ಇಂಡಿಯಾ, ಪಾಕ್ ಕದನ- ಚಾಂಪಿಯನ್ಸ್ ಟ್ರೋಫಿ ಸೋಲಿನ ಸೇಡು ತೀರಿಸಿಕೊಳ್ಳುತ್ತಾ ಟೀಂ ಇಂಡಿಯಾ?

Public TV
2 Min Read
indvspak

ದುಬೈ: ಬರೋಬ್ಬರಿ 15 ತಿಂಗಳ ಬಳಿಕ ಮೈದಾನದಲ್ಲಿ ಪರಸ್ಪರ ಎದುರಾಗುತ್ತಿರುವ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕ್ರಿಕೆಟ್ ಪಂದ್ಯದಕ್ಕೆ ವಿಶ್ವ ಕ್ರಿಕೆಟ್‍ನ ಅಭಿಮಾನಿಗಳು ಕಾತುರದಿಂದ ಎದುರು ನೋಡುತ್ತಿದ್ದರೆ. ಇತ್ತ ಟೀಂ ಇಂಡಿಯಾ ಇಂಗ್ಲೆಂಡ್ ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಫೈನಲ್ ನಲ್ಲಿ ಪಾಕ್ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಳ್ಳಲು ಅವಕಾಶ ಲಭಿಸಿದೆ.

ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಕ್ಕೆ ಸುಮಾರು 25 ಸಾವಿರ ಮಂದಿ ಸಾಕ್ಷಿಯಾಗುವ ನಿರೀಕ್ಷೆ ಇದೆ. ಆದರೆ ಪಂದ್ಯದ ಆರಂಭಕ್ಕೂ ಮುನ್ನ ಎರಡು ತಂಡಗಳು ಸಮ ಬಲಾಬಲ ಹೊಂದಿದ್ದು, ಕ್ರಿಕೆಟ್ ಅಭಿಮಾನಿಗಳಿಗೆ ಉತ್ತಮ ಮನರಂಜನೆ ಸಿಗುವುದು ಖಚಿತವಾಗಿದೆ. ಮಂಗಳವಾರ ಟೀಂ ಇಂಡಿಯಾ ಹಾಗೂ ಹಾಂಗ್‍ಕಾಂಗ್ ನಡುವೆ ಪಂದ್ಯದಲ್ಲಿ ಕ್ರಿಕೆಟ್ ಶಿಶು ಉತ್ತಮ ಹೋರಾಟ ನೀಡಿತ್ತು. ಪಂದ್ಯದಲ್ಲಿ ಪ್ರಯಾಸದ ಗೆಲುವು ಪಡೆದ ಟೀಂ ಇಂಡಿಯಾ ಮೇಲಿನ ಒತ್ತಡ ಹೆಚ್ಚಳವಾಗಿದೆ ಎಂದು ಹೇಳಬಹುದು.

ಟೀಂ ಇಂಡಿಯಾ ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ 2ನೇ ಸ್ಥಾನ ಹೊಂದಿದ್ದು, ಪಾಕ್ 5ನೇ ಸ್ಥಾನದಲ್ಲಿದೆ. ಇತ್ತ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ರೋಹಿತ್ ನಾಯಕತ್ವ ವಹಿಸಿದ್ದರು, ಎಲ್ಲಾ ಅಭಿಮಾನಿಗಳ ಚಿತ್ತ ಧೋನಿಯತ್ತ ನೆಟ್ಟಿದೆ. ಆದರೆ ಹಾಂಗ್‍ಕಾಂಗ್ ವಿರುದ್ಧ ಪಂದ್ಯದಲ್ಲಿ ಧೋನಿ ಶೂನ್ಯ ಸುತ್ತುವ ಮೂಲಕ ನಿರಾಸೆ ಮೂಡಿಸಿದ್ದರು. ಇದು ಪಾಕ್ ವಿರುದ್ಧ ಪಂದ್ಯದಲ್ಲಿ ಧೋನಿ ಮೇಲಿನ ನಿರೀಕ್ಷೆಯನ್ನು ಹೆಚ್ಚುವಂತೆ ಮಾಡಿದೆ.

ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಪರ ಧವನ್ ಶತಕ ಸಿಡಿಸಿ ಮಿಂಚಿದ್ದರು, ತಂಡದ ಮಧ್ಯಮ ಕ್ರಮಾಂಕ ಹೆಚ್ಚಿನ ರನ್ ಗಳಿಸಲು ವಿಫಲವಾಗಿತ್ತು. ಇತ್ತ ಗಾಯದ ಸಮಸ್ಯೆಯಿಂದ ಕಮ್‍ಬ್ಯಾಕ್ ಮಾಡಿದ್ದ ವೇಗಿ ಭುವನೇಶ್ವರ್ ಕುಮಾರ್ ದುಬಾರಿಯಾಗಿದ್ದು ತಂಡದ ಒತ್ತಡ ಹೆಚ್ಚಾಗಲು ಕಾರಣವಾಗಿದೆ.

ind 1

ಪಾಕ್ ನಾಯಕತ್ವ ವಹಿಸುವ ಸರ್ಫರಾಜ್ ಖಾನ್ ತಂಡಕ್ಕೆ ಬಲ ನೀಡಿದ್ದು, ಆರಂಭಿಕ ಆಟಗಾರ  ಫಖ್ರ್ ಜಮಾನ್ ಚಾಂಫಿಯನ್ ಟ್ರೋಫಿಯಲ್ಲಿ ಟೀಂ ಇಂಡಿಯಾ ವಿರುದ್ಧ ಶತಕ (114 ರನ್) ಸಿಡಿಸಿ ಮಿಂಚಿದ್ದರು. ಅಲ್ಲದೇ ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಕೊಹ್ಲಿ ನಂತರ ಸ್ಥಾನ ಪಡೆದಿರುವ ಬಾಬರ್ ಅಜಮ್ ಪಾಕ್ ತಂಡದ ಶಕ್ತಿ ತುಂಬಿದ್ದಾರೆ. ಇತ್ತ ಹಸನ್ ಅಲಿ, ಶಾದಾಬ್ ಖಾನ್ ಬೌಲಿಂಗ್‍ನಲ್ಲಿ ಪಾಕ್ ತಂಡದ ಬಲ ಹೆಚ್ಚಿಸಿದ್ದಾರೆ.

ಪಂದ್ಯದ ಕುರಿತು ಈಗಾಗಲೇ ಪ್ರತಿಕ್ರಿಯೆ ನೀಡಿರುವ ಎರಡು ತಂಡದ ನಾಯಕರು ಎಚ್ಚರಿಕೆ ಆಟವಾಡುವ ಆಶ್ವಾಸನೆ ನೀಡಿದ್ದಾರೆ. ಪಾಕ್ ಹಾಗೂ ಟೀಂ ಇಂಡಿಯಾ ಮತ್ತೆ ಟೂರ್ನಿಯ ಸೂಪರ್ 4 ಹಂತದಲ್ಲಿ ಆಡುವುದು ಬಹುತೇಕ ಖಚಿತವಾಗಿದ್ದು, ಒಂದೊಮ್ಮೆ ಎರಡು ತಂಡಗಳು ಫೈನಲ್ ಪ್ರವೇಶಿಸಿದರೆ ಒಂದೇ ಟೂರ್ನಿಯಲ್ಲಿ ಇತ್ತಂಡಗಳು 3 ಬಾರಿ ಮುಖಾಮುಖಿಯಾಗುತ್ತದೆ. ಈ ಮೂಲಕ ಇಂಡೋ ಪಾಕ್ ಕದನ ವೀಕ್ಷಿಸಲು ಕಾತರರಾಗಿದ್ದ ಅಭಿಮಾನಿಗಳಿಗೆ ಹೆಚ್ಚಿನ ಮನರಂಜನೆಯೂ ಸಿಗಲಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

ind

Share This Article
Leave a Comment

Leave a Reply

Your email address will not be published. Required fields are marked *