ಶತಕ ಸಿಡಿಸುವುದರ ಜೊತೆ ಭಾರತದ ಪರ ದಾಖಲೆ ನಿರ್ಮಿಸಿದ ಪೃಥ್ವಿ ಶಾ!

Public TV
2 Min Read
Prithvi Shaw 2

ರಾಜ್ ಕೋಟ್: ಟೆಸ್ಟ್ ಕ್ಯಾಪ್ ಧರಿಸಿದ ಮೊದಲ ಪಂದ್ಯದಲ್ಲೇ ಪೃಥ್ವಿ ಶಾ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಮೊದಲ ಟೆಸ್ಟ್ ಪಂದ್ಯದಲ್ಲೇ ವೇಗವಾಗಿ ಶತಕ ಸಿಡಿಸಿದ ಭಾರತದ ಎರಡನೇ, ವಿಶ್ವದ ಮೂರನೇ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಮೊದಲ ಎಸೆತವನ್ನು ಎದುರಿಸುವ ಮೂಲಕ ಪಾದರ್ಪಣೆಯ ಪಂದ್ಯದಲ್ಲೇ ಇನ್ನಿಂಗ್ಸ್ ಮೊದಲ ಎಸೆತವನ್ನು ಎದುರಿಸಿದ ಪ್ರಥಮ ಭಾರತೀಯ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಈ ಮೊದಲು ಜಿಂಬಾಬ್ವೆಯ ಹ್ಯಾಮಿಲ್ಟನ್ ಮಸಕಜ, ಬಾಂಗ್ಲಾದೇಶ ತಮಿಮ್ ಇಕ್ಬಾಲ್, ಪಾಕಿಸ್ತಾನ ಇಮ್ರಾನ್ ಫರ್ಹಾತ್ ತಮ್ಮ ಮೊದಲ ಪಂದ್ಯದಲ್ಲೇ ಇನ್ನಿಂಗ್ಸ್ ನ ಮೊದಲ ಎಸೆತವನ್ನು ಎದುರಿಸಿದ್ದರು.

ರಾಜ್‍ಕೋಟ್‍ನ ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಮೊದಲ ಪಂದ್ಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರ ಕೈಯಿಂದ ಟೆಸ್ಟ್ ಕ್ಯಾಪ್ ಧರಿಸಿದ ಪೃಥ್ವಿ ಶಾ ಟೆಸ್ಟ್ ಕ್ರಿಕೆಟ್‍ನಲ್ಲಿ ಟೀಮ್ ಇಂಡಿಯಾ ಪ್ರತಿನಿಧಿಸಿದ 293ನೇ ಆಟಗಾರನೆಂಬ ಗೌರವಕ್ಕೆ ಪಾತ್ರವಾದರು.

ಪೃಥ್ವಿ ಶಾ 56 ಎಸೆತಗಳಲ್ಲಿ 50 ರನ್ ಗಳಿಸಿ, ಏಕದಿನ ಪಂದ್ಯದಂತೆ 99 ಎಸೆತಗಳಲ್ಲಿ ಶತಕ ಸಿಡಿಸಿದರು. ಈ ಮೂಲಕ ಟೆಸ್ಟ್ ಪಂದ್ಯದಲ್ಲಿ ವೇಗವಾಗಿ ಮೊದಲ ಶತಕ ಸಿಡಿಸಿದ 3ನೇ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ 2013 ರಲ್ಲಿ ಆಸೀಸ್ ಎದುರು 85 ಎಸೆತಗಳಲ್ಲಿ ಶತಕ ಪೂರೈಸಿ ದಾಖಲೆ ಬರೆದಿದ್ದರೆ ವೆಸ್ಟ್ ಇಂಡೀಸ್‍ನ ಡ್ವೇನ್ ಸ್ಮಿತ್ 2004 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 93 ಎಸೆತಗಳಲ್ಲಿ ಶತಕ ಸಿಡಿಸಿದರು. ಪಂದ್ಯದಲ್ಲಿ 154 ಎಸೆತ ಎದುರಿಸಿದ ಪೃಥ್ವಿ ಶಾ 19 ಬೌಂಡರಿಗಳ ನೆರವಿನಿಂದ 134 ರನ್ ಸಿಡಿಸಿ ದೇವೇಂದ್ರ ಬಿಷೂ ಬೌಲಿಂಗ್‍ನಲ್ಲಿ ವಿಕೆಟ್ ಒಪ್ಪಿಸಿದರು. ಈ ವೇಳೆ ಟೀಂ ಇಂಡಿಯಾ 50.2 ಓವರ್ ಗಳಲ್ಲಿ 232 ರನ್ ಗಳಿಸಿತ್ತು.

ಸಚಿನ್ 17 ವರ್ಷ 107 ದಿನಗಳ ವಯಸ್ಸಿನಲ್ಲಿ ಅಂದರೆ 1990 ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ತಮ್ಮ ಮೊದಲ ಶತಕ ಸಿಡಿಸಿದ್ದರೆ, ಪೃಥ್ವಿ ಶಾ 18 ವರ್ಷ 329 ದಿನಗಳ ವಯಸ್ಸಿನಲ್ಲಿ ಶತಕ ಪೂರೈಸಿದ್ದರು. ಈ ಮೂಲಕ ಸಚಿನ್ ಬಳಿಕ ಕಡಿಮೆ ವಯಸ್ಸಿನಲ್ಲಿ ಶತಕ ಗಳಿಸಿದ ಟೀಂ ಇಂಡಿಯಾ ಆಟಗಾರ ಎಂಬ ಹೆಗ್ಗಳಿಕೆ ಪಡೆದರು. ಅಲ್ಲದೇ ಭಾರತದ ಪರ ಟೆಸ್ಟ್ ಪಾದಾರ್ಪಣೆ ಪಂದ್ಯದಲ್ಲಿ ಶತಕ ಸಿಡಿಸಿದ 17ನೇ ಆಟಗಾರ ಎಂಬ ಹೆಗ್ಗಳಿಕೆಯೂ ಪಡೆದರು.

ಇನ್ನಿಂಗ್ಸ್ ಆರಂಭದಲ್ಲಿ ಆರಂಭಿಕ ಕೆಎಲ್ ರಾಹುಲ್ ವಿಕೆಟ್ ಕಳೆದಕೊಂಡ ತಂಡಕ್ಕೆ ಆಸೆಯಾದ ಪೃಥ್ವಿ ಶಾ, ಪೂಜಾರ ಜೋಡಿ 2ನೇ ವಿಕೆಟ್‍ಗೆ 206 ಜೊತೆಯಾಟ ಆಡಿತ್ತು.
ಟೀಂ ಇಂಡಿಯಾ ರನ್:
10.3 ಓವರ್ 50 ರನ್
19.5 ಓವರ್ 100 ರನ್
26.6 ಓವರ್ 150 ರನ್
40.3 ಓವರ್ 200 ರನ್

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Prithvi Shaw

Share This Article
Leave a Comment

Leave a Reply

Your email address will not be published. Required fields are marked *