ದಾವಣಗೆರೆ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಡೈಲಾಗ್‍ಗಳನ್ನು ಹರಳು ಹುರಿದಂತೆ ಪಟಪಟನೆ ಹೇಳುತ್ತಿದ್ದ ಜಿಲ್ಲೆಯ ಬಾಲಕನೊಬ್ಬ ವೈದ್ಯರ ನಿರ್ಲಕ್ಷ್ಯದಿಂದ ತನ್ನ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡು ನರಕಯಾತನೆ ಅನುಭವಿಸುವಂತಾಗಿದೆ.
ಹರಪನಹಳ್ಳಿ ತಾಲೂಕಿನ ಎಡೆಹಳ್ಳಿ ಗ್ರಾಮದ ಕೀರ್ತಿರಾಜ್ ವೈದ್ಯರ ನಿರ್ಲಕ್ಷ್ಯದಿಂದ ಕಾಲು ಕಳೆದುಕೊಂಡ ಬಾಲಕ. ಕುರುವತ್ತಪ್ಪ ಹಾಗೂ ನೇತ್ರಾ ದಂಪತಿಯ ಎರಡನೇ ಪುತ್ರ ಕೀರ್ತಿರಾಜ್. ಕೆಲವು ದಿನಗಳ ಹಿಂದೆ ಕೀರ್ತಿರಾಜ್‍ಗೆ ಎದೆ ನೋವು ಕಾಣಿಸಿಕೊಂಡಿದ್ದು, ಆತನನ್ನು ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಕರೆದೊಯ್ಯಲಾಗಿತ್ತು.
ವೈದ್ಯರು ಎಕ್ಸ್ ರೇ ತೆಗೆಸಿ, ಇಲ್ಲಿ ಕಾಯಿಲೆ ಸರಿ ಹೋಗುವುದಿಲ್ಲ. ಬದಲಾಗಿ ನೀವು ಮಂಗಳೂರಿಗೆ ಕರೆದುಕೊಂಡು ಹೋಗಿ ಎಂದು ಸಲಹೆ ನೀಡಿದ್ದರಂತೆ. ಮಗನನ್ನು ಉಳಿಸಿಕೊಳ್ಳಲು ಪೋಷಕರು ಮಂಗಳೂರಿನ ಎಜೆ ಆಸ್ಪತ್ರೆಗೆ ದಾಖಲಿಸಿದ್ದರು. ದಾವಣಗೆರೆ ಆಸ್ಪತ್ರೆ ವೈದ್ಯರು ನೀಡಿದ್ದ ದಾಖಲೆಗಳನ್ನು ನೋಡಿದ ವೈದ್ಯರು, ಬೆನ್ನಿನಲ್ಲಿ ನೀರು ತುಂಬಿಕೊಂಡಿದೆ. ಶಸ್ತ್ರ ಚಿಕಿತ್ಸೆ ಮೂಲಕ ನೀರನ್ನು ಹೊರತೆಗೆಯಬೇಕು ಎಂದು ಹೇಳಿದ್ದರಂತೆ.
ಶಸ್ತ್ರ ಚಿಕಿತ್ಸೆಗೂ ಮುನ್ನ ಆಟವಾಡಿಕೊಂಡು ನಗುತ್ತಿದ್ದ ಬಾಲಕ ಕೀರ್ತಿರಾಜ್, ಚಿಕಿತ್ಸೆಯ ಬಳಿಕ ತನ್ನ ಎರಡು ಕಾಲುಗಳ ಸ್ವಾದೀನ ಕಳೆದುಕೊಂಡಿದ್ದಾನೆ. ಈ ಕುರಿತು ಪರಿಶೀಲನೆ ನಡೆಸಿದಾಗ, ಚಿಕಿತ್ಸೆ ವೇಳೆ ವೈದ್ಯರು ಜೀವಕೋಶಗಳನ್ನು ತೆಗೆದಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಏಕೆ ಹೀಗೆ ಮಾಡಿದಿರಿ ಎಂದು ವೈದ್ಯರನ್ನ ಪ್ರಶ್ನೆ ಮಾಡಿದ್ದಕ್ಕೆ, ಪೋಷಕರ ಮೇಲೆ ದೌರ್ಜನ್ಯ ಮಾಡಿ ಅಲ್ಲಿಂದ ಹೊರ ಹಾಕಿದ್ದಾರಂತೆ.
ಚಿಕಿತ್ಸೆ ನೀಡಿ ಸುಮಾರು 11 ತಿಂಗಳಾದರೂ ಮಗನಿಗೆ ನಡೆದಾಡಲು ಸಾಧ್ಯವಾಗುತ್ತಿಲ್ಲ. ಕೀರ್ತಿರಾಜ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯಾಗಿದ್ದು, ಅವರಂತೆ ಪೊಲೀಸ್ ಪಾತ್ರ ಮಾಡುವಂತೆ, ನಿಜ ಜೀವನದಲ್ಲಿ ಪೊಲೀಸ್ ಆಗುವ ಬಯಕೆ ವ್ಯಕ್ತಪಡಿಸಿದ್ದಾನೆ. ನಟ ದರ್ಶನ್‍ನನ್ನು ಒಮ್ಮೆಯಾದರು ನೋಡಬೇಕು ಎನ್ನುವ ಆಸೆ ಈ ಮಗುವಿಗಿದೆ. ಆದರೆ ವೈದ್ಯರು ಮಾಡಿದ ತಪ್ಪಿಗೆ ಈಗ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದು. ಇಡೀ ಕುಟುಂಬವೇ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews