ಬಳ್ಳಾರಿ: ಲೋಕಸಭಾ ಚುನಾವಣೆಯಲ್ಲಿ ಮಗ ಗೆದ್ದು ಬಿಡುತ್ತಾನೆ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳುತ್ತಿದ್ದರು. ಆದರೆ ಈಗ ಅವರಿಗೆ ಸೋಲುವ ಭೀತಿ ಎದುರಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಟಾಂಗ್ ನೀಡಿದ್ದಾರೆ.
ಹೊಸಪೇಟೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೈತ್ರಿಯಲ್ಲಿ ಭಿನ್ನಾಭಿಪ್ರಾಯವಿದೆ ಅಂತಾ ಬಿಜೆಪಿಯವರು ಆರೋಪಿಸಿದ್ದರು. ಆದರೆ ನಾವು ಒಂದಾಗಿದ್ದೇವೆ ಎನ್ನುವು ಸ್ಪಷ್ಟ ಸಂದೇಶವನ್ನು ಈಗ ನೀಡುತ್ತಿದ್ದೇವೆ. ಶಿವಮೊಗ್ಗ ಉಪಚುನಾವಣೆಯ ಅಭ್ಯರ್ಥಿಯನ್ನು ಗಮನದಲ್ಲಿಟ್ಟುಕೊಂಡು ಜೆಡಿಎಸ್‍ಗೆ ಕ್ಷೇತ್ರ ಬಿಟ್ಟುಕೊಂಡಿದ್ದೇವೆ ಎಂದರು.
ಕೋಮುವಾದಿ ಪಕ್ಷವನ್ನು ದೂರ ಇಡಲು ಈ ತಂತ್ರ ಹೂಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಏನು? ರಾಜ್ಯಕ್ಕೆ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು, ದೇಶದ ಹಿತದೃಷ್ಟಿಯಿಂದ ಸಾರ್ವತ್ರಿಕ ಚುನಾವಣೆಯಲ್ಲಿ ಕೆಲವೆಡೆ ಹೊಂದಾಣಿಕೆ ಅನಿವಾರ್ಯವಾಗಿದೆ ಎಂದು ಹೇಳಿದರು.
ಸಚಿವರ ವಾಕ್ಸಮರಕ್ಕೆ ಪ್ರತಿಕ್ರಿಯೆ:
ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅವರ ಮಧ್ಯ ಒಂದಿಷ್ಟು ಭಿನ್ನಾಭಿಪ್ರಾಯ ಇದೆ. ಆದರೆ ಅದು ಪಕ್ಷಕ್ಕೆ ಸಂಬಂಧಿಸಿದ್ದಲ್ಲ. ಬಳ್ಳಾರಿ ಉಪಚುನಾವಣೆಯ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ರಮೇಶ ಜಾರಕಿಹೊಳಿ ಅವರಿಗೆ ಅತೃಪ್ತಿ ಉಂಟಾಗಿರಬಹುದು. ಆದರೆ ಹೈಕಮಾಂಡ್ ಉಗ್ರಪ್ಪರ ಅವರನ್ನು ಆಯ್ಕೆ ಮಾಡಿದೆ ಎಂದ ಅವರು, ಉಪಚುನಾವಣೆಯಲ್ಲಿ ಉತ್ತಮ ಫಲಿತಾಂಶಕ್ಕೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದರು.
ಪಕ್ಷ ಅಂದ ಮೇಲೆ ಅಭಿಪ್ರಾಯ-ಭಿನ್ನಾಭಿಪ್ರಾಯ ಇದ್ದೇ ಇರುತ್ತವೆ. ಅದನ್ನು ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ, ಬಗೆಹರಿಸಿಕೊಳ್ಳುತ್ತೇವೆ. ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತಾದ ಸಚಿವ ಡಿ.ಕೆ.ಶಿವಕುಮಾರ್ ಹೇಳಿಕೆ ಅವರ ವೈಯಕ್ತಿಕವಾಗಿದೆ. ಈ ಐದು ಉಪಚುನಾವಣೆಯಲ್ಲಿ ನಮ್ಮ ಮೈತ್ರಿ ಅಭ್ಯರ್ಥಿಗಳು ಜಯಗಳಿಸುತ್ತೇವೆ ಎನ್ನುವ ವಿಶ್ವಾಸ ನಮಗಿದೆ ಎಂದು ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv