ಟೀಂ ಇಂಡಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲೇ ಇಂಗ್ಲೆಂಡ್ ದಾಖಲೆ

Public TV
1 Min Read
ENGALND TEST

– ಐತಿಹಾಸಿಕ ಪಂದ್ಯದಲ್ಲಿ ರಾಹುಲ್‍ಗೆ ಸ್ಥಾನ

ಬರ್ಮಿಂಗ್‍ಹ್ಯಾಮ್: ಟೀಂ ಇಂಡಿಯಾ ವಿರುದ್ಧದ 5 ಪಂದ್ಯಗಳ ಟೆಸ್ಟ್ ಟೂರ್ನಿಯ ಮೊದಲ ಪಂದ್ಯವಾಡುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಒಂದು ಸಾವಿರ ಪಂದ್ಯಗಳನ್ನು ಆಡಿದ ಮೊದಲ ತಂಡ ಎಂಬ ಹೆಗ್ಗಳಿಕೆ ಇಂಗ್ಲೆಂಡ್ ಪಾತ್ರವಾಗಿದೆ.

ಈ ಐತಿಹಾಸಿಕ ಪಂದ್ಯಕ್ಕೆ ಇಂಗ್ಲೆಂಡ್ ನ ಬರ್ಮಿಂಗ್‍ಹ್ಯಾಮ್ ಕ್ರೀಡಾಂಗಣ ಸಾಕ್ಷಿಯಾಗಿದ್ದು, ಸಂತಸದಲ್ಲಿರುವ ಇಂಗ್ಲೆಂಡ್ ತಂಡದ ವಿರುದ್ಧ ವಿರಾಟ್ ಪಡೆ ಗೆಲುವಿನ ನಿರೀಕ್ಷೆಯಲ್ಲಿದೆ.

ಅಂದಹಾಗೇ ಇಂಗ್ಲೆಂಡ್ 1877 ರಲ್ಲಿ ಆಸ್ಟೇಲಿಯಾ ವಿರುದ್ಧ ಮೊದಲ ಪಂದ್ಯವನ್ನಾಡಿದ್ದು, ಈವರೆಗೂ ಹಲವು ದಾಖಲೆಗಳನ್ನು ನಿರ್ಮಿಸಿದೆ. ಇದುವರೆಗೂ ಇಂಗ್ಲೆಂಡ್ ಆಡಿರುವ ಪಂದ್ಯಗಳಲ್ಲಿ 357 ಪಂದ್ಯಗಳಲ್ಲಿ ಗೆಲುವು ಪಡೆದಿದ್ದು, 297 ಪಂದ್ಯಗಳಲ್ಲಿ ಸೋಲುಂಡಿದೆ. ಉಳಿದಂತೆ 345 ಪಂದ್ಯಗಳು ಡ್ರಾದಲ್ಲಿ ಅಂತ್ಯಕಂಡಿದೆ.

ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಟೀಂ ಇಂಡಿಯಾ ತನ್ನ ಈ ಹಿಂದಿನ ಇಂಗ್ಲೆಂಡ್ ವಿರುದ್ಧ ಪ್ರವಾಸಗಳಲ್ಲಿ ಹೆಚ್ಚು ಸೋಲುಂಡಿದೆ. 1932 ಜೂನ್ ನಲ್ಲಿ ಇಂಗ್ಲೆಂಡ್ ವಿರುದ್ಧ ಮೊದಲ ಪಂದ್ಯವನ್ನಾಡಿದ ಟೀಂ ಇಂಡಿಯಾ ಆಡಿರುವ 117 ಪಂದ್ಯಗಳಲ್ಲಿ 43 ರಲ್ಲಿ ಗೆಲುವು ಪಡೆದಿದ್ದು, 25 ರಲ್ಲಿ ಸೋಲುಂಡಿದೆ. ಇದರಲ್ಲಿ ಇಂಗ್ಲೆಂಡ್ ತವರು ನೆಲದಲ್ಲಿ 30 ಟೆಸ್ಟ್ ಪಂದ್ಯಗಳನ್ನು ಆಡಿರುವ ಟೀಂ ಇಂಡಿಯಾ 6 ಪಂದ್ಯಗಳಲ್ಲಿ ಗೆಲುವು, 21 ಪಂದ್ಯಗಳಲ್ಲಿ ಸೋಲುಂಡಿದೆ.

ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಟಾಸ್ ಜಯಗಳಿಸಿರುವ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಟೀಂ ಇಂಡಿಯಾ ಪರ ಅನುಭವಿ ಆಟಗಾರ ಚೇತೇಶ್ವರ ಪೂಜಾರ ಅವರನ್ನು ಆಡುವ 11 ಬಳಗದಿಂದ ಕೈಬಿಡಲಾಗಿದ್ದು, ಕೆಎಲ್ ರಾಹುಲ್ ಅವರಿಗೆ ಸ್ಥಾನ ನೀಡಲಾಗಿದೆ. ಉಳಿದಂತೆ ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಆಗಿದ್ದರೆ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಇಶಾಂತ್ ಶರ್ಮಾ ವೇಗದ ಬೌಲಿಂಗ್ ಜವಾಬ್ದಾರಿ ಹೊಂದಿದ್ದು, ಸ್ಪಿನ್ ಹೊಣೆಯನ್ನು ಅನುಭವಿ ಅಶ್ವಿನ್ ಪಡೆದಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *