ಕಾರವಾರ: ಹಿಟ್ಟಿನ ಗಿರಣಿಯ ಮೆಷಿನ್ ಒಳಗೆ ತಲೆ ಸಿಲುಕಿ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮಿರ್ಜಾನ್ ನಲ್ಲಿ ನಡೆದಿದೆ.
ಮಾಲಿನಿ ನಾಯ್ಕ(30) ಮೃತ ದುರ್ದೈವಿ. ಇಂದು ಬೆಳಗ್ಗೆ ಈ ಘಟನೆ ಸಂಭವಿಸಿದ್ದು, ಇವರು ಮಿರ್ಜಾನ್ ನಲ್ಲಿ ಹಿಟ್ಟಿನ ಮೆಷಿನ್ ನಲ್ಲಿ ಕೆಲಸ ಮಾಡುತ್ತಿದ್ದರು. ಮೃತ ಮಾಲಿನಿ ನಾಯ್ಕ ಅವರು ಎಂದಿನಂತೆ ಇಂದು ಬೆಳಗ್ಗೆ ತನ್ನ ಮನೆಯಲ್ಲಿ ಹಿಟ್ಟಿನ ಗಿರಣಿಯಲ್ಲಿ ಹಿಟ್ಟು ಮಾಡಲು ಪುಡಿಯನ್ನು ಮೆಷಿನ್ ಒಳಗೆ ಹಾಕುತ್ತಿದ್ದರು. ಈ ವೇಳೆ ಮೆಷಿನ್ ನಲ್ಲಿದ್ದ ಬ್ಲೇಡುಗಳಿಗೆ ಮಾಲಿನಿ ಅವರ ತಲೆಕೂದಲು ಸಿಲುಕಿಕೊಂಡಿದೆ.
ತಕ್ಷಣ ಬಿಡಿಸಿಕೊಳ್ಳಲು ಸಾಧ್ಯವಾಗದೆ ಮಾಲಿನಿಯ ಅವರ ತಲೆಯು ಅದರೊಳಗೆ ಸೇರಿ ಜಜ್ಜಿಹೋಗಿದ್ದು, ತೀವ್ರ ರಕ್ತಸ್ರಾವದಿಂದಾಗಿ ಮೃತಪಟ್ಟಿದ್ದಾರೆ. ಮಿರ್ಜಾನ್ ನಲ್ಲಿ ಹಿಟ್ಟಿನ ಗಿರಣಿ ನಡೆಸುತ್ತಿದ್ದ ಮಾಲಿನಿ ನಾಯ್ಕ ಕಾರವಾರ ಮೂಲದ ಹಪ್ಪಳ ತಯಾರಿಕಾ ಕಂಪನಿಯವರಿಗೆ ಹಪ್ಪಳ ತಯಾರಿಸಿ ಕೂಡ ನೀಡುತ್ತಿದ್ದರು.
ಈ ಘಟನೆ ಸಂಬಂಧ ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews