ್ ಗಿರಿಗಾಗಿ ರಾಷ್ಟ್ರಮಟ್ಟದಲ್ಲಿ ನನ್ನ ಮರ್ಯಾದೆ ತೆಗಿಬೇಡಿ: ಎಚ್‍ಡಿಡಿ ಎಚ್ಚರಿಕೆ

ಪಾಲಿಕೆ ಸದಸ್ಯರು ಈ ಹಿಂದೆ ನಾನು ಭೇಟಿ ನೀಡಿದ ಸಂದರ್ಭದಲ್ಲಿ ಮೇಯರ್ ಸ್ಥಾನ ನಮ್ಮ ಪಕ್ಷಕ್ಕೆ ಬೇಕು ಎಂದು ಹೇಳಿದ್ದಾರೆ. ಅದರಂತೆ ನಾನು ದಿನೇಶ್ ಗುಂಡೂರಾವ್ ಅವರಿಗೆ ಮಾಹಿತಿ ನೀಡಿದ್ದೇನೆ. ಆದರೆ ಜೆಡಿಎಸ್ ಪಾಲಿಕೆ ಸದಸ್ಯರು ರೆಸಾರ್ಟ್ ಗೆ ಹೋಗಿರುವ ಬಗ್ಗೆ ಮಾಹಿತಿ ಇಲ್ಲ. ಅವರ ಪಕ್ಷದ ಸದಸ್ಯರನ್ನು ರಕ್ಷಣೆ ಮಾಡಿಕೊಳ್ಳುವುದಕ್ಕೆ ಅವರು ಹೋಗಿರಬೇಕು ಅಷ್ಟೇ ಎಂದರು. ಇದನ್ನು ಓದಿ: ಮೈಸೂರಿನಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿ – ಸುಳಿವು ಬಿಟ್ಟುಕೊಟ್ಟ ಸಚಿವ ಸಾರಾ ಮಹೇಶ್

ಮಾಜಿ ಸಿಎಂ ಅಹಿಂದ:
ನಾನು ರಾಜಕೀಯ ಜೀವನದಲ್ಲಿ ಇರುವರೆಗೂ ಅಹಿಂದ ವರ್ಗದ ಹಿತರಕ್ಷಣೆಗೆ ಬದ್ಧನಿದ್ದೇನೆ. ಅಹಿಂದ ಒಂದು ಸಂಘಟನೆಯಷ್ಟೇ ಅಲ್ಲ, ಅದೊಂದು ಚಳವಳಿ. ಈ ವರ್ಗದ ಜನರ ಬೇಡಿಕೆಗಳು ಪರಿಪೂರ್ಣ ಈಡೇರುವವರೆಗೂ ಚಳವಳಿ ನಿರಂತರವಾಗಿರುತ್ತದೆ. ಅದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಟ್ವೀಟ್ ಮಾಡಿದ್ದಾರೆ.

ಬಿಜೆಪಿಗೆ ಟಾಂಗ್:
ಕರ್ನಾಟಕದ ಕರಾವಳಿಯನ್ನು ಬಿಜೆಪಿ ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದೆ. ಇದರಿಂದಾಗಿಯೇ ಬಿಜೆಪಿ ರಾಷ್ಟ್ರೀಯ ನಾಯಕರು ಆಗಾಗ ಕರಾವಳಿಗೆ ಭೇಟಿ ನೀಡುತ್ತಾರೆ. ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿಯೇ ಬಂದು ಮನೆ ಮಾಡಿದರೂ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ರಾಜ್ಯದ ಜನ ಬೆಂಬಲ ನೀಡುವುದಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.

ಬಿಜೆಪಿಗೆ ಅಯೋಧ್ಯೆ ವಿವಾದ ಜೀವಂತವಾಗಿರುವುದು ಬೇಕಿದೆಯೇ ವಿನಃ, ರಾಮಮಂದಿರ ನಿರ್ಮಾಣವಲ್ಲ. ಚುನಾವಣೆ ಸಮೀಪಿಸುತ್ತಿರುವ ಈ ವೇಳೆಯಲ್ಲಿ ರಾಮ ಜನ್ಮಭೂಮಿ ವಿವಾದ ಮತ್ತೆ ಜೀವ ಪಡೆದಿದೆ. ಜನರನ್ನು ಭಾವನಾತ್ಮಕವಾಗಿ ತಮ್ಮತ್ತ ಹಿಡಿದಿಡುವಲ್ಲಿ ಇದು ಬಿಜೆಪಿ ಪ್ರಯತ್ನದ ಒಂದು ಭಾಗವಷ್ಟೇ. ಇದು ಜನರಿಗೂ ಗೊತ್ತಿದೆ ಎಂದು ದೂರಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

Leave a Reply

Your email address will not be published. Required fields are marked *