ಡ್ರೈವರಿಂದ ಸ್ಟಾರ್ ವರೆಗೂ ಎಲ್ಲರನ್ನೂ ಒಂದೇ ರೀತಿಯಾಗಿ ನೋಡ್ತಿದ್ರು: ಹರಿಕೃಷ್ಣ ಬಗ್ಗೆ ರವಿಶಂಕರ್ ಮಾತು

Public TV
3 Min Read
HARI RAVI

ಬೆಂಗಳೂರು: ಇಂದು ಕಾರು ಅಪಘಾತದಲ್ಲಿ ಮೃತಪಟ್ಟ ತೆಲುಗಿನ ಖ್ಯಾತ ನಟ ನಂದಮೂರಿ ಹರಿಕೃಷ್ಣ ಅವರ ಕುಟುಂಬವೇ ನನಗೆ ಪರಿಚಯವಿದೆ. ಹರಿಕೃಷ್ಣ ಅವರು ಮಿ. ಪರ್ಫೆಕ್ಟ್ ಅಂತಾನೇ ಹೇಳಬಹುದು. ಯಾಕಂದ್ರೆ ಅಂತ ಒಂದು ವ್ಯಕ್ತಿತ್ವ ಅವರದ್ದಾಗಿದ್ದು, ಎಲ್ಲರನ್ನೂ ಒಂದೇ ರೀತಿಯಾಗಿ ಕಾಣುತ್ತಿದ್ದರು ಅಂತ ನಟ ರವಿಶಂಕರ್ ಹೇಳಿದ್ದಾರೆ.

ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸುಮಾರು 30-25 ವರ್ಷಗಳಿಂದ ಅವರು ಗೊತ್ತು. ಅವರ ಮಗ ಎನ್ ಟಿಆರ್ ಜೊತೆನೂ ಕೆಲಸ ಮಾಡಿದ್ದೀನಿ. ಕಲ್ಯಾಣ್ ರಾಮ್ ಜೊತೆಯೂ ಕೆಲಸ ಮಾಡಿದ್ದೀನಿ. ಆದ್ರೆ ಇದೀಗ ಅವರು ನಮ್ಮನ್ನು ಬಿಟ್ಟು ಹೋಗಿದ್ದಾರೆ ಅನ್ನೋ ವಿಷಯ ಕೇಳಿ ಮನಸ್ಸಿಗೆ ತುಂಬಾ ನೋವಾಗುತ್ತಿದೆ. ಅಲ್ಲದೇ ಇಂದು ನಾನು ಬೆಳಗ್ಗೆ ಎದ್ದ ತಕ್ಷಣವೇ ಸುದ್ದಿ ಕೇಳಿ ನಿಜಕ್ಕೂ ಶಾಕ್ ಆಯಿತು ಅಂದ್ರು.

ntr harikrishna kalyan ram

ದೊಡ್ಡ ಫ್ಯಾಮಿಲಿ:
ರಾಮರಾವ್ ಅಂದ್ರೆ ಅವರದ್ದು ದೊಡ್ಡ ಕುಟುಂಬ. ಹರಿಕೃಷ್ಣ ಆಗಿರಲಿ ಅಥವಾ ಬಾಲಕೃಷ್ಣ ಆಗಿರಲಿ. ಅವರ ಜೊತೆ ಕೆಲಸ ಮಾಡಿದ್ದೀನಿ. ಹರಿಕೃಷ್ಣ ತುಂಬಾ ಒಳ್ಳೆಯ ಮನುಷ್ಯ. ಒಬ್ಬರನ್ನು ಹೆಸರು ಹಿಡಿದು ಕರೆದವರಲ್ಲ. ಎಲ್ಲರನ್ನೂ ಬ್ರದರ್ ಅಂತ ಕರೆದು ಅವರ ತಂದೆಯ ರೀತಿಯಲ್ಲೇ ಮಾತನಾಡಿಸುತ್ತಿದ್ದರು. ಆತ ಡ್ರೈವರೇ ಆಗಿರಲಿ ಅಥವಾ ದೊಡ್ಡ ಸ್ಟಾರೇ ಆಗಿರಲಿ. ಹರಿಕೃಷ್ಣ ಅವರಿಗೆ ಎಲ್ಲರೂ ಒಂದೇ. ಎಲ್ಲರ ಜೊತೆನೂ ಒಂದೇ ರೀತಿಯಲ್ಲಿ ವರ್ತಿಸುತ್ತಿದ್ದರು ಅಂತ ತಿಳಿಸಿದ್ರು.

ಒಳ್ಳೆಯ ವ್ಯಕ್ತಿತ್ವ ಹಾಗೂ ಶಿಸ್ತಿನ ಮನುಷ್ಯ. ಮೂಲತಃ ಅವರು ಒಬ್ಬ ಬೆಸ್ಟ್ ಕಾರ್ ಡ್ರೈವರ್ ಕೂಡ. ಈಗಲ್ಲ ಅವರ ತಂದೆ ಮೊದಲು ತೆಲುಗು ದೇಶಂ ಪಾರ್ಟಿ ಸ್ಥಾಪನೆ ಮಾಡುವಾಗ ಚೈತನ್ಯರಾಧಾ ಎಂಬ ಗಾಡಿಗೆ ಡ್ರೈವರ್ ಯಾರೂ ಇರಲಿಲ್ಲ. ಆವಾಗ ಆ ಗಾಡಿಯನ್ನು ಆಂಧ್ರಪ್ರದೇಶದಲ್ಲಿ ಓಡಿಸಿದ್ದು ಹರಿಕೃಷ್ಣ ಅವರೇ. ಹೀಗೆ ಕಾರು ಚಾಲನೆಯಲ್ಲೂ ನಿಪುಣನಾಗಿದ್ದ ಹರಿಕೃಷ್ಣ ಅವರಿಗೆ ಇಂದು ಈ ದುರಂತ ಸಂಭವಿಸಿರುವುದು ವಿಷಾದನೀಯ ಸಂಗತಿಯಾಗಿದೆ ಅಂತ ಹೇಳಿದ್ರು.

ಡ್ರೈವರ್ ಕಾರ್ ಓಡಿಸ್ತೀನಿ ಅಂದಾಗ ಬೇಡ ಅಂತ ಹೇಳಿ ಹರಿಕೃಷ್ಣ ಅವರೇ ಓಡಿಸಿದ್ದಾರಂತೆ. ಹೀಗಾಗಿ ಈ ರೀತಿ ಆಗಿದೆ. ಇಷ್ಟು ಮಾತ್ರವಲ್ಲದೇ ಸೀಟ್ ಬೆಲ್ಟ್ ಹಾಕಿಲ್ಲ. ಹಾಗೂ ಅತಿಯಾದ ವೇಗದ ಚಾಲನೆಯಿಂದ ಈ ಘಟನೆ ನಡೆದಿದೆ ಅಂತ ಕೇಳ್ಪಟ್ಟೆ. ಆದ್ರೆ ಇಂದು ಬೆಳಗ್ಗೆ ಈ ಸುದ್ದಿ ಬರುತ್ತೆ ಅಂತ ಅಂದುಕೊಂಡಿರಲಿಲ್ಲ. ಇಂತಹ ಒಂದು ಸಮಯದಲ್ಲಿ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಮಕ್ಕಳು ಕಲ್ಯಾಣ್, ಎನ್‍ಟಿಆರ್ ಹಾಗೆಯೇ ಅವರ ಕುಟುಂಬಸ್ಥರಿಗೆ ದುಃಖಭರಿಸುವ ಶಕ್ತಿ ನೀಡಲಿ ಅಂತ ದೇವರಲ್ಲಿ ಬೇಡಿಕೊಳ್ಳುತ್ತೇನೆ ಅಂದ್ರು.

2009ರಲ್ಲಿ ಜ್ಯೂನಿಯರ್ ಎನ್ ಟಿಆರ್ ಅವರು ಪ್ರಚಾರಕ್ಕೆ ಹೋಗುವಾಗ ನಲ್ಗೊಂಡದ ಅದೇ ಜಾಗದಲ್ಲಿ ಅಪಘಾತವಾಗಿತ್ತು. 4 ವರ್ಷದ ಹಿಂದೆ ಹರಿಕೃಷ್ಣ ಅವರ ದೊಡ್ಡ ಮಗ ಜಾನಕೀರಾಮ್ ಅವರು ಅದೇ ಪ್ರದೇಶಲ್ಲಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ರು. ಇಂದು ಹರಿಕೃಷ್ಣ ಅವರ ಕಾರ್ ಅಪಘಾತವೂ ಕೂಡ ಅದೇ ಜಾಗದಲ್ಲಾಗಿರುವುದು ವಿಚಿತ್ರ. ಹೀಗಾಗಿ ಏನೂ ಅರ್ಥವಾಗುತ್ತಿಲ್ಲ ಅಂತ ಅವರು ಬೇಸರ ವ್ಯಕ್ತಪಡಿಸಿದ್ರು.

ಕಾರ್ ಅಪಘಾತ:
ಆಂಧ್ರಪ್ರದೇಶ ಮಾಜಿ ಮುಖ್ಯಮಂತ್ರಿ, ನಟ ದಿವಂಗತ ನಂದಮೂರಿ ತಾರಕ ರಾಮಾರಾವ್ ಹಿರಿಯ ಪುತ್ರ ನಟ ನಂದಮೂರಿ ಹರಿಕೃಷ್ಣ ಅವರು ಚಲಿಸುತ್ತಿದ್ದ ಕಾರು ಇಂದು ತೆಲಂಗಾಣದ ನಲ್ಗೊಂಡ ಜಿಲ್ಲೆಯ ಅನ್ನೇಪರ್ತಿ ಬಳಿ ಅಪಘಾತಕ್ಕೀಡಾಗಿತ್ತು. ಅಪಘಾತದಲ್ಲಿ ಹರಿಕೃಷ್ಣ ಅವರಿಗೆ ಗಂಬೀರ ಗಾಯಗಳಾಗಿದ್ದು, ಕೂಡಲೇ ಅವರನ್ನು ಕಾಮಿನೇನಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ಹರಿಕೃಷ್ಣ ಅವರು ಅಭಿಮಾನಿಯ ಪುತ್ರನ ಮದುವೆಗೆ ತೆರಳುತ್ತಿದ್ದರು. ಬೆಳಗ್ಗೆ 4.30ರ ಸುಮಾರಿನಲ್ಲಿ ಹೈದರಾಬಾದ್ ನಿಂದ ಆಂಧ್ರಪ್ರದೇಶದ ನಲ್ಲೂರಿಗೆ ತಾವೇ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಹರಿಕೃಷ್ಣ ಅವರು ಬಾಲನಟನಾಗಿ ಹಾಗೂ ನಟನಾಗಿ 13 ಚಿತ್ರಗಳಲ್ಲಿ ನಟಿಸಿದ್ದು, ಶ್ರಾವಣಮಾಸಂ ಅವರ ಕೊನೆಯ ಚಿತ್ರವಾಗಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

harikrishna 1

Share This Article
Leave a Comment

Leave a Reply

Your email address will not be published. Required fields are marked *