ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರ-ವಿರೋಧ ಹೇಳಿಕೆ ನೀಡುವಲ್ಲಿ, ಕಾಗಿನೆಲೆ ಸ್ವಾಮೀಜಿ ಹಾಗೂ ಶಾಸಕ ಎಚ್.ವಿಶ್ವನಾಥ್ ಅವರ ನಡುವೆ ಭಾರೀ ವಾಗ್ದಾಳಿ ನಡೆದಿದ್ದು, ಸದ್ಯ ಇದನ್ನು ಶಮನಮಾಡಲು ಭಕ್ತರೇ ಮುಂದಾಗಿದ್ದಾರೆ.
ಕಾಗಿನೆಲೆ ನಿರಂಜನಾನಂದಪುರಿ ಶ್ರೀಗಳ ವಿರುದ್ಧ ಶಾಸಕ ಎಚ್.ವಿಶ್ವನಾಥ್ ನೀಡಿರುವ ಹೇಳಿಕೆಯಿಂದ ಎಚ್ಚೆತ್ತ ಕಾಗಿನೆಲೆ ಮಠದ ಭಕ್ತರು, ಇನ್ನೊಂದು ವಾರದಲ್ಲಿ ವಿಶ್ವನಾಥ್ ಹಾಗೂ ಕಾಗಿನೆಲೆ ಶ್ರೀಗಳನ್ನು ಭೇಟಿ ಮಾಡಿಸಲು ಮುಂದಾಗಿದ್ದಾರೆ.
ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ಭಕ್ತರು, ನಿಮ್ಮ ರಾಜಕೀಯ ಭಿನ್ನಾಭಿಪ್ರಾಯದಿಂದ ಶ್ರೀಗಳನ್ನು ಬೀದಿಗೆ ತರುವ ಕೆಲಸ ಮಾಡಬೇಡಿ. ವಿಶ್ವನಾಥ್ ಅವರನ್ನು ಶ್ರೀಗಳಿಗೆ ನೇರವಾಗಿ ಭೇಟಿ ಮಾಡಿಸಿ, ತಮ್ಮ ಅಸಮಾಧಾನಕ್ಕೆ ಕಾರಣ ಏನು ಎನ್ನುವುದನ್ನು ಚರ್ಚೆ ಮಾಡಿಸುತ್ತೇವೆ. ಅಷ್ಟೇ ಅಲ್ಲದೇ ಸಭೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಕರೆಸುವ ಪ್ರಯತ್ನ ಮಾಡುತ್ತೇವೆ ಎಂದರು.
ಕಾಗಿನೆಲೆ ಮಠ ಯಾವತ್ತು ವಿಶ್ವನಾಥ್ ಅವರಿಗೆ ಮೋಸ ಅಥವಾ ಅನ್ಯಾಯ ಮಾಡಿಲ್ಲ. ಸಿದ್ದರಾಮಯ್ಯ, ವಿಶ್ವನಾಥ್, ಈಶ್ವರಪ್ಪ, ಬಂಡೆಪ್ಪ ಕಾಶೇಂಪುರ್ ಅವರ ಬೆಂಬಲಕ್ಕೆ ಮಠ ಇದ್ದೆ ಇರುತ್ತದೆ. ಆದರೆ ವಿಶ್ವನಾಥ್ ಅವರು ಈ ರೀತಿ ಹೇಳಿಕೆ ನೀಡುತ್ತಿರುವುದು ಸೂಕ್ತವಲ್ಲ. ತಮಗಾಗಿರುವ ಅನ್ಯಾಯದ ಬಗ್ಗೆ ಮಠದಲ್ಲಿಯೇ ಚರ್ಚೆ ಮಾಡಬೇಕೇ ಹೊರತು ಶ್ರೀಗಳ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಬಾರದು ಎಂದು ಸೂಚಿಸಿದರು.