-ನಾಲಿಗೆ ಮೇಲೆ ಹಿಡಿತ ಇರಬೇಕು ಏನೇನೋ ಮಾತಾಡೋದು ಪ್ರಚಾರವಲ್ಲ
ಬಳ್ಳಾರಿ: ಕರ್ನಾಟಕದಲ್ಲಿ ಉಪ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಸಿಎಂ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ಆಪ್ತ ಶಿಷ್ಯನ ಮೇಲೆ ಮುನಿಸಿಕೊಂಡಿದ್ದಾರಂತೆ. ಇಂದು ನಡೆದ ಪಕ್ಷದ ಮುಖಂಡ ರ ಸಭೆಯಲ್ಲಿ ಹೆಸರು ಪ್ರಸ್ತಾಪಿಸದೇ ನಮ್ಮ ನಾಲಿಗೆ ಮೇಲೆ ಹಿಡಿತ ಇರಬೇಕು. ಚುನಾವಣೆ ಪ್ರಚಾರದಲ್ಲಿ ಏನೇನೋ ಮಾತನಾಡಬಾರದು ಎಂದು ಹೇಳುವ ಶಾಸಕ ವಿ.ಸೋಮಣ್ಣರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇಂದು ಬಳ್ಳಾರಿಯ ಖಾಸಗಿ ಹೋಟೆಲ್‍ನಲ್ಲಿ ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಮುಖಂಡರ ಸಭೆ ನಡೆದಿತ್ತು. ಈ ವೇಳೆ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರ ಉದ್ದೇಶಿಸಿ ಮಾತನಾಡುತ್ತಿರುವಾಗ, ಯಾವುದೇ ಸಂದರ್ಭದಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಹೇಳಿಕೆ ನೀಡಬಾರದು. ಬಾಯಿಗೆ ಬಂದಂತೆ ಭರವಸೆ ಕೊಡುವುದಕ್ಕೆ ಚುನಾವಣೆ ಪ್ರಚಾರ ಅಂತಾ ಹೇಳಲ್ಲ. ಜನರು ನಿಮ್ಮ ಮಾತನ್ನು ಗಮನಿಸುತ್ತಾ ಇರುತ್ತಾರೆ. ಮುಂದಿನ ದಿನಗಳಲ್ಲಿ ಅದು ಬೇರೆ ಬೇರೆ ಬೆಳವಣಿಗೆಗೆ ಕಾರಣವಾಗುತ್ತೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ಸಭೆಯಲ್ಲಿ ಯಡಿಯೂರಪ್ಪನವರು ಪರೋಕ್ಷವಾಗಿ ಅಸಮಾಧಾನ ಹೊರಹಾಕುತ್ತಿದ್ದಂತೆ ವಿ.ಸೋಮಣ್ಣ ಸಭೆಯಿಂದ ಹೊರ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಯಾಕೆ ಈ ಮುನಿಸು..?
ಈ ಹಿಂದೆ ಬಳ್ಳಾರಿ ಲೋಕಸಭಾ ಉಪಚುನಾವಣೆ ಪ್ರಚಾರದಲ್ಲಿ ಮಾತನಾಡಿದ್ದ ವಿ.ಸೋಮಣ್ಣ, ಪ್ರಧಾನಿ ನರೇಂದ್ರ ಮೋದಿ ಅವರ ಲಕ್ಷಣಗಳನ್ನು ರಾಜ್ಯದಲ್ಲಿ ಶ್ರೀರಾಮುಲು ಹೊಂದಿದ್ದಾರೆ. ಇತ್ತ ಕೇದಾರನಾಥ ಸ್ವಾಮೀಜಿ ಕೂಡ ಶ್ರೀರಾಮುಲು ಅವರಿಗೆ ಮುಖ್ಯಮಂತ್ರಿ ಆಗುವ ಲಕ್ಷಣಗಳಿವೆ. ಅವರಿಗೆ ಆಶೀರ್ವಾದ ಮಾಡಿ, ಬೆಳವಣಿಗೆಗೆ ಶ್ರಮಿಸಿ ಅಂತಾ ಸಲಹೆ ನೀಡಿದ್ದಾರೆ. ಹೀಗಾಗಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಶ್ರೀರಾಮುಲು ಖಂಡಿತ ಉಪಮುಖ್ಯಮಂತ್ರಿ ಅಲ್ಲ, ಮುಖ್ಯಮಂತ್ರಿಯೇ ಆಗುತ್ತಾರೆ ಎಂದು ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv