ದೇಶದ ವಿವಿಧ ರಾಜ್ಯಗಳಲ್ಲಿ ದಸರಾ ಹೇಗೆ ಆಚರಿಸುತ್ತಾರೆ? – ಇಲ್ಲಿದೆ ಮಾಹಿತಿ

Public TV
6 Min Read
navratri dress 2 1

ಸರಾ ಕರ್ನಾಟಕ ರಾಜ್ಯದ ನಾಡ ಹಬ್ಬ. ಹಿಂದೂ ಧರ್ಮದವರಿಗೆ ಇದೊಂದು ಪ್ರಮುಖ ಹಬ್ಬ. ವಿಜಯನಗರದ ಅರಸರ ಕಾಲದಿಂದಲೇ ‘ನವರಾತ್ರಿ’ ಅಥವಾ ‘ದಸರಾ ಹಬ್ಬ’ ಚಾಲ್ತಿಗೆ ಬಂದಿದೆ ಎಂದು ಇತಿಹಾಸ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಬ್ಬವನ್ನು ಭಾರತದ ಉತ್ತರ ಭಾಗಗಳಲ್ಲಿ ‘ದಶೇರ’ವಾಗಿಯೂ, ‘ದುರ್ಗಾ ಪೂಜೆ’ಯಾಗಿಯೂ ಆಚರಿಸುತ್ತಾರೆ.

ಮೈಸೂರು: ಆಯುಧ ಪೂಜೆ, ವಿಜಯದಶಮಿ ಕರ್ನಾಟಕ ರಾಜ್ಯದಲ್ಲಿ ಅದರಲ್ಲೂ ಮೈಸೂರು ಪ್ರಾಂತ್ಯದಲ್ಲಿ ವಿಶೇಷವಾಗಿ ಆಚರಿಸಲಾಗುತ್ತದೆ. ಇತಿಹಾಸ ಪ್ರಸಿದ್ಧ ಮೈಸೂರಿನ ಅರಮನೆ ದೀಪಾಲಂಕಾರದಿಂದ ಕಂಗೊಳಿಸುತ್ತದೆ. ಮೈಸೂರನ್ನು ಆಳಿದ ರಾಜಮನೆತನ ಒಡೆಯರ ಕುಲ ದೇವತೆಯಾದ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೇ ವಿಜಯದಶಮಿಯಂದು ಆನೆಯ ಮೇಲೆ ಅಂಬಾರಿಯಲ್ಲಿ ಚಾಮುಂಡೇಶ್ವರಿಯನ್ನು ಕುಳ್ಳಿರಿಸಿ ಮೆರವಣಿಗೆಯ ಮೂಲಕ ಅರಮನೆಯಿಂದ ಬನ್ನಿ ಮಂಟಪಕ್ಕೆ ಒಯ್ಯುವುದು ಮೈಸೂರಿನ ವಿಶೇಷತೆ.

Mysuru Dasara Jambu Savari 2017 11

ಮಂಗಳೂರು: ಮಂಗಳೂರಲ್ಲಿ ನವರಾತ್ರಿ ಎಂದು ಕರೆಯುವ ಈ ಹಬ್ಬದಲ್ಲಿ ಹುಲಿಯ ನೃತ್ಯ, ಕರಡಿಯ ನೃತ್ಯ ಹಾಗೂ ಸಿಂಹ ನೃತ್ಯ ಮಾಡುತ್ತಾರೆ. ಹತ್ತು ದಿನದ ಆಚರಣೆಯಲ್ಲಿ ಇಡೀ ನಗರವನ್ನು ಬೆಳಕಿನಿಂದ ಅಲಂಕರಿಸಲಾಗುತ್ತದೆ. ಹುಲಿ ವೇಷ, ದಸರಾದಲ್ಲಿ ಮಾಡುವ ಜನಪದ ನೃತ್ಯವಾಗಿದ್ದು, ಯುವಕರು ಐದರಿಂದ ಹತ್ತು ಪಡೆಗಳನ್ನು ಮಾಡಿಕೊಳ್ಳುತ್ತಾರೆ. ಅವರು ಹುಲಿಗಳಂತೆ ವೇಷ ಹಾಕಿಕೊಂಡು ಇಬ್ಬರಿಂದ ಮೂರು ಜನ ಡೋಲು ವಾದ್ಯದವರನ್ನು ಬಳಸಿ ಊರೆಲ್ಲಾ ತಿರುಗಾಡುತ್ತಾರೆ. ಶಾರದಾ ದೇವಿಗೆ ಹುಲಿ ವಾಹನ ಆದ್ದರಿಂದ ಅವಳಿಗೆ ಗೌರವ ಸೂಚಿಸಲು ಹುಲಿ ವೇಷ ಧರಿಸುತ್ತಾರೆ.

ಮಂಗಳೂರಿನಲ್ಲಿ ಜನರು ತಮ್ಮ ಮನೆಗಳನ್ನು, ಅಂಗಡಿಗಳನ್ನು, ಉಪಹಾರ ಕೇಂದ್ರಗಳನ್ನು ಅಲಂಕರಿಸುತ್ತಾರೆ. ನವದುರ್ಗೆಯರ, ಮಹಾಗಣಪತಿಯ ಹಾಗೂ ಶಾರದೆಯ ಮೂರ್ತಿಗಳನ್ನು ಮೆರವಣಿಗೆ ಮಾಡಿ ಹೂಗಳಿಂದ ಅಲಂಕರಿಸಿದ ಛತ್ರಿ, ವರ್ಣ ಚಿತ್ರ, ಜಾನಪದ ನೃತ್ಯ, ಯಕ್ಷಗಾನ ಪಾತ್ರ, ಡೊಳ್ಳು ಕುಣಿತ, ಹುಲಿವೇಶ ಹಾಗು ಇನ್ನಿತರ ಸಾಂಪ್ರದಾಯಿಕ ಕಲಾ ರೂಪ ಈ ಹಬ್ಬಕ್ಕೆ ಮೆರಗು ನೀಡುತ್ತದೆ.

mng dasara

ಮಡಿಕೇರಿ: ಮಡಿಕೇರಿಯಲ್ಲಿ ಹತ್ತು ದಿನಗಳ ನವರಾತ್ರಿ ಹಬ್ಬದ ಆಚರಣೆ ನಡೆಯುತ್ತದೆ. ಇಲ್ಲಿ ನಡೆಯುವ ದಸರಾಗೆ ನೂರು ವರ್ಷಗಳ ಇತಿಹಾಸವಿದ್ದು, ಇದರಲ್ಲಿ ಅಸುರರನ್ನು ಕೊಲ್ಲುತ್ತಿರುವ ಸುರರನ್ನು ಚಿತ್ರಿಸಿರುವ 10 ಮಂಟಪಗಳಿರುತ್ತವೆ. ಒಂದು ಮಂಟಪದಲ್ಲಿರುವ ಮೂರ್ತಿಗಳು ಸುಮಾರು 8 ರಿಂದ 15 ಅಡಿ ಎತ್ತರವಿದ್ದು, ಒಂದು ಮಂಟಪದ ವೆಚ್ಚ 3 ರಿಂದ 5 ಲಕ್ಷಗಳಾಗುತ್ತವೆ.

mdk dasara 2

ದಂತ ಕಥೆಗಳ ಪ್ರಕಾರ, ಬಹಳ ವರ್ಷಗಳ ಹಿಂದೆ ಮಡಿಕೇರಿಯ ಜನ ರೋಗ ಋಜಿನಗಳಿಂದ ನರಳುತ್ತಿದ್ದಾಗ ಮಡಿಕೇರಿಯ ರಾಜನು ಆಗಿನಿಂದ ಮಾರಿಯಮ್ಮ ಹಬ್ಬವನ್ನು ಆಚರಿಸಲು ಆರಂಭಿಸಿದನು. ಆಗಿನಿಂದ ಮಹಾಲಯ ಅಮಾವಾಸ್ಯೆಯ ನಂತರ ದಸರಾ ದಿನದಿಂದ ಮಾರಿಯಮ್ಮ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಬಾರಿ ಜಿಲ್ಲೆಯಲ್ಲಿ ವ್ಯಾಪಕ ನೆರೆ ಬಂದ ಹಿನ್ನೆಲೆಯಲ್ಲಿ ಸರಳ ದಸರಾ ಆಚರಿಸಲು ಜನ ತೀರ್ಮಾನಿಸಿದ್ದಾರೆ.

mdk dasara

ಕೇರಳ: ಕೇರಳದಲ್ಲಿ ನವರಾತ್ರಿಯ ಕೊನೆಯ ಮೂರು ದಿನಗಳ ಕಾಲ ಮಾತ್ರ ದೇವಿಯ ಆರಾಧನೆ ನಡೆಯುತ್ತದೆ. ಅಷ್ಟಮಿ, ನವಮಿ ಮತ್ತು ದಶಮಿಯ ದಿನ ಕೇರಳದಲ್ಲಿ ತಾಯಿ ಸರಸ್ವತಿಯ ಪೂಜೆ ನಡೆಸಲಾಗುತ್ತದೆ. ಕಲೆಯನ್ನು ಸರಸ್ವತಿ ಎಂದೇ ಪರಿಗಣಿಸುವ ಕೇರಳದ ಜನರು ಮನೆಯಲ್ಲಿರುವ ಸಂಗೀತ ಸಲಕರಣೆಗಳು, ಪುಸ್ತಕಗಳು ಎಲ್ಲವನ್ನೂ ಸರಸ್ವತಿಯ ಮೂರ್ತಿಯ ಮುಂದೆ ಇಟ್ಟು ಪೂಜಿಸುತ್ತಾರೆ. ನವರಾತ್ರಿಯ ಕೊನೆಯ ದಿನವಾದ ವಿಜಯ ದಶಮಿಯ ದಿನ ಪೂಜೆಗಿಟ್ಟ ಪುಸ್ತಕಗಳನ್ನು ತೆಗೆದು ಓದುತ್ತಾರೆ. ವಿದ್ಯಾದಶಮಿ ಎಂದು ಕರೆಯಲ್ಪಡುವ ಅಂದು ಅಧ್ಯಯನ ಮಾಡುವುದರಿಂದ ಸರಸ್ವತಿ ಒಲಿಯುತ್ತಾಳೆ ಎಂಬ ನಂಬಿಕೆ ಕೇರಳದಲ್ಲಿದೆ.

Dussehra celebrations in Kerala

ಆಂಧ್ರಪ್ರದೇಶ: ಆಂಧ್ರಪ್ರದೇಶದಲ್ಲಿ ನವರಾತ್ರಿಗೆ `ಬತುಕಾಮ್ಮ ಪಾಂಡುಗ’ ಎಂದು ಕರೆಯುತ್ತಾರೆ. ತೆಲಂಗಾಣ ಪ್ರದೇಶದಲ್ಲಿ ವಿಶೇಷವಾಗಿ ಈ ಬತುಕಾಮ್ಮ ಪಾಂಡುಗವನ್ನು ಆಚರಿಸುತ್ತಾರೆ. ಬತುಕಾಮ್ಮ ಪಾಂಡುಗ ಎಂದರೆ ತಾಯಿ ದುರ್ಗೆಗೆ ನೀಡುವ ಆಹ್ವಾನ. ನವರಾತ್ರಿಯ ಸಂದರ್ಭದಲ್ಲಿ ದೇವಿಯ ಆರಾಧನೆಗಾಗಿ ಮನೆ ಮನೆಯಲ್ಲಿ ಮಹಿಳೆಯರು ಬತುಕಾಮ್ಮನನ್ನು ಹೂವಿನಿಂದ ತಯಾರಿಸುತ್ತಾರೆ. ಕುಂಭದ ಆಕೃತಿಯಲ್ಲಿ ಬತುಕಾಮ್ಮನನ್ನು ತಯಾರಿಸಿ ಪೂಜಿಸುತ್ತಾರೆ. ನವರಾತ್ರಿಯ 9 ದಿನಗಳು ಸಂಜೆ ದೇವಿಗೆ ಪೂಜೆ ನಡೆಸಿ ಭಕ್ತಿ ಗೀತೆಗಳನ್ನು ಹಾಡಿ, ಬತುಕಾಮ್ಮನ ಸುತ್ತ ನೃತ್ಯ ಮಾಡಿ ಸಂಭ್ರಮಿಸುತ್ತಾರೆ. ನಂತರ ವಿದ್ಯಾದಶಮಿಯ ದಿನ ಹೂವಿನಿಂದ ತಯಾರು ಮಾಡಲಾಗಿದ್ದ ಬತುಕಾಮ್ಮನನ್ನು ನೀರಿನಲ್ಲಿ ತೇಲಿಬಿಡುತ್ತಾರೆ.

andra dasara 2

ಪಂಜಾಬ್: ಪಂಜಾಬ್‍ನಲ್ಲಿ ನವರಾತ್ರಿಯ ಮೊದಲ ಏಳು ದಿನಗಳ ಕಾಲ ಹೆಚ್ಚಿನ ಪಂಜಾಬಿ ಜನರು ಹಗಲಿನಲ್ಲಿ ಉಪವಾಸ ಮಾಡಿ ದೇವಿಯನ್ನು ಪೂಜಿಸುತ್ತಾರೆ. ಪ್ರತಿ ರಾತ್ರಿ ದೇವಿಯ ಭಜನೆ ಮಾಡಿ ಪೂಜೆ ನೆರವೇರಿಸುತ್ತಾರೆ. ಅಷ್ಟಮಿಯ ದಿನ ಉಪವಾಸ ವ್ರತವನ್ನು ಕೈಬಿಟ್ಟು ವಿಜಯ ದಶಮಿಯ ತನಕ ನೆರೆಹೊರೆಯ ಒಂಬತ್ತು ಯುವತಿಯರನ್ನು ಆಮಂತ್ರಿಸಿ ಅವರಿಗೆ ಹಣ, ಸಿಹಿ ತಿಂಡಿಗಳನ್ನು ನೀಡಿ ಉಡುಗೊರೆಗಳನ್ನು ಕೊಟ್ಟು ಗೌರವಿಸಲಾಗುತ್ತದೆ. ಮನೆಗೆ ಆಹ್ವಾನಿಸುವ ಹೆಣ್ಣುಮಕ್ಕಳನ್ನು ದುರ್ಗೆಯ ಅವತಾರಗಳು ಎಂದು ಪರಿಗಣಿಸಲಾಗುತ್ತದೆ.

PANJAB

ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ದಸರಾದಂದು ದುರ್ಗೆಯ ಪೂಜೆ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ಆ ಸಮಯದಲ್ಲಿ ಕೋಲ್ಕತ್ತಾದಲ್ಲಿ ವಿಪರೀತವಾದ ಜನಸಂದಣಿ ಸೇರುತ್ತದೆ. ಅಲ್ಲದೇ ಸಾರ್ವಜನಿಕವಾಗಿ ದೇವಿ ಪೂಜೆಯನ್ನು ನಡೆಸುವ ಪರಿಪಾಠವೂ ಇದೆ. ಸಿಂಹದ ಮೇಲೆ ಕುಳಿತು ವಿವಿಧ ಬಗೆಯ ಆಯುಧಗಳನ್ನು ಹಿಡಿದಿರುವ ದೇವಿಯ ದೊಡ್ಡ ಮೂರ್ತಿಯನ್ನು ಇರಿಸಿ ಬೆಳಗ್ಗೆ ಸಂಜೆಗಳಲ್ಲಿ ಪೂಜೆ ಭಜನೆಗಳನ್ನು ಅರ್ಪಿಸುತ್ತಾರೆ. ಗಣೇಶ ಚತುರ್ಥಿಯಂತೆ ಸಾಮಾನ್ಯವಾಗಿ ಪಶ್ಚಿಮ ಬಂಗಾಳದಾದ್ಯಂತ ದುರ್ಗೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿ ನಂತರ ನೀರಿನಲ್ಲಿ ವಿಸರ್ಜಿಸಲಾಗುತ್ತದೆ.

kolkata dasara 2

ಕೋಲ್ಕತ್ತಾದಲ್ಲಿ 10 ದಿನಗಳ ಕಾಲ ಬಣ್ಣ, ಭಾರೀ ಶಬ್ಧ, ದೀಪಾಲಂಕಾರ ಹಾಗೂ ವಿವಿಧ ರೀತಿಯ ಆಹಾರಗಳನ್ನು ತಯಾರಿಸುತ್ತಾರೆ. ಅಲ್ಲದೇ ಇಲ್ಲಿನ ಜನರು ಹಬ್ಬದಂದು ತೆಂಗಿನ ಸಿಪ್ಪೆಯೊಳಗೆ ಬೆಂಕಿ ಹಾಕಿ ಅದನ್ನು ಕೈಯಲ್ಲಿ ಹಿಡಿದು ನೃತ್ಯ ಮಾಡುತ್ತಾರೆ. ದಸರಾದಂದು ಈ ರಾಜ್ಯದ ಮುತ್ತೈದೆಯರು ದೇವರ ಮೇಲೆ ಕುಂಕುಮ ಹಾಕುತ್ತಾರೆ. ಆ ದಿನ ದೇವಿ ತನ್ನ ಪತಿಯ ಮನೆಗೆ ಹಿಂದಿರುತ್ತಿದ್ದಾಳೆ ಎಂದು ಅಲ್ಲಿನ ಜನರು ನಂಬುತ್ತಾರೆ. ದೇವಿಗೆ ಕುಂಕುಮ ಹಾಕಿದ್ದ ನಂತರ ಮುತ್ತೈದೆಯರು ಒಬ್ಬರಿಗೊಬ್ಬರು ತಮ್ಮ ಮೇಲೆ ಕುಂಕುಮ ಎರಚಿಕೊಳ್ಳುತ್ತಾರೆ. ತಮ್ಮ ಪತಿಯ ಆಯಸ್ಸು ವೃದ್ಧಿಗಾಗಿ ಈ ರೀತಿ ಆಚರಣೆ ಮಾಡುತ್ತಾರೆ.

kolkata dasara

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲೂ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ದೆಹಲಿಯ ರಾಮ್‍ಲೀಲಾ ಮೈದಾನದಲ್ಲಿ ರಾಮಾಯಣ ನಾಟಕವನ್ನು ಮಾಡುತ್ತಾರೆ. ಸಾಂಸ್ಕೃತಿಕ ಉಡುಗೆ ತೊಟ್ಟು ರಾಮಾಯಣದ ನಾಟಕವನ್ನು ಮಾಡುತ್ತಾರೆ. ಅಲ್ಲದೇ ರಾವಣ, ಕುಂಭಕರ್ಣ, ಮೇಘನಾದ ದೊಡ್ಡ ಪ್ರತಿಕೃತಿಯನ್ನು ರಾಮ ಹಾಗೂ ಲಕ್ಷ್ಮಣ ವೇಷಧಾರಿ ತಮ್ಮ ಬಾಣಕ್ಕೆ ಬೆಂಕಿಗೆ ಹಚ್ಚಿ ಪ್ರತಿಕೃತಿಯನ್ನು ಸುಟ್ಟು ಹಾಕುತ್ತಾರೆ.

delhi dasara

ಗುಜರಾತ್: ಗುಜರಾತ್ ನಲ್ಲಿ ನವರಾತ್ರಿಯಂತೂ ಅತ್ಯಂತ ಅದ್ಧೂರಿಯಿಂದ ನಡೆಯುತ್ತದೆ. ಈ ಹಬ್ಬದಂದು ಮಹಿಳೆಯರು ಹಾಗೂ ಪುರುಷರು ಸೇರಿ ಗರ್ಭಾ ನೃತ್ಯ ಮಾಡುತ್ತಾರೆ. ಈ ಹಬ್ಬದಂದು ಗುಜರಾತಿನ ತುಂಬ ದಾಂಡಿಯಾ ಕೋಲು ಮತ್ತು ಡೋಲಿನ ಶಬ್ಧವೇ ಕೇಳಿಸುತ್ತದೆ. ಸಂಪ್ರದಾಯಸ್ಥರು 9 ದಿನಗಳ ಕಾಲವೂ ಉಪವಾಸ ಮಾಡಿ ಸಂಜೆಯ ವೇಳೆ ದುರ್ಗೆಯ ಪೂಜೆ ಮಾಡಿ ನಂತರ ಊಟ ಮಾಡುತ್ತಾರೆ. ಸಂಜೆ ಹೊತ್ತಿನಲ್ಲಿ ದೇವಿಗೆ ಆರತಿ ಬೆಳಗಿ ದೇವಿಯ ಮುಂದೆ ಗರ್ಭಾ ಅಥವಾ ದಾಂಡಿಯಾ ಎಂದು ಕರೆಯಲ್ಪಡುವ ವಿಶಿಷ್ಟ ನೃತ್ಯ ಮಾಡಿ ಸಂಭ್ರಮಿಸುತ್ತಾರೆ.

gujrat dasara

ಮಹಾರಾಷ್ಟ್ರ: ಮಹಾರಾಷ್ಟ್ರದಲ್ಲಿ ನವರಾತ್ರಿಯನ್ನು ಹಬ್ಬವನ್ನು ವಿಜೃಂಭಣೆಯಿಂದ ಅತ್ಯಂತ ವೈಭವವಾಗಿ ಆಚರಿಸಲಾಗುತ್ತದೆ. ಇಲ್ಲಿ ಮಣ್ಣಿನ ಪಾತ್ರೆಯಲ್ಲಿ ಧ್ಯಾನಗಳ ಬೀಜವನ್ನು ತುಂಬಿ ಅದರ ಮೇಲೆ ಜೋಳದ ತೆನೆಗಳನ್ನು ಇಡಲಾಗುತ್ತದೆ, ನಂತರ ಆ ಮಡಿಕೆಯನ್ನು ಅದರೊಳಗಿನ ಬೀಜಗಳು ಮೊಳಕೆಯೊಡೆದು ಬರುವವರೆಗೂ ಸತತವಾಗಿ 9 ದಿನಗಳ ಕಾಲ ಭಕ್ತಿಯಿಂದ ಪೂಜಿಸುತ್ತಾರೆ. ಅಲ್ಲದೇ ಮಹಾರಾಷ್ಟ್ರದಲ್ಲಿ ನವರಾತ್ರಿ ಹಬ್ಬವನ್ನು ಹೊಸದಾಗಿ ಪ್ರಾರಂಭ ಮಾಡಲು ಇರುವ ಶುಭ ಸಂದರ್ಭವಾಗಿ ಪರಿಗಣಿಸಲಾಗುತ್ತದೆ. ಹೊಸ ಮನೆ ಅಥವಾ ಕಾರನ್ನು ಖರೀದಿಸುವುದು ಹೀಗೆ ಹೊಸ ಆರಂಭವನ್ನು ನವರಾತ್ರಿಯಿಂದಲೇ ಆರಂಭಿಸಬೇಕು ಎನ್ನುವ ನಂಬಿಕೆಯನ್ನು ಮರಾಠಿಗರು ಇಟ್ಟುಕೊಂಡಿದ್ದಾರೆ.

maharastra dasara

ದಸರಾ ಸುದ್ದಿಗಳು:

1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

4. ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

5. ಗೊಂಬೆ ಹಬ್ಬದ ಸಿದ್ಧತೆ ಹೀಗಿರಲಿ

6. ದಸರಾ ಹಬ್ಬಕ್ಕೆ ಸ್ಟೈಲಿಶ್ ಆಗಿ ಕಾಣ್ಬೇಕಾ ಹೀಗಿರಲಿ ನಿಮ್ಮ ಸೀರೆ ಆಯ್ಕೆ

7. ನವರಾತ್ರಿ ಸಂಭ್ರಮ – 9 ದಿನ ಯಾವ ಬಣ್ಣದ ಉಡುಪು ಧರಿಸಿ ಪೂಜಿಸಿದ್ರೆ ಉತ್ತಮ? ಇಲ್ಲಿದೆ ವಿವರ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *